ಟೆಸ್ಟ್ ಬರೆಯುವಾಗ ವಿದ್ಯಾರ್ಥಿನಿ ಮೇಲೆ ಗಂಭೀರ ಹಲ್ಲೆ, ಚಿಕ್ಕಮಗಳೂರು ಕಾಲೇಜಿನ ವಿರುದ್ಧ ಗಂಭೀರ ಆರೋಪ
ಟೆಸ್ಟ್ ಬರೆಯುವಾಗ ಕಾಪಿ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರು ಹೀನಾಯವಾಗಿ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.14): ಟೆಸ್ಟ್ ಬರೆಯುವಾಗ ಕಾಪಿ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕರು ಹೀನಾಯವಾಗಿ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಎಐಟಿ ವೃತ್ತದಲ್ಲಿರುವ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಬಿಂದು ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ಬಿಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
NEET UG 2023: ಕೋವಿಡ್-19 ಸಮಯ ವೈದ್ಯರಿಂದ ಸ್ಫೂರ್ತಿ, ದೇಶಕ್ಕೆ ಐದನೇ ಟಾಪರ್
ಮೂಲತಃ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ನಿವಾಸಿ ಆಗಿರುವ ಬಿಂದು ಮೊನ್ನೆ ಕಾಲೇಜಿನಲ್ಲಿ ಕಿರುಪರೀಕ್ಷೆ ನಡೆಯುತ್ತಿದ್ದ ವೇಳೆ ಕಾಪಿ ಮಾಡಿದ್ದಕ್ಕೆ ಕಾಲೇಜಿನ ಉಪನ್ಯಾಸಕರು ಈಕೆ ಮೇಲೆ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಬಿಂದು ಆರೋಪಿಸಿದ್ದಾಳೆ. ನನಗೆ ತಲೆಯ ನರದ ಸಮಸ್ಯೆ ಇದೆ. ನಾನು ಪ್ರಜ್ಞಾಹೀನಳಾಗಿ ಬಿದ್ದಿದ್ದಕ್ಕೆ ನಾಟಕ ಮಾಡುತ್ತಿದ್ದಾಳೆ ಎಂದರು. ನನ್ನ ಸ್ನೇಹಿತರನ್ನು ನನಗೆ ಸಹಾಯ ಮಾಡಲು ಬಿಡಲಿಲ್ಲ. 12.30ಕ್ಕೆ ಬಿದ್ದ ನನಗೆ 1 ಗಂಟೆವರೆಗೆ ಯಾರೂ ಸಹಾಯ ಮಾಡಿಲಿಲ್ಲ. 1 ಗಂಟೆಯ ಬಳಿಕ ಹೆಲ್ತ್ ರೂಮಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ತಲೆ ಹಾಗೂ ಕೆನ್ನೆಗೆ ಹೊಡೆದರು. ನನ್ನ ಮೇಲೆ ಮೂರು ಬಕೆಟ್ ನೀರು ಹಾಕಿ ಹೊಡೆದರು ಎಂದು ಬಿಂದು ಆರೋಪಿಸಿ ಕಣ್ಣೀರಿಟ್ಟಿದ್ದಾಳೆ. ಬಿಂದು ತಾಯಿ ಕೂಡ ನಾನು ಕೂಲಿ ಕೆಲಸ ಮಾಡೋದು. ಮಗಳು ಓದಲಿ ಎಂದು ಯಾವುದೇ ಫೀಸ್ ಬಾಕಿ ಉಳಿಸದೆ ಎಲ್ಲವನ್ನು ಕಟ್ಟಿದ್ದೇನೆ. ಆದರೆ, ಹೀಗೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
KCET RESULT 2023: ಸಿಇಟಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ
ನಾವು ಹೊಡೆದೇ ಇಲ್ಲ ಆಡಳಿತ ಮಂಡಳಿ ಸ್ಪಷ್ಟನೆ:
ವಿದ್ಯಾರ್ಥಿನಿಯ ಆರೋಪವನ್ನು ಕಾಲೇಜು ಆಡಳಿತ ಮಂಡಳಿ ಸರಾಸಗಟಾಗಿ ತಿರಸ್ಕರಿಸಿದೆ. ಆಕೆ ಕಾಪಿ ಮಾಡುವಾಗ ಸಿಕ್ಕಿ ಬಿದ್ದಿದ್ದಾಳೆ. ಆಗ ಬೈದ ಕೂಡಲೇ ತಲೆ ಸುತ್ತಿ ಬಿದ್ದಿದ್ದಾಳೆ. ಆಕೆಯನ್ನು ರೂಮಲ್ಲಿ ಮಲಗಿಸಿ ಎಬ್ಬಿಸಲು ಪ್ರಯತ್ನಿಸಿದ್ದು ಕೂಡ ನಿಜ. ಆಗ ಎಚ್ಚರಗೊಳ್ಳಲಿ ಎಂದು ಮುಖಕ್ಕೆ ನೀರು ಹಾಕಿ ಕೆನ್ನೆ ತಟ್ಟಿದ್ದು ಕೂಡ ಸತ್ಯ. ಆದರೆ, ಆಕೆ ಮೇಲೆ ಹಲ್ಲೆ ಮಾಡಿ ಬಕೆಟ್ ಗಟ್ಟಲೆ ನೀರು ಹಾಕಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಹೈಸ್ಕೂಲ್ ಮಕ್ಕಳಿಗಾದರೆ ತಪ್ಪು ಮಾಡಿದಾಗ ಹೊಡೆಯಬಹುದು. ಆದರೆ, ಕಾಲೇಜು ಮಕ್ಕಳಿಗೆ ಯಾರೂ ಕೂಡ ಹೊಡೆಯುವುದಿಲ್ಲ. ನಾವು ಹೊಡೆದಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥೆ ನಳಿನಿ ಸಮಾಜಯಿಷಿ ನೀಡಿದ್ದಾರೆ.
ಒಟ್ಟಾರೆ, ವಿದ್ಯಾರ್ಥಿನಿ ನನ್ನ ಮೇಲೆ ನಾಟಕ ಮಾಡುತ್ತಿದ್ದೀಯಾ ಎಂದು ಹಲ್ಲೆ ಮಾಡಿದ್ದಾರೆ ಎನ್ನುತ್ತಿದ್ದಾಳೆ. ಆದರೆ, ಕಾಲೇಜು ಆಡಳಿತ ಮಂಡಳಿ ನಾವು ಹಲ್ಲೆ ಮಾಡಿಲ್ಲ. ತಪ್ಪು ಮಾಡಿದಾಗ, ಬಯ್ಯುವಾಗ ಈ ರೀತಿ ಮಾಡುವ ಸಾಕಷ್ಟು ಮಕ್ಕಳನ್ನ ನೋಡಿದ್ದೇವೆ. ಆದರೆ, ಯಾರಿಗೂ ಹಲ್ಲೆ ಮಾಡಿಲ್ಲ. ಆಕೆ ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾಳೆ ಅಂತಿದ್ದಾರೆ. ಇಲ್ಲಿ ಯಾರು ಸತ್ಯವೋ ಯಾರು ಸುಳ್ಳೋ ಗೊತ್ತಿಲ್ಲ. ಆದರೆ, ವಿದ್ಯಾರ್ಥಿಗಳು ಕಾಪಿ ಮಾಡೋದು. ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡೋದು ತಪ್ಪು ಅಷ್ಟಂತು ಸತ್ಯವಾಗಿದೆ.