ಘಟನೆ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಕರ್ತವ್ಯ ಲೋಪದ ಹಿನ್ನೆಲೆ 10 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಚೆನ್ನೈ (ಮೇ 16,2023): ತಮಿಳುನಾಡಿನಲ್ಲಿ ಭಾನುವಾರ ಸಂಭವಿಸಿದ ಎರಡು ಪ್ರತ್ಯೇಕ ಕಟ್ಟಬಳ್ಳಿ ದುರಂತದಲ್ಲಿ 14 ಜನರು ಮೃತಪಟ್ಟಿದ್ದು, 25 ಜನರು ಅಸ್ವಸ್ಥಗೊಂಡಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಮರಕ್ಕಂನಲ್ಲಿ 9 ಮತ್ತು ಚೆಂಗಲ್ಪಟ್ಟು ಜಿಲ್ಲೆಯ ಮದುರಾಂತಕಂನಲ್ಲಿ 5 ಜನರು ಕಳ್ಳಬಟ್ಟಿ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಕರ್ತವ್ಯ ಲೋಪದ ಹಿನ್ನೆಲೆ 10 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಹಾಗೂ ಆಸ್ಪತ್ರೆಗೆ ದಾಖಲಾಗಿರುವವರಿಗೆ ತಲಾ 50,000 ರೂ ಪರಿಹಾರ ಘೋಷಣೆ ಮಾಡಿದೆ.
ಇದನ್ನು ಓದಿ: ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್
ಚೆಂಗಲ್ಪಟ್ಟು ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ಎರಡು ನಕಲಿ ಮದ್ಯದ ಘಟನೆಗಳು ವರದಿಯಾಗಿದ್ದು, ವಿಲ್ಲುಪುರಂ ಜಿಲ್ಲೆಯಲ್ಲಿ ಆರು ಮಂದಿ ವಾಂತಿ, ಕಣ್ಣು ಉರಿ ಮತ್ತು ತಲೆತಿರುಗುವಿಕೆಯ ದೂರುಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಹಲವರು ಮೃತಪಟ್ಟಿದ್ದಾರೆ ಹಾಗೂ ಇನ್ನು ಕೆಲವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿ ಅಮರನ್‌ನನ್ನು ಬಂಧಿಸಲಾಗಿದ್ದು, ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಲಯದ ಐಜಿ ಎನ್. ಕಣ್ಣನ್ ಸೋಮವಾರ ಮಾಹಿತಿ ನೀಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಬಲಿಪಶುಗಳು ಪ್ರಾಥಮಿಕವಾಗಿ ನಕಲಿ ಮದ್ಯವನ್ನು ಸೇವಿಸಿದ ಮೀನುಗಾರರು ಎಂದು ವಿಲ್ಲುಪುರಂ ಜಿಲ್ಲಾಧಿಕಾರಿ ಸಿ. ಪಳನಿ ಹೇಳಿದ್ದಾರೆ. ಶನಿವಾರದಂದು ಅವರು ಅನಾರೋಗ್ಯ ಅನುಭವಿಸಿದ ನಂತರ ಅವರನ್ನು ನೆರೆಯ ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ (JIPMER) ಮತ್ತು ಪಾಂಡಿಚೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಗೆ ರವಾನಿಸಲಾಯಿತು.
ಇದನ್ನೂ ಓದಿ: ಛತ್ತೀಸ್‌ಗಢ: 2000 ಕೋಟಿ ರೂ. ಮದ್ಯ ಹಗರಣ ಪತ್ತೆಹಚ್ಚಿದ ಇಡಿ: 'ಕೈ' ನಾಯಕನ ಸೋದರ, ಐಎಎಸ್ ಅಧಿಕಾರಿ ಕೈವಾಡ
ಎರಡೂ ಜಿಲ್ಲೆಗಳಲ್ಲಿ 51 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಆರೈಕೆಯಲ್ಲಿರುವವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆರೋಪಿಗಳು ಮಾರಣಾಂತಿಕ ಕೈಗಾರಿಕಾ ಮೆಥನಾಲ್ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. "ದುಷ್ಕರ್ಮಿಗಳು ಅಕ್ರಮ ಮದ್ಯ ತಯಾರಿಸಲು ಕೈಗಾರಿಕಾ ಮೆಥೆನಾಲ್ ಅನ್ನು ಬಳಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂಬಂಧಪಟ್ಟವರನ್ನು ಬಂಧಿಸಲಾಗಿದೆ. ನಾವು ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ" ಎಂದೂ ಅವರು ಹೇಳಿದರು.
ವಿಲ್ಲುಪುರಂ ಎಸ್ಪಿ ಮತ್ತು ಇಬ್ಬರು ಡಿಎಸ್ಪಿಗಳು ಸೇರಿದಂತೆ 10 ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ಹಾಗೂ, ಚೆಂಗಲ್ಪಟ್ಟು ಪೊಲೀಸ್ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಇನ್ನು, ತನಿಖೆಯನ್ನು ಅಪರಾಧ ವಿಭಾಗದ ಸಿಐಡಿಗೆ ವರ್ಗಾಯಿಸಲಾಗಿದೆ.
ಈ ಘಟನೆ ಹಿನ್ನೆಲೆ ತಮಿಳುನಾಡು ರಾಜ್ಯ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಆಡಳಿತಾರೂಢ ಡಿಎಂಕೆಯನ್ನು ಅಸಮರ್ಥ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದೂ ಪಳನಿಸ್ವಾಮಿ ಆಗ್ರಹಿಸಿದ್ದಾರೆ.
ಇನ್ನೊಂದೆಡೆ "ತಮಿಳುನಾಡಿನಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷ ಜನರು ಮದ್ಯಪಾನದಿಂದ ಸಾಯುತ್ತಾರೆ, ಯಾರೂ ಈ ಬಗ್ಗೆ ಮಾತನಾಡುವುದಿಲ್ಲ, ನಾವು ಈ 14 ಜನರ ಸಾವಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ನಾವು ಸಂಪೂರ್ಣ ನಿಷೇಧವನ್ನು ಬಯಸುತ್ತೇವೆ" ಎಂದು ಪಿಎಂಕೆ ಮುಖ್ಯಸ್ಥ ಡಾ ಅನ್ಬುಮಣಿ ರಾಮದಾಸ್ ಹೇಳಿದ್ದಾರೆ.
ದುರಂತದ ನಂತರದ ಕಾರ್ಯಾಚರಣೆಯಲ್ಲಿ, 400 ಕ್ಕೂ ಹೆಚ್ಚು ಶಂಕಿತ ಕಳ್ಳಬಟ್ಟಿ ತಯಾರಿಸುವವರನ್ನು ಬಂಧಿಸಲಾಗಿದೆ. ಆಡಳಿತ ಪಕ್ಷವು ಹಂತ ಹಂತದ ನಿಷೇಧದ ಭರವಸೆ ನೀಡಿದ್ದರೂ, ಡಿಎಂಕೆ ಸರ್ಕಾರವು ಇತ್ತೀಚೆಗೆ ಅಂಗಡಿಗಳಲ್ಲಿ ಸ್ವಯಂಚಾಲಿತ ಮದ್ಯ ಮಾರಾಟ ಯಂತ್ರಗಳನ್ನು ಪ್ರಾರಂಭಿಸಲು ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮದ್ಯವನ್ನು ಅನುಮತಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಆದರೆ, ಈ ಕ್ರಮವನ್ನು ನ್ಯಾಯಾಲಯವು ಈಗಾಗಲೇ ತಡೆಹಿಡಿಯಲಾಗಿದೆ.
