100 ದಿನದಲ್ಲಿ ಎತ್ತಿನಹೊಳೆಯಿಂದ ನಾಲೆಗೆ ನೀರು ಗ್ಯಾರಂಟಿ: ಡಿಕೆಶಿ
‘ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ ನೀರನ್ನು ಪಂಪ್ ಮಾಡಿ ನಾಲೆಗೆ ಹರಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಸನ (ಆ.23): ‘ಮುಂದಿನ 100 ದಿನಗಳ ಒಳಗಾಗಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯಲ್ಲಿ ನೀರನ್ನು ಪಂಪ್ ಮಾಡಿ ನಾಲೆಗೆ ಹರಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ಸಂಬಂಧ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಪವರ್ ಸ್ಟೇಷನ್ ಹಾಗೂ ದೊಡ್ಡನಾಗರ ಪಂಪ್‌ಹೌಸ್‌ಗೆ ಮಂಗಳವಾರ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಪಶ್ಚಿಮಘಟ್ಟದ ನದಿಗಳಲ್ಲಿ ಹರಿಯುವ ನೀರನ್ನು ಸಂಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರದವರೆಗೆ 24 ಟಿಎಂಸಿ ನೀರನ್ನು ಹರಿಸುವುದು ಯೋಜನೆಯ ಉದ್ದೇಶ. ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗಲೂ ನಾನು ಇಲ್ಲಿಗೆ ಭೇಟಿ ನೀಡಿದ್ದೆ. ಈಗ ಎರಡನೇ ಬಾರಿಗೆ ಬರುತ್ತಿದ್ದೇನೆ. ಆಗ ಕಾಮಗಾರಿ ಎಲ್ಲಿತ್ತೋ ಈಗಲೂ ಅಲ್ಲಿಯೇ ಇದೆ. ಈ ಯೋಜನೆಗಾಗಿ ಈವರೆಗೆ 14 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿದೆ. ಕಾಮಗಾರಿಯ ವೆಚ್ಚ ಹೆಚ್ಚಲು ಈ ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
2 ದಿನದಲ್ಲಿ ನೈಸ್ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್ ವಿರುದ್ಧ ಎಚ್ಡಿಕೆ ವಾಗ್ದಾಳಿ
ಯೋಜನೆಯ ಮೊದಲ ಹಂತದಲ್ಲಿ ಶೇ.88ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪವರ್ ಸ್ಟೇಷನ್ ಕಾಮಗಾರಿ ಪೂರ್ಣಗೊಂಡಿದ್ದು, ಟ್ರಯಲ್ ರನ್ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದೆ. ಎರಡನೇ ಹಂತದಲ್ಲಿ 261 ಕಿ.ಮೀ. ಕಾಲುವೆ ಪೈಕಿ 183 ಕಿ.ಮೀ. ದೂರದ ಕಾಲುವೆಯ ಕಾಮಗಾರಿ ಮುಕ್ತಾಯಗೊಂಡಿದೆ. ಯೋಜನೆಗಾಗಿ ಒಟ್ಟು 9,023 ಎಕರೆ ಭೂಮಿಯ ಅವಶ್ಯಕತೆ ಇದ್ದು, 5,454 ಎಕರೆ ಜಮೀನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಅರಣ್ಯ, ಕಂದಾಯ ಭೂಮಿ, ಭೂಮಾಲಿಕರ ಸಮಸ್ಯೆ ಸೇರಿದಂತೆ ಯೋಜನೆ ಜಾರಿಗೆ ಎದುರಾಗಿರುವ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ನೀಡಲಾಗುತ್ತಿದ್ದು, ಆದಷ್ಟುಬೇಗ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ.
ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಭೂಸ್ವಾಧೀನ: ಪರಿಹಾರ ನೀಡದಿದ್ದರೆ ನಮ್ ಭೂಮಿ ನಮ್ಗೇ
ಅರಣ್ಯ ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಒಪ್ಪಿದ್ದಾರೆ. ಕಂದಾಯ ಭೂಮಿ ಸ್ವಾಧೀನಕ್ಕೆ ಎದುರಾಗುವ ಸಮಸ್ಯೆ ನಿವಾರಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರ ಆಶ್ವಾಸನೆ ಮೇರೆಗೆ ಮುಂದಿನ 100 ದಿನಗಳ ಮಿತಿಯಲ್ಲಿ ಯೋಜನೆಯ ಮೊದಲ ಹಂತವಾಗಿ ನೀರನ್ನು ಪಂಪ್ ಮಾಡಿ ನಾಲೆಗೆ ಹರಿಸಲು ಕಾಲ ಮಿತಿ ನಿಗದಿಪಡಿಸಿದ್ದೇವೆ ಎಂದರು. ಎತ್ತಿನಹೊಳೆ ಯೋಜನೆ ಸಕ್ಸಸ್ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾವೆಲ್ಲಾ ಭರವಸೆಯಲ್ಲಿಯೇ ಬದುಕುತ್ತಿದ್ದೇವೆ ಎಂದರು. ಈ ಯೋಜನೆ ನಂತರ ಇನ್ನೊಂದು ಯೋಜನೆ ರೂಪಿಸುವ ಚಿಂತನೆಯಿದೆ. ಅದನ್ನು ಸದ್ಯಕ್ಕೆ ಬಹಿರಂಗಪಡಿಸಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.