ಶಿಕ್ಷಕರ ನೇಮಕ ಅಕ್ರಮದಲ್ಲಿ ಶೀಘ್ರ ಇನ್ನಷ್ಟು ಬಂಧನ: ಸಚಿವ ನಾಗೇಶ್
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿದ್ದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈವರೆಗೂ 16 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರು (ಸೆ.22): ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿದ್ದ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈವರೆಗೂ 16 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ನಮಗೆ ಈ ವಿಚಾರ ಗೊತ್ತಾದ ತಕ್ಷಣ ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ನಡೆಸಿದ್ದಾಗ ಅಕ್ರಮ ನೇಮಕಾತಿ ಆಗಿರುವ ಬಗ್ಗೆ ಗೊತ್ತಾಯಿತು.
2015-16 ರಲ್ಲಿ ಅಹರ್ತತೆ ಇಲ್ಲದವರು ಸಹ ಶಿಕ್ಷಕರ ಹುದ್ದೆಗೆ ನೇಮಕವಾಗಿರುವುದು ಕಂಡು ಬಂತು. ನಂತರ ಇದನ್ನು ಸಿಐಡಿ ತನಿಖೆಗೆ ಕೊಡಲಾಯಿತು. ಸಿಐಡಿ ಅಧಿಕಾರಿಗಳು 16 ಮಂದಿಯನ್ನು ಬಂಧಿಸಿದ್ದಾರೆ. ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಪ್ರಸಾದ್‌ನನ್ನು ಬಂಧಿಸಿದ್ದಾರೆ ಎಂದರು. ಅಕ್ರಮವಾಗಿ ನೇಮಕವಾದವರೂ ಇನ್ನೂ ಅನೇಕರು ಇರಬಹುದು ಎಂದು ಅನುಮಾನವನ್ನು ಸಿಐಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿ ಮತ್ತಷ್ಟುಮಂದಿಯನ್ನು ಬಂಧಿಸಲಿದ್ದಾರೆ ಎಂದು ಹೇಳಿದರು.
ಶಾಲೆಗಳಲ್ಲಿ ಡಿಸೆಂಬರ್‌ನಿಂದ ಭಗವದ್ಗೀತೆ ಪಾಠ: ಸಚಿವ ನಾಗೇಶ್
ವಿಜಯಪುರದಲ್ಲಿ ಓರ್ವ ಸೆರೆ: ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಮೂಲದ ಮತ್ತೊಬ್ಬ ಶಿಕ್ಷಕನನ್ನು ಸಿಒಡಿ ಪೊಲೀಸರು ಬಂಧಿಸಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಜಿಲ್ಲೆಯ ಮೂವರು ಶಿಕ್ಷಕರನ್ನು ಬಂಧಿಸಿದಂತಾಗಿದೆ. ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ ಚವ್ಹಾಣ ಎಂಬಾತ ಬಂಧಿತ ಆರೋಪಿಯಾಗಿದ್ದು, 2012-14ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪ ಈ ಶಿಕ್ಷಕನ ಮೇಲಿದೆ. ಸೂಕ್ತ ಮಾಹಿತಿ ಕಲೆ ಹಾಕಿದ ಸಿಒಡಿ ಪೊಲೀಸರು ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡು ಶಿಕ್ಷಕ ಚವ್ಹಾಣನನ್ನು ಬಂಧಿಸಿದ್ದಾರೆ.
ಶಿಕ್ಷಕ ಚವ್ಹಾಣ ಈ ಮೊದಲು ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ. ವರ್ಗಾವಣೆಗೊಂಡು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬಂದಿದ್ದ. ವಿಜ್ಞಾನ ಶಿಕ್ಷಕನಾಗಿ ಚವ್ಹಾಣ ಸೇವೆ ಸಲ್ಲಿಸುತ್ತಿದ್ದ. ಅಕ್ರಮ ಶಿಕ್ಷಕ ನೇಮಕಾತಿ ಪ್ರಕರಣದಲ್ಲಿ ಬಂಧಿತ ಶಿಕ್ಷಕರಲ್ಲಿ ಚವ್ಹಾಣ ಮೂರನೇ ವ್ಯಕ್ತಿ. ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮಹೇಶ ಸೂಸಲಾದಿ ಹಾಗೂ ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಿದ್ರಾಮಪ್ಪ ಬಿರಾದಾರ ಅವರನ್ನು ಈ ಮೊದಲೇ ಅಕ್ರಮ ಶಿಕ್ಷಕರ ಹಗರಣದಲ್ಲಿ ಬಂಧಿಸಲಾಗಿದೆ.
ಶಿಕ್ಷಕ ಅಶೋಕ ಚವ್ಹಾಣನನ್ನು ಕಲಬುರಗಿ ಸಿಒಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಸಿಒಡಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ಶಿಕ್ಷಕ ಚವ್ಹಾಣ ಬಂಧನವಾಗಿದೆ. ಆನಂತರ ಬೆಂಗಳೂರು ಸಿಒಡಿ ಅಧಿಕಾರಿಗಳಿಗೆ ಶಿಕ್ಷಕ ಅಶೋಕ ಚವ್ಹಾಣ ಅವರನ್ನು ಹಸ್ತಾಂತರಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಶಿಕ್ಷಕ ಚವ್ಹಾಣನನ್ನು ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2030ರೊಳಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಾಧ್ಯತೆ: ಬಿ.ಸಿ. ನಾಗೇಶ್
ಅಕ್ರಮ ಶಿಕ್ಷಕರ ನೇಮಕಾತಿ ಹಗರಣದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಅಶೋಕ ಚವ್ಹಾಣ ಅವರನ್ನು ಸಿಒಡಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಶಿಕ್ಷಕ ಬೆಂಗಳೂರಿನ ಸಿಒಡಿ ಕಸ್ಟಡಿಯಲ್ಲಿದ್ದಾರೆ. ಸಿಒಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ ತಕ್ಷಣ ಶಿಕ್ಷಕ ಚವ್ಹಾಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು. ಇದೇ ಹಗರಣದಲ್ಲಿ ಬಂಧಿತರಾಗಿರುವ ಇಬ್ಬರು ಶಿಕ್ಷಕರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ.
- ಉಮೇಶ ಶಿರಹಟ್ಟಿಮಠ, ಡಿಡಿಪಿಐ, ವಿಜಯಪುರ