ಬಂಗಾಳ ಕೊಲ್ಲಿಯ ದಡದಲ್ಲಿ ಭದ್ರತಾ ಪಡೆಗಳ ಪಹರೆ ಬಗ್ಗೆ ಮಾಹಿತಿ ಪಡೆದು ಭೀತಿಗೊಳಗಾದ ಆರೋಪಿಗಳು, ಪಾಂಡಿಚೇರಿಗೆ ಸನಿಹದಲ್ಲೇ ಹಡಗಿನಲ್ಲಿ 10 ದಿನಗಳು ಸುತ್ತು ಹೊಡೆದು ಕೊನೆಗೆ ದಡ ಸೇರಿದ್ದರು: ಸಿಸಿಬಿ 

ಬೆಂಗಳೂರು(ಆ.29):  ಶ್ರೀಲಂಕಾದ ಮೂವರು ಕುಖ್ಯಾತ ಪಾತಕಿಗಳು ಇತ್ತೀಚೆಗೆ ಭಾರತಕ್ಕೆ ಅಕ್ರಮವಾಗಿ ನುಸುಳುವ ಮುನ್ನ ಪಾಂಡಿಚೇರಿ ಸಮೀಪ ಬಂಗಾಳ ಕೊಲ್ಲಿಯಲ್ಲೇ ಹಡಗಿನಲ್ಲಿ 10 ದಿನಗಳನ್ನು ಕಳೆದಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಶ್ರೀಲಂಕಾದಿಂದ ಹಡಗಿನಲ್ಲಿ ಅಕ್ರಮವಾಗಿ ಪಾಂಡಿಚೇರಿಗೆ ಕುಖ್ಯಾತ ಪಾತಕಿಗಳಾದ ಕಸನ್‌ ಕುಮಾರ್‌ ಸಂಕ, ಅಮಿಲ್‌ ನುವಾನ್‌ ಅಸಂಕ ಅಲಿಯಾಸ್‌ ಗೋತಾಸಿಲ್ವಾ ಹಾಗೂ ರಂಗಪ್ರಸಾದ್‌ ಅಲಿಯಾಸ್‌ ಚುಟ್ಟಾ ಬಂದಿದ್ದರು. ಆದರೆ ಆ ವೇಳೆ ಬಂಗಾಳ ಕೊಲ್ಲಿಯ ದಡದಲ್ಲಿ ಭದ್ರತಾ ಪಡೆಗಳ ಪಹರೆ ಬಗ್ಗೆ ಮಾಹಿತಿ ಪಡೆದು ಭೀತಿಗೊಳಗಾದ ಆರೋಪಿಗಳು, ಪಾಂಡಿಚೇರಿಗೆ ಸನಿಹದಲ್ಲೇ ಹಡಗಿನಲ್ಲಿ 10 ದಿನಗಳು ಸುತ್ತು ಹೊಡೆದು ಕೊನೆಗೆ ದಡ ಸೇರಿದ್ದರು ಎಂದು ಸಿಸಿಬಿ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಬಂಧನಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಆರೋಪಿ; ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು!

ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಶ್ರೀಲಂಕಾದ ಕುಖ್ಯಾತ ಪಾತಕಿಗಳಾದ ಕಸನ್‌ ಕುಮಾರ್‌ ಸಂಕ, ಅಮಿಲ್‌ ನುವಾನ್‌ ಅಸಂಕ ಅಲಿಯಾಸ್‌ ಗೋತಾ ಸಿಲ್ವಾ ಹಾಗೂ ರಂಗಪ್ರಸಾದ್‌ ಅಲಿಯಾಸ್‌ ಚುಟ್ಟಾಮತ್ತು ಇವರಿಗೆ ಆಶ್ರಯ ಕಲ್ಪಿಸಿದ್ದ ಜಕ್ಕೂರಿನ ಜೈ ಪರಮೇಶ್‌ನನ್ನು ಸಿಸಿಬಿ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಈ ಪಾತಕಿಗಳಿಗೆ ಹಣಕಾಸು ನೆರವು ನೀಡಿದ್ದ ತಮಿಳುನಾಡಿನ ಚೆನ್ನೈ ನಗರದಲ್ಲಿ ಮನ್ಸೂರ್‌ ಅಲಿ ಹಾಗೂ ಬೆಂಗಳೂರಿನ ವಿವೇಕನಗರದಲ್ಲಿ ಅನ್ಬಳಗನ್‌ ಮಾಹಿತಿ ಬಯಲಾಗಿ ಸಿಕ್ಕಿಬಿದ್ದಿದ್ದರು.

ಬೆಳಗಾವಿ: ಮಗನ ಕಿರುಕುಳಕ್ಕೆ ಬೇಸತ್ತು ತಂದೆಯೇ ಮಗನ ಹತ್ಯೆಗೆ ಸುಪಾರಿ ಕೊಟ್ಟ!

ಭದ್ರತಾ ಪಡೆಗಳ ಕಣ್ತಪ್ಪಿಸಿ ನಗರಕ್ಕೆ

ಈ ಪ್ರಕರಣ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದು ತಮಿಳುನಾಡು ಹಾಗೂ ಪಾಂಡಿಚೇರಿಗೆ ಸಿಸಿಬಿ ಪೊಲೀಸರು ‘ಮಹಜರ್‌’ಗೆ ಕರೆದೊಯ್ದಿದ್ದರು. ಆಗ ತಮ್ಮ ಪಾಂಡಿಚೇರಿ-ಬೆಂಗಳೂರಿನ ಕಳ್ಳ ಹಾದಿಯನ್ನು ಶ್ರೀಲಂಕಾ ಪಾತಕಿಗಳು ತೋರಿಸಿದ್ದಾರೆ. ಶ್ರೀಲಂಕಾ ಮೂಲಕ ಪಾಂಡಿಚೇರಿಗೆ ಬಂದಿದ್ದ ಆರೋಪಿಗಳು, ಬಳಿಕ ಅಲ್ಲಿಂದ ಸೇಲಂ, ರಾಮೇಶ್ವರ ಮಾರ್ಗವಾಗಿ ಬೆಂಗಳೂರು ತಲುಪಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೂರ್ವನಿಗದಿಯಂತೆ ಪಾಂಡಿಚೇರಿಗೆ ಆರೋಪಿಗಳು ಬರಬೇಕಿತ್ತು. ಆದರೆ ಆ ದಿನ ನೌಕಾ ದಳ ಹಾಗೂ ಕರಾವಳಿ ರಕ್ಷಣಾ ಪಡೆಗಳು ಪಹರೆ ಹೆಚ್ಚಿಸಿದ್ದವು. ಈ ಬಗ್ಗೆ ಮಾಹಿತಿ ತಿಳಿದ ಆರೋಪಿಗಳು, ಪಾಂಡಿಚೇರಿ ದಡಕ್ಕೆ ತಲುಪದೆ ಮಾರ್ಗ ಮಧ್ಯೆದಲ್ಲೇ ಹಿಂತಿರುಗಿದರು. ಬಳಿಕ ಹತ್ತು ದಿನಗಳು ಪಾಂಡಿಚೇರಿ ಸನಿಹದಲ್ಲೇ ಸಾಗರದಲ್ಲೇ ಹಡಗಿನಲ್ಲಿ ಸುತ್ತಾಡಿದ್ದರು. ಕೊನೆಗೆ ಭದ್ರತಾ ಪಡೆಗಳ ಕಣ್ತಪ್ಪಿಸಿ ಆರೋಪಿಗಳು ಒಳ ನುಸುಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.