ಬೆಂಗಳೂರು: ಸೀಕ್ರೆಟ್ ಕೋಡ್ ಬಳಸಿ ಡ್ರಗ್ಸ್ ಪೂರೈಕೆ, 12 ಮಂದಿ ಅರೆಸ್ಟ್
ಒಂದೂವರೆ ತಿಂಗಳು ಕಾರ್ಯಾಚರಣೆ ನಡೆಸಿ ಕಿಂಗ್‌ಪಿನ್ ಸಮೇತ ಆರೋಪಿಗಳ ಬಂಧನ, ಕೊಕೇನ್, ಎಕ್ಸ್‌ಟೆಸಿ ಮಾತ್ರೆ ಜಪ್ತಿ
ಬೆಂಗಳೂರು(ನ.27): ‘ಅಝಾ’ ಎಂಬ ಕೋಡ್ ವರ್ಡ್ ಬಳಸಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ನೈಜೀರಿಯಾ ಮೂಲದ ಕಿಂಗ್‌ಪಿನ್ ಸೇರಿ ಏಳು ಮಂದಿ ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಐವರು ಗ್ರಾಹಕರು ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆ ದಂಧೆಯ ಕಿಂಗ್‌ಪಿನ್ ಹಿಲ್ಲರಿ ಎಗುವೋಬ(39), ಮಡಿವಾಳದ ಹಫೀಜ್ ರಮ್ಲಾನ್(28) ದೇವರ ಚಿಕ್ಕನಹಳ್ಳಿಯ ಮನ್ಸೂರ್ ಅಲಿಯಾಸ್ ಮಂಚು(33) ದಕ್ಷಿಣ ಕನ್ನಡ ಜಿಲ್ಲೆಯ ಉಮ್ಮರ್ ಫಾರೂಕ್(23), ಮುಂಬೈನ ವೈಶಾಲಿದಾಸ್ (29), ಸಿಂಗನಾಯಕನಹಳ್ಳಿ ಬೆಂಜಮಿನ್ ಅಲಿಯಾಸ್ ಗೆರಾಲ್ಡ್ (32), ರಾಮಮೂರ್ತಿ ನಗರದ ತ್ರಿವೇಣಿ (25) ಬಂಧಿತ ಡ್ರಗ್ಸ್ ಪೆಡ್ಲರ್‌ಗಳು.
ಇಲಿಗಳು 580 ಕೆಜಿ ಗಾಂಜಾ ಭಕ್ಷಿಸಿವೆ ಎಂದ ಪೊಲೀಸ್: ಸಾಕ್ಷಿ ನೀಡಲು ಕೋರ್ಟ್ ತಾಕೀತು
ಆರೋಪಿಗಳಿಂದ ಡ್ರಗ್ಸ್ ಖರೀದಿಸುತ್ತಿದ್ದ ರಾಮಮೂರ್ತಿ ನಗರದ ಗ್ಲ್ಯಾಡಿ ಸುನೀತಾ (27), ಸುಜನಾ (27), ಇಂದಿರಾನಗರದ ಆರ್.ಮುಗೇಶ್ (23), ಜಯನಗರದ ಮೊಹಮ್ಮದ್ ಬಿಲಾಲ್ (23), ಹಾಗೂ ಶೇಷಾದ್ರಿಪುರದ ಮನೀಶ್ ಚೌಹಾಣ್ (32) ಬಂಧಿತ ಗ್ರಾಹಕರು. ಆರೋಪಿಗಳಿಂದ ಸುಮಾರು .1 ಲಕ್ಷ ಮೌಲ್ಯದ 7 ಗ್ರಾಂ ಕೊಕೇನ್, 15 ಎಕ್ಸ್‌ಟೆಸಿ ಮಾತ್ರೆಗಳು, ಎರಡು ದ್ವಿಚಕ್ರ ವಾಹನಗಳು, 8 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 20ರಂದು ಅಮೃತಹಳ್ಳಿ ವ್ಯಾಪ್ತಿಯ ರಿಂಗ್ ರಸ್ತೆಯ ಲುಂಬಿನಿ ಗಾರ್ಡನ್ ಸರ್ವಿಸ್ ರಸ್ತೆಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿಗಳಾದ ಹಫೀಜ್ ರಮ್ಲಾನ್ ಮತ್ತು ಮನ್ಸೂರ್‌ನನ್ನು ಬಂಧಿಸಲಾಗಿತ್ತು. ಆರೋಪಿಗಳು ನೈಜೀರಿಯಾ ಮೂಲದ ಹಿಲ್ಲರಿ ಎಗುವೋಬನಿಂದ ಕಡಿಮೆ ದರಕ್ಕೆ ಕೊಕೇನ್ ಮತ್ತು ಎಕ್ಸ್‌ಟೆಸಿ ಮಾತ್ರೆಗಳನ್ನು ಖರೀದಿಸುತ್ತಿದ್ದರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು ಒಂದೂವರೆ ತಿಂಗಳು ಕಾರ್ಯಾಚರಣೆ ನಡೆಸಿ ಕಿಂಗ್‌ಪಿನ್ ಹಿಲ್ಲರಿ ಸೇರಿದಂತೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.
ರಾಜ್ಯ-ಹೊರ ರಾಜ್ಯಗಳಲ್ಲಿ ಮಾರಾಟ:
ಆರೋಪಿಗಳಾದ ಹಫೀಜ್ ರಮ್ಲಾನ್, ಮನ್ಸೂರ್, ಉಮ್ಮಾರ್ ಫಾರೂಕ್ ಸೇರಿದಂತೆ ಇತರೆ ಡ್ರಗ್ಸ್ ಮಾರಾಟಕ್ಕೆ ತಮ್ಮದೇ ಒಂದು ತಂಡ ಕಟ್ಟಿದ್ದರು. ರಾಜ್ಯದ ಬೆಂಗಳೂರು, ಮಂಗಳೂರು, ಕೇರಳ, ಗೋವಾ ರಾಜ್ಯಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದರು. ಆರೋಪಿ ಹಫೀಜ್ ರಮ್ಲಾನ್ ವಿರುದ್ಧ ಹೈದರಾಬಾದ್‌ನ ಮಲಕ್ ಪೇಟೆ ಠಾಣೆಯಲ್ಲಿ, ಮಂಗಳೂರಿನ ಪಾಂಡೇಶ್ವರ ಮತ್ತು ಸೂರತ್ಕಲ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಆರೋಪಿ ಬೆಂಜಮಿನ್ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಹಾಗೂ ಕಿಂಗ್‌ಪಿನ್ ಹಿಲ್ಲರಿ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದ ಬಳಿಕವೂ ತಮ್ಮ ಕುಕೃತ್ಯ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru Crime: ಆನ್‌ಲೈನ್‌ನಲ್ಲೇ ಡ್ರಗ್ಸ್ ದಂಧೆ: ಯುವತಿ, ಗೆಳೆಯ ಮತ್ತೆ ಜೈಲಿಗೆ
ಏನಿದು ಅಝಾ ಕೋಡ್ ವರ್ಡ್?
ಆರೋಪಿಗಳು ಡ್ರಗ್ಸ್ ಮಾರಾಟಕ್ಕೆ ಅಝಾ ಎಂಬ ಕೋಡ್‌ವರ್ಡ್ ಬಳಸುತ್ತಿದ್ದರು. ವಾಟ್ಸಾಪ್ ಗ್ರೂಪ್‌ಗಳಲ್ಲಿ ಡ್ರಗ್ಸ್ ಹೆಸರಿನ ಬದಲು ಅಝಾ ಎಂದು ಚಾಟ್ ಮಾಡುತ್ತಿದ್ದರು. ಅಝಾ ಎಂಬುದು ಆಫ್ರಿಕನ್ ಭಾಷೆಯ ಪದ. ಆರೋಪಿಗಳು ಗ್ರಾಹಕರ ಬಳಿ ನಗದು ಸ್ವೀಕರಿಸದೇ, ಬ್ಯಾಂಕ್ ಖಾತೆಗೆ ಆನ್‌ಲೈನ್‌ನಲ್ಲಿ ಹಣ ಹಾಕಿಸಿಕೊಂಡು ಬಳಿಕ ಡ್ರಾ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಟೂರಿಸ್ಟ್ ವೀಸಾದಲ್ಲಿ ಬಂದು ಡ್ರಗ್ಸ್ ದಂಧೆ
ಪ್ರಮುಖ ಆರೋಪಿ ಹಿಲ್ಲರಿ ಎಗುವೋಬಾ ಮೂರು ವರ್ಷದ ಹಿಂದೆ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದನು. ವೀಸಾ ಎರಡು ವರ್ಷದ ಹಿಂದೆಯೇ ಅವಧಿ ಮುಗಿದಿದ್ದರೂ ಅಕ್ರಮವಾಗಿ ಇಲ್ಲಿದ್ದು ಡ್ರಗ್‌್ಸ ಮಾರಾಟ ದಂಧೆ ಆರಂಭಿಸಿದ್ದ. ಪರಿಚಿತ ನೈಜೀರಿಯಾದವರಿಂದ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಗೊತ್ತಾಗಿದೆ.