ಬೆಂಗಳೂರು(ಜೂ.23): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತು ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ, ಬೆಂಗಳೂರಿನಲ್ಲಿ ತನ್ನ ಪತ್ನಿಯನ್ನು ಕೊಂದು ಬಳಿಕ ಕೊಲ್ಕತ್ತಾಗೆ ತೆರಳಿ ಅತ್ತೆಯನ್ನು ಗುಂಡಿಟ್ಟು ಹತ್ಯೆಗೈದು ಸೋಮವಾರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪಶ್ಚಿಮ ಬಂಗಾಳ ಮೂಲದ ಶಿಲ್ಪಿ (40) ಹಾಗೂ ಆಕೆಯ ತಾಯಿ ಲಲಿತಾ ದಂಧಾನಿಯಾ (70) ಹತ್ಯೆಯಾದ ದುರ್ದೈವಿಗಳು. ಈ ಕೃತ್ಯ ಎಸಗಿದ ಬಳಿಕ ಮೃತ ಶಿಲ್ಪಿಯ ಪತಿ ಅಮಿತ್‌ ಅಗರ್‌ವಾಲ್‌ (42) ಆತ್ಮಹತ್ಯೆ ಮಾಡಿಕೊಂಡಿದ್ದಾನೆ‡.

ಮಹದೇವಪುರದ ಸಮೀಪದ ಬ್ರಿಗೇಡ್‌ ಮೆಟ್ರೋ ಪೊಲಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಅಮಿತ್‌, ಭಾನುವಾರ ಪತ್ನಿಯನ್ನು ಕೊಂದು ಕೊಲ್ಕತಾಗೆ ತೆರಳಿದ. ಬಳಿಕ ಅತ್ತೆ ಜತೆ ಜಗಳವಾಡಿದ ಆತ, ಕೊನೆಗೆ ಆಕೆಯನ್ನು ಗುಂಡಿಟ್ಟು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್‌ ಕೊಡಿಸಿದಕ್ಕೆ ತಮ್ಮ ಆತ್ಮಹತ್ಯೆ

ಜಗಳ ಅಂದ ಆಪತ್ತು:

10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಶಿಲ್ಪಿ ಹಾಗೂ ಅಮಿತ್‌ ವಿವಾಹವಾಗಿದ್ದು, ಈ ದಂಪತಿಗೆ 8 ವರ್ಷದ ಮಗನಿದ್ದಾನೆ. ನಗರದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ದಂಪತಿ, ಮಹದೇವಪುರದ ಸಮೀಪದ ಮೆಟ್ರೋ ಪೊಲಿಸ್‌ ಅಪಾರ್ಟ್‌ಮೆಂಟ್‌ನ 5ನೇ ಹಂತದಲ್ಲಿ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಸತಿ-ಪತಿ ಮಧ್ಯೆ ಸದಾ ಕಾಲ ಜಗಳ ನಡೆದಿತ್ತು ಎಂದು ಮೂಲಗಳು ಹೇಳಿವೆ.

ಅಂತೆಯೇ ಶನಿವಾರ ರಾತ್ರಿ ಸಹ ದಂಪತಿ ಮಧ್ಯೆ ಗಲಾಟೆ ನಡೆದಿದೆ. ಇದರಿಂದ ಕೆರಳಿದ ಅಮಿತ್‌, ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಕೋಲ್ಕತಾಗೆ ತೆರಳಿದ್ದಾನೆ. ಆನಂತರ ಕೋಲ್ಕತಾದಲ್ಲಿನ ಲಲಿತಾ ಪೋಷಕರ ಮನೆಗೆ ಸೋಮವಾರ ಸಂಜೆ ತೆರಳಿದ ಅಮಿತ್‌, ಅತ್ತೆ-ಮಾವನ ಮೇಲೆ ಗಲಾಟೆ ಮಾಡಿದ್ದಾನೆ. ಈ ವೇಳೆ ಬಿರುಸಿನ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೋಪಗೊಂಡ ಅಮಿತ್‌, ಅತ್ತೆ ಮೇಲೆ ಗುಂಡು ಹಾರಿಸಿ ಕೊಂದು ಹೊರ ಬಂದಿದ್ದಾನೆ. ಆನಂತರ ತಾನು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಾರ: ಪ್ರೇಮ ವೈಫಲ್ಯ?,ಆತ್ಮಹತ್ಯೆಗೆ ಶರಣಾದ ಕೋಚಿಮುಲ್‌ ಉದ್ಯೋಗಿ

ಡೆತ್‌ ನೋಟ್‌ನಲ್ಲಿ ಪತ್ನಿ ಕೊಲೆ ಮಾಹಿತಿ

ಈ ಘಟನೆ ಬಗ್ಗೆ ತಿಳಿದು ಕೋಲ್ಕತಾ ಪೊಲೀಸರು, ತನಿಖೆ ನಡೆಸಿದಾಗ ಅಮಿತ್‌ ಬ್ಯಾಗಿನಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ಉಲ್ಲೇಖವಾಗಿದೆ. ಕೂಡಲೇ ಕೋಲ್ಕತಾ ಪೊಲೀಸರು, ಘಟನೆ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಮಹದೇವಪುರ ಠಾಣೆ ಪೊಲೀಸರು, ರಾತ್ರಿ 9 ಗಂಟೆಗೆ ಮೆಟ್ರೋ ಪೊಲಿಸ್‌ ಅಪಾರ್ಟ್‌ಮೆಂಟ್‌ಗೆ ತೆರಳಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.