ಛತ್ತೀಸ್‌ಗಢ: 2000 ಕೋಟಿ ರೂ. ಮದ್ಯ ಹಗರಣ ಪತ್ತೆಹಚ್ಚಿದ ಇಡಿ: 'ಕೈ' ನಾಯಕನ ಸೋದರ, ಐಎಎಸ್‌ ಅಧಿಕಾರಿ ಕೈವಾಡ

ಈ ಇಬ್ಬರೂ ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ರಾಜ್ಯದಲ್ಲಿ ಚುನಾವಣೆ ವೆಚ್ಚಕ್ಕೂ ಬಳಸಲಾಗಿತ್ತು. ಇದರಲ್ಲಿ ಸಾಕಷ್ಟು ಜನ ಪಾಲು ಹಂಚಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 

ed busts rs 2 000 cr liquor scam in chhattisgarh alleges politician bureaucrat nexus ash

ನವದೆಹಲಿ (ಮೇ 8, 2023): ಛತ್ತೀಸ್‌ಗಢದ ಕಾಂಗ್ರೆಸ್‌ ನಾಯಕರೊಬ್ಬರ ಸೋದರ ಮತ್ತು ಹಿರಿಯ ಐಎಎಸ್‌ ಅಧಿಕಾರಿ ಸೇರಿಕೊಂಡು ಮದ್ಯ ಮಾರಾಟದಲ್ಲಿ ಭಾರಿ ಅಕ್ರಮ ಎಸಗುವ ಮೂಲಕ ರಾಜ್ಯದ ಬೊಕ್ಕಸಕ್ಕೆ 4 ವರ್ಷಗಳಲ್ಲಿ 2000 ಕೋಟಿ ರೂ ವಂಚಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐಎಎಸ್‌ ಅಧಿಕಾರಿ ಅನಿಲ್‌ ಟುಟೇಜ್‌ ಎಂಬಾತನನ್ನು ಈ ಹಿಂದೆಯೇ ಬಂಧಿಸಿದ್ದ ಜಾರಿ ನಿರ್ದೇಶನಾಲಯ, ಇದೀಗ ಅನ್ವರ್‌ ಧೇಬರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಇಬ್ಬರೂ ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ರಾಜ್ಯದಲ್ಲಿ ಚುನಾವಣೆ ವೆಚ್ಚಕ್ಕೂ ಬಳಸಲಾಗಿತ್ತು. ಇದರಲ್ಲಿ ಸಾಕಷ್ಟು ಜನ ಪಾಲು ಹಂಚಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿರುವ ಕಾರಣ, ಮುಂದಿನ ದಿನಗಳಲ್ಲಿ ಈ ಹಗರಣ ಇನ್ನಷ್ಟು ರಾಜಕೀಯ ನಾಯಕರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

ಇದನ್ನು ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

ಏನಿದು ಹಗರಣ?:
ಛತ್ತೀಸ್‌ಗಢದಲ್ಲಿ ಖಾಸಗಿ ಮದ್ಯದಂಗಡಿಗೆ ಅನುಮತಿ ಇಲ್ಲ. ಇರುವ 800 ಅಂಗಡಿಗಳು ಸರ್ಕಾರದ ಸಿಎಸ್‌ಎಂಸಿಎಲ್‌ ನಿಗಮಕ್ಕೆ ಸೇರಿವೆ. ಈ ನಿಗಮ ಮಾತ್ರ ಮದ್ಯ ಮಾರಾಟದ ಉಸ್ತುವಾರಿ ಹೊಂದಿದೆ. ಆದರೆ ಈ ಅಂಗಡಿಗಳಲ್ಲಿ ಅಧಿಕೃತದ ಮದ್ಯದ ಜತೆಗೆ ದೇಶೀ ನಿರ್ಮಿತ ಅಕ್ರಮ ಮದ್ಯವನ್ನು ಅನ್ವರ್‌ ಧೇಬರ್‌ ಮಾರಾಟ ಮಾಡಿಸಿದ್ದಾನೆ. ಈ ರೀತಿ ಮಾರಾಟವಾದ ಮದ್ಯದಲ್ಲಿ 1 ರೂ. ಕೂಡ ರಾಜ್ಯದ ಖಜಾನೆಗೆ ಹೋಗಿಲ್ಲ. ಸಂಪೂರ್ಣ ಆದಾಯವನ್ನು ಧೇಬರ್‌ನ ಜಾಲವೇ ಪಡೆದಿದೆ. 2019ರಿಂದ 2022ರ ನಡುವೆ, ಈ ರೀತಿಯ ಅಕ್ರಮ ಮಾರಾಟವು ರಾಜ್ಯದಲ್ಲಿನ ಒಟ್ಟು ಮದ್ಯದ ಮಾರಾಟದ ಶೇ.30-40ರ ಷ್ಟಿತ್ತು ಮತ್ತು 1,200 - 1,500 ಕೋಟಿ ರೂ. ಅಕ್ರಮ ಲಾಭವನ್ನು ಗಳಿಸಿದೆ ಎಂದು ತನಿಖೆ ವೇಳೆ ಕಂಡುಬಂದಿದೆ.

ಇದರ ಜೊತೆಗೆ, ಮಳಿಗೆಗಳಿಗೆ ಅಧಿಕೃತವಾಗಿ ಮದ್ಯ ಸರಬರಾಜು ಮಾಡುವ ಸಂಸ್ಥೆಗಳ ಜೊತೆಗೂ ಅನ್ವರ್‌ ಡೀಲ್‌ ಕುದುರಿಸಿದ್ದ. ಅವರಿಂದ ಪ್ರತಿ ಕೇಸ್‌ಗೆ 75-150 ರೂ. ವಸೂಲಿ ಮಾಡುತ್ತಿದ್ದ. ಅಂದರೆ ಮಳಿಗೆಗಳ ಮೂಲಕ ಮಾರಾಟವಾಗುವ ಪ್ರತಿ ಬಾಟಲ್‌ನಿಂದಲೂ ಹಣ ಸಂಗ್ರಹಿಸಿದ್ದಾನೆ. ವಿತರಣೆ ಮತ್ತು ಪೂರೈಕೆಯ ಪ್ರತಿ ಹಂತದಲ್ಲೂ ತನ್ನ ಬಂಟರನ್ನು ನೇಮಿಸಿಕೊಂಡಿದ್ದ ಅನ್ವರ್‌ ಖಾಸಗಿ ಡಿಸ್ಟಿಲರ್‌ಗಳು, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು, ಗಾಜಿನ ಬಾಟಲಿ ತಯಾರಕರು, ಹಾಲೋಗ್ರಾಮ್‌ ತಯಾರಕರು, ನಗದು ಸಂಗ್ರಹ ಮಾರಾಟಗಾರರು ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದ ಎಂದು ಇ.ಡಿ. ಹೇಳಿದೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ 600 ಕೋಟಿ ರೂ. ಅಕ್ರಮ ಪತ್ತೆ..!

ಯಾರು ಈ ದೇಬರ್‌ ಸೋದರರು:
ಐಜಾಜ್‌ ಧೇಬರ್‌, ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಾಜಿ ಮೇಯರ್‌. ಕಾಂಗ್ರೆಸ್‌ ವಲಯದಲ್ಲಿ ಗುರುತಿಸಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದಾನೆ. ಈತನ ನೇತೃತ್ವದ ಸಂಘಟಿತ ಕ್ರಿಮಿನಲ್‌ ಸಿಂಡಿಕೇಟ್‌ ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೋದರ ಅನ್ವರ್‌ ಧೇಬರ್‌ ಖಾಸಗಿ ವ್ಯಕ್ತಿಯಾಗಿದ್ದರೂ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಶ್ರೀರಕ್ಷೆ ಇತ್ತು. ಅನ್ವರ್‌ಗೆ ಪ್ರಕರಣ ಸಂಬಂಧ ಹಾಜರಾಗುವಂತೆ ಹಲವು ಬಾರಿ ಇ.ಡಿ.ನೋಟಿಸ್‌ ಜಾರಿ ಮಾಡಿದ್ದರೂ ತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಶನಿವಾರ ಆತ ರಾಯ್‌ಪುರ ಹೋಟೆಲ್‌ನಲ್ಲಿ ಇದ್ದ ಮಾಹಿತಿ ಆಧರಿಸಿ ಅಧಿಕಾರಿಗಳು ಅಲ್ಲಿಗೆ ದಾಳಿ ಮಾಡಿದ್ದರು. ಈ ವೇಳೆ ಅನ್ವರ್‌ ಹಿಂಬಾಗಿಲಿನಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿತ್ತು. ಆತನ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್‌ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ಹಾಕಲಾಗಿತ್ತು.

ಮೆಗಾವಂಚನೆ ಹೇಗೆ?

  • ಛತ್ತೀಸ್‌ಗಢದಲ್ಲಿ ಖಾಸಗಿ ಮದ್ಯದಂಗಡಿಗಳಿಗೆ ಅನುಮತಿ ಇಲ್ಲ
  • 800 ಸರ್ಕಾರಿ ಮದ್ಯದಂಗಡಿಗಳಲ್ಲೇ ರಾಜ್ಯಾದ್ಯಂತ ಮಾರಾಟ
  • ಈ ಅಂಗಡಿಗಳಲ್ಲಿ ಖಾಸಗಿ ಮದ್ಯ ಇರಿಸಿ ಕಾಂಗ್ರೆಸಿಗನ ದಂಧೆ
  • ಸರ್ಕಾರಕ್ಕೆ ವಂಚಿಸಿ ಸರ್ಕಾರಿ ಮಳಿಗೆಯಲ್ಲೇ ಮದ್ಯ ಮಾರಾಟ
  • ಸರ್ಕಾರಿ ಮದ್ಯಕ್ಕೂ ಪ್ರತಿ ಬಾಟಲಿಗೆ ಕಮಿಷನ್‌ ಪಡೆದು ಅಕ್ರಮ
     
Latest Videos
Follow Us:
Download App:
  • android
  • ios