ಬೆಂಗಳೂರು(ನ.21): ಭಾವಿ ಪತ್ನಿ ಜತೆ ಚಿನ್ನಾಭರಣ ಮಳಿಗೆಯಲ್ಲಿ ಚಿನ್ನ ಖರೀದಿದ ಬಳಿಕ ನೌಕರರ ಗಮನ ಬೇರೆಡೆ ಸೆಳೆದು ಪರಾರಿಯಾಗುತ್ತಿದ್ದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ ಜೆ.ಬಿ.ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರಾಘವೇಂದ್ರ ರಾವ್‌ (35) ಬಂಧಿತ. ಆರೋಪಿಯ ವಿಚಾರಣೆಯಿಂದ ಎರಡು ಪ್ರಕರಣ ಪತ್ತೆಯಾಗಿದ್ದು, 120 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ.10ರಂದು ಮುರುಗೇಶ್‌ಪಾಳ್ಯದ ನವರತ್ನ ಜ್ಯುವೆಲ್ಸ್‌ ಪ್ಯಾಲೇಸ್‌ನಲ್ಲಿ ಭಾವಿ ಪತ್ನಿ ಜತೆ ತೆರಳಿ, ಚಿನ್ನದ ಸರ ಲಪಟಾಯಿಸಿದ್ದ.

ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಿದ್ದ ರಾಘವೇಂದ್ರನಿಗೆ, ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಆರ್ಥಿಕ ಸಂಕಷ್ಟದಿಂದ ಕಳ್ಳತನಕ್ಕೆ ಇಳಿದಿದ್ದ. ಈತನ ಬಂಧನದಿಂದ ಹೆಣ್ಣೂರಿನಲ್ಲಿ ನಡೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಟ್ಟೆ ವ್ಯಾಪಾರಿಯಿಂದ 37 ಲಕ್ಷ ರು. ಸುಲಿಗೆ ಮಾಡಿದ್ದವನ ಬಂಧನ

ನ.10ರಂದು ಮಧ್ಯಾಹ್ನ 3 ಗಂಟೆಯಲ್ಲಿ ಮುರುಗೇಶ್‌ಪಾಳ್ಯದ ಚರ್ಚ್‌ಸ್ಟ್ರೀಟ್‌ನಲ್ಲಿರುವ ನವರತ್ನ ಜ್ಯುವೆಲ್ಸ್‌ ಪ್ಯಾಲೇಸ್‌ಗೆ ಆರೋಪಿ ಭಾವಿ ಪತ್ನಿ ಜತೆ ಭೇಟಿ ನೀಡಿದ್ದ. ಚಿನ್ನದ ಸರ ತೋರಿಸುವಂತೆ ಮಳಿಗೆ ಸಿಬ್ಬಂದಿಗೆ ಕೇಳಿದ್ದರು. ಸಿಬ್ಬಂದಿ, 40 ಗ್ರಾಂ ಮತ್ತು 16 ಗ್ರಾಂನ ಎರಡು ಸರ ಯುವತಿಗೆ ಕೊಟ್ಟಿದ್ದರು. ಆಕೆ ಒಮ್ಮೆ ಕೊರಳಿನಲ್ಲಿ ಹಾಕಿಕೊಂಡು ನೋಡುವುದಾಗಿ ಹೇಳಿದ್ದಳು. ಈ ವೇಳೆಗೆ ಮಳಿಗೆಯಿಂದ ಹೊರಬಂದು ರಾಘವೇಂದ್ರನ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ರಾಘವೇಂದ್ರ ಈ ಹಿಂದೆ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡಿದ್ದ. ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ. ಹೀಗಾಗಿ, ಯುವತಿ ಜೊತೆಗೂಡಿ ಕೃತ್ಯದಲ್ಲಿ ತೊಡಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇತನ ಬಂಧನದಿಂದ ಹೆಣ್ಣೂರಿನಲ್ಲಿ ನಡೆದಿದ್ದ ಪ್ರಕರಣವೊಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.