Asianet Suvarna News Asianet Suvarna News

ಶಿಕ್ಷಕರ ನೇಮಕಾತಿ ಹಗರಣ: ಮತ್ತೆ 38 ಶಿಕ್ಷಕರು ಅರೆಸ್ಟ್‌

ಹಿಂದಿನ 2012-13 ಹಾಗೂ 2014-15 ಸಾಲಿನ ಶಿಕ್ಷಕರ ಅಕ್ರಮ ನೇಮಕಾತಿ ಹಗರಣ ಸಂಬಂಧ ಬುಧವಾರ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ), ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ 38 ಶಿಕ್ಷಕರನ್ನು ಸೆರೆ ಹಿಡಿದಿದೆ.

teachers illegal recruitment case raids across the state 38 teachers arrested gvd
Author
First Published Oct 20, 2022, 5:26 AM IST

ಬೆಂಗಳೂರು (ಅ.20): ಹಿಂದಿನ 2012-13 ಹಾಗೂ 2014-15 ಸಾಲಿನ ಶಿಕ್ಷಕರ ಅಕ್ರಮ ನೇಮಕಾತಿ ಹಗರಣ ಸಂಬಂಧ ಬುಧವಾರ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ), ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ 38 ಶಿಕ್ಷಕರನ್ನು ಸೆರೆ ಹಿಡಿದಿದೆ.

ಕೋಲಾರದಲ್ಲಿ 24, ಬೆಂಗಳೂರು ದಕ್ಷಿಣ 6, ಚಿಕ್ಕಬಳ್ಳಾಪುರ 3 ಹಾಗೂ ಚಿತ್ರದುರ್ಗ 5 ಸೇರಿ 38 ಶಿಕ್ಷಕರು ಬಂಧಿತರಾಗಿದ್ದು, ಇನ್ನು ಕೆಲವು ಶಿಕ್ಷಕರು ಹಾಗೂ ಅಧಿಕಾರಿಗಳ ಪತ್ತೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆದಿದೆ. ಬಂಧಿತರ ಪೈಕಿ 7 ಮಂದಿ ಮಹಿಳಾ ಶಿಕ್ಷಕರಿದ್ದಾರೆ. ಇವರ ಮೇಲೆ ಹಣ ನೀಡಿ ಶಿಕ್ಷಕ ಹುದ್ದೆ ಗಿಟ್ಟಿಸಿದ ಆರೋಪವಿದೆ. ಕೋಲಾರದ ಕೆಜಿಎಫ್‌ ಮತ್ತು ಬಂಗಾರಪೇಟೆ ತಾಲೂಕಿನಲ್ಲಿ ಒಟ್ಟು 12, ಮುಳಬಾಗಿಲಿನಲ್ಲಿ 5, ಶ್ರೀನಿವಾಸಪುರದಲ್ಲಿ 6 ಹಾಗೂ ಮಾಲೂರಿನಲ್ಲಿ 2 ಶಿಕ್ಷಕರನ್ನು ಬಂಧಿಸಲಾಗಿದೆ.

ಕೆಪಿಟಿಸಿಎಲ್‌ ಕೇಸಲ್ಲಿ ಬೇಲ್‌ ಪಡೆದು ಹೊರಬಂದವ ಪಿಎಸ್‌ಐ ಕೇಸಲ್ಲಿ ಸೆರೆ!

ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡಿದ ವರದಿ ಆಧರಿಸಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಕೆ.ವಿ.ಶರತ್‌ಚಂದ್ರ ಮಾರ್ಗದರ್ಶನದಲ್ಲಿ ಎಸ್ಪಿ ರಮೇಶ್‌ ಬಾನೋತ್‌ ನೇತೃತ್ವದಲ್ಲಿ 18 ಡಿವೈಎಸ್ಪಿಗಳು ಹಾಗೂ 14 ಇನ್ಸ್‌ಪೆಕ್ಟರ್‌ಗಳು ಏಕಕಾಲಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಶಿಕ್ಷಕರನ್ನು ಗುರುವಾರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2012-13 ಹಾಗೂ 2014-15 ಸಾಲಿನ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪೊಲೀಸರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ವಿಧಾನಸೌಧ ಹಾಗೂ ಹಲಸೂರು ಗೇಟ್‌ ಪೊಲೀಸ್‌ ಠಾಣಗಳಲ್ಲಿ ಪ್ರತ್ಯೇಕ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. 

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಅಧಿಕಾರಿಗಳು, ಇದುವರೆಗೆ 7 ಮಂದಿ ಜಂಟಿ ನಿರ್ದೇಶಕರು (ಜೆಡಿ) ಹಾಗೂ ಶಿಕ್ಷಕರು ಸೇರಿದಂತೆ 22 ಮಂದಿಯನ್ನು ಬಂಧಿಸಿದ್ದರು. ಈ ಅಕ್ರಮದ ಜಾಲವು ಎಲ್ಲ ಜಿಲ್ಲೆಗಳಲ್ಲಿ ವ್ಯಾಪಿಸಿದೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದರು. ಅಂತೆಯೇ ಆಯಾ ಜಿಲ್ಲೆಗಳಲ್ಲಿ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹ ನೇಮಕಾತಿ ಭಾನಗಡಿ ನಡೆದಿದೆ ಎಂದು ಸಿಐಡಿ ವರದಿ ಸಲ್ಲಿಸಿದರು. ಈ ವರದಿ ಆಧರಿಸಿ ಆರೋಪಿಗಳಿಗೆ ಸಿಐಡಿ ಬಲೆ ಹಾಕಿದೆ.

ಏಕಕಾಲಕ್ಕೆ ದಾಳಿ ರೂಪಿಸಿದ ಎಡಿಜಿಪಿ: ಶಿಕ್ಷಕರ ನೇಮಕಾತಿ ಅಕ್ರಮ ಜಾಲದ ಮಾಹಿತಿ ಪಡೆದ ಎಡಿಜಿಪಿ ಶರತ್‌ ಚಂದ್ರ ಅವರು, ಒಂದೇ ಬಾರಿಗೆ ದಾಳಿ ನಡೆಸಿ ಶಿಕ್ಷಕರು ಶಾಲೆಗೆ ಬಂದಾಗಲೇ ಸೆರೆ ಹಿಡಿಯಲು ಯೋಜಿಸಿದರು. ಆದರೆ ಈ ದಾಳಿ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ ಅಧಿಕಾರಿಗಳು, ಸೋಮವಾರ ಬೆಳಗ್ಗೆ ತನಿಖಾಧಿಕಾರಿಗಳನ್ನು ಮಾತ್ರ ಸಭೆಗೆ ಕರೆದು ಕಾರ್ಯಾಚರಣೆ ರೂಪುರೇಷೆ ಸಿದ್ಧಪಡಿಸಿ 18 ಡಿವೈಎಸ್ಪಿಗಳ ಹಾಗೂ 14 ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ 30 ವಿಶೇಷ ತಂಡಗಳನ್ನು ರಚಿಸಿದರು. ಪೂರ್ವಯೋಜಿತದಂತೆ ಬುಧವಾರ ಬೆಳಗ್ಗೆ 10 ಗಂಟೆಗೆ ಒಂದೇ ಬಾರಿಗೆ ನಾಲ್ಕು ಜಿಲ್ಲೆಗಳ ವ್ಯಾಪ್ತಿ 51 ಸ್ಥಳಗಳಲ್ಲಿ ಸಿಐಡಿ ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಿಕ್ಷಕರ ನೇಮಕ ಅಕ್ರಮದಲ್ಲಿ ಶೀಘ್ರ ಇನ್ನಷ್ಟು ಬಂಧನ: ಸಚಿವ ನಾಗೇಶ್‌

ಪ್ರಸಾದ್‌ ಹೇಳಿಕೆ ಸಂಕಟ: ಈ ಪ್ರಕರಣದಲ್ಲಿ ಬಂಧಿತನಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಪ್ರಸಾದ್‌ ವಿಚಾರಣೆ ವೇಳೆ ನೀಡಿರುವ ಮಾಹಿತಿ ಶಿಕ್ಷಕರು ಹಾಗೂ ಕೆಲ ಅಧಿಕಾರಿಗಳ ಪಾಲಿಗೆ ಕಂಟಕವಾಗಿದೆ. ಅಕ್ರಮದಲ್ಲಿ ಪ್ರಮುಖ ಪಾತ್ರವಹಿಸಿರುವ ಪ್ರಸಾದ್‌, ತನಗೆ ಹಣ ಕೊಟ್ಟು ಶಿಕ್ಷಕ ಹುದ್ದೆ ಪಡೆದವರ ಪಟ್ಟಿಯನ್ನು ಸಿಐಡಿ ಮುಂದೆ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಆಧರಿಸಿ ಸಿಐಡಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios