ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಕಚೇರಿಯ ಸಿಬ್ಬಂದಿ ಅನುಮಾನಾಸ್ಪದ ಸಾವು
ತಮಿಳುನಾಡು ಮೂಲಕ ಪ್ರಭು ಮೃತ ವ್ಯಕ್ತಿ| ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ| ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ| ಈ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲು|
ಬೆಂಗಳೂರು(ಮಾ.08): ಪಾಲಿಕೆ ಮಾಜಿ ಸದಸ್ಯ ಧನರಾಜ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯವಸ್ಥಾಪಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಮಿಳುನಾಡು ಮೂಲಕ ಪ್ರಭು (30) ಮೃತ ವ್ಯಕ್ತಿ. ಈ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಲ ವರ್ಷಗಳಿಂದ ಪ್ರಭು ನಗರದಲ್ಲಿ ನೆಲೆಸಿದ್ದು, ಸಹೋದರಿ ಜೊತೆ ನೆಲೆಸಿದ್ದರು. ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಮಾಜಿ ಸದಸ್ಯ ಧನರಾಜ್ ಕಚೇರಿಯಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಪ್ರಭು ಪತ್ನಿ ಹಾಗೂ ಇಬ್ಬರು ಮಕ್ಕಳು ತಮಿಳುನಾಡಿನಲ್ಲಿಯೇ ನೆಲೆಸಿದ್ದಾರೆ. ಕಚೇರಿ ಎದುರೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಮೃತದೇಹ ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಗೋವುಗಳಿದ್ದ ಕೊಟ್ಟಿಗೆಗೆ ಬೆಂಕಿ: ಹಸು ರಕ್ಷಿಸಲು ಹೋಗಿ ಯುವಕ ಸಾವು
ಪ್ರಭು ಶನಿವಾರ ಎಂದಿನಂತೆ ಕೆಲಸಕ್ಕೆ ಹೋಗಿದ್ದು, ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಬೆಳಿಗ್ಗೆ ಮನೆಗೆ ಬರಬಹುದೆಂದು ಸಹೋದರಿ ಸುಮ್ಮನಾಗಿದ್ದರು. ಬೆಳಿಗ್ಗೆ ಮೃತದೇಹ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಧನರಾಜ್ ಅವರೇ ಪ್ರಭು ಅವರನ್ನು ಕೊಲೆ ಮಾಡಿಸಿ, ನೇಣು ಹಾಕಿಸಿ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸುತ್ತಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪ್ರಕರಣವೊಂದರ ಜಾಮೀನಿಗಾಗಿ ಪ್ರಭು ಅವರಿಂದ ಧನರಾಜ್ ಸಹಿ ಮಾಡಿಸಿಕೊಂಡಿದ್ದರು. ಅದೇ ವಿಚಾರಕ್ಕಾಗಿ ಧನರಾಜ್, ಇತ್ತೀಚೆಗೆ ಪೊಲೀಸ್ ಠಾಣೆಯೊಂದಕ್ಕೆ ಹಲವು ಬಾರಿ ಹೋಗಿ ಬಂದಿದ್ದರು ಎನ್ನಲಾಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ ಎಂದು ಪೊಲೀಸರು ವಿವರಿಸಿದ್ದಾರೆ.