ಹನಿಮೂನ್ನಲ್ಲಿ ಪತಿಯನ್ನೇ ಮುಗಿಸಿರುವ ಆರೋಪ ಸೋನಂ ರಘುವಂಶಿಯ ಮೇಲಿದೆ. ಆದರೆ ಒಲ್ಲದ ಮದುವೆಗೆ ಒತ್ತಾಯದಿಂದ ಒಪ್ಪಿಸಿ, ಈಕೆಯ ತಾಯಿ ಅಮಾಯನಕ ಬಲಿ ಕೊಟ್ರಾ ಎನ್ನುವ ಮಾತು ಕೇಳಿಬರ್ತಿದೆ. ಏನದು?
ಹನಿಮೂನ್ಗೆ ಹೋಗಿ ಪ್ರಿಯಕರನ ಜೊತೆಗೂಡಿ ಪತಿಯನ್ನು ಮುಗಿಸಿರುವ ಸೋನಂ ರಾಜವಂಶಿ ಇದೀಗ ತಾನೇ ಈ ಕೃತ್ಯ ಮಾಡಿರುವುದಾಗಿ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದಾಗಿನಿಂದಲೂ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ. ಅವಳಿಗೆ ರಾಜಾ ರಘುವಂಶಿಯನ್ನು ಮದುವೆಯಾಗುವ ಇಷ್ಟ ಇಲ್ಲದಿದ್ದರೆ ಯಾಕೆ ಆಗಬೇಕಿತ್ತು ಎನ್ನುವುದು. ಆದರೆ ಇದೀಗ ಬೆಳಕಿಗೆ ಬಂದಿರುವ ಅಂಶ ಏನೆಂದರೆ, ಸೋನಂಗೆ ಈ ಮದುವೆ ಇಷ್ಟನೇ ಇರಲಿಲ್ಲ. ಇದಕ್ಕೆ ಕಾರಣ ತಂದೆಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವನ ಮೇಲೆ, ತನಗಿಂತಲೂ ವಯಸ್ಸಿನಲ್ಲಿ ಚಿಕ್ಕವನಾಗಿದ್ದ ರಾಜ್ ಕುಶ್ವಾಹ ಮೇಲೆ ಹುಟ್ಟಿದ್ದ ಪ್ರೀತಿ. ಇವರಿಬ್ಬರೂ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಸೋನಂ ಮದುವೆಗೂ ಮೊದಲೇ ತಾಯಿಗೆ ಹೇಳಿದ್ದಳು ಎನ್ನಲಾಗಿದೆ. ಮದ್ವೆ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ, ನನಗೆ ಈ ಮದುವೆ ಇಷ್ಟವಿಲ್ಲ ಎಂದು ಮೊದಲೇ ತಾಯಿಗೆ ಸೋನಂ ಹೇಳಿದ್ದಳು ಎಂದು ರಾಜಾ ಅವರ ಅಣ್ಣ ವಿಪಿನ್ ರಘುವಂಶಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ವಿಪಿನ್ ರಘುವಂಶಿ ಪೊಲೀಸರಿಗೆ ತಿಳಿಸಿರುವ ವಿಷಯಗಳ ಬಗ್ಗೆ ಎನ್ಡಿಟಿವಿ ವರದಿ ಮಾಡಿದೆ. ಇದರ ಅನ್ವಯ, ಸೋನಂ ತನ್ನ ಮದುವೆಗೆ ಮುನ್ನವೇ ರಾಜ್ ಕುಶ್ವಾಹ ಜೊತೆಗಿನ ಸಂಬಂಧದ ಬಗ್ಗೆ ತನ್ನ ತಾಯಿಗೆ ತಿಳಿಸಿದ್ದಳು. ಆದಾಗ್ಯೂ, ತನ್ನ ಕುಟುಂಬದ ವ್ಯವಹಾರದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಕುಶ್ವಾಹನನ್ನು ಆಕೆಯ ಕುಟುಂಬ ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಸೋನಂ ಇಷ್ಟವಿಲ್ಲದೆ ರಾಜಾ ಅವರನ್ನು ಮದುವೆಯಾಗಲು ಒಪ್ಪಿಕೊಂಡಳು. ಮದುವೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಅದರಲ್ಲಿ ಸೋನಂಳನ್ನು ನೋಡಿದರೆ ಮದುವೆಗೆ ಸ್ವಲ್ಪವೂ ಇಷ್ಟವಿಲ್ಲದೇ ಇರುವುದನ್ನು ನೋಡಬಹುದು. ಮುಖದಲ್ಲಿ ಮದುಮಗಳ ಕಳೆಯ ಬದಲು ಒತ್ತಾಯದ ಮದುವೆ ಎಂದು ಸ್ಪಷ್ಟವಾಗಿ ಗೋಚರಿಸುವುದನ್ನು ನೋಡಬಹುದಾಗಿದೆ.
'ಒಂದು ವೇಳೆ ಮದುವೆ ಮಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ. ನಾನು ಆ ವ್ಯಕ್ತಿಗೆ ಏನು ಮಾಡುತ್ತೇನೆಂದು ನೀವು ನೋಡುತ್ತೀರಿ. ನೀವೆಲ್ಲರೂ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ' ಎಂದು ಹೇಳಿದ್ದಳು. ಆದರೆ, ಈಕೆ ಆತನನ್ನು ಸಾಯಿಸುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ ಎಂದಿದ್ದಾರೆ ಸಹೋದರ. ಇಷ್ಟೆಲ್ಲಾ ಆದ ಮೇಲೆ ಇಷ್ಟವಿಲ್ಲದ ಮದುವೆ ಮಾಡಿಸಿ ಅಮಾಯಕನನ್ನು ಸೋನಂ ಕುಟುಂಬ ಅದರಲ್ಲಿಯೂ ವಿಶೇಷವಾಗಿ ಆಕೆಯ ತಾಯಿ ಬಲಿ ಕೊಟ್ಟರಾ ಎಂದೇ ಅನ್ನಿಸುತ್ತಿದೆ!
ಇನ್ನು, ಈ ಘಟನೆ ಕುರಿತು ಹೇಳುವುದಾದರೆ, ಇದು ಮಧ್ಯಪ್ರದೇಶದ ಇಂದೋರ್ ಘಟನೆ. ಹನಿಮೂನ್ಗೆ ಹೋಗಿ ಗಂಡನನ್ನು ಪ್ರಿಯಕರನ ಜೊತೆಗೂಡಿ ಪತ್ನಿ ಮರ್ಡ*ರ್ ಮಾಡಿರುವ ಮಧ್ಯಪ್ರದೇಶದ ಇಂದೋರ್ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್ಗೆ ಹೋದ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಜೆಗೆ ಹೋಗಿದ್ದ ಜೋಡಿ ಸಂಪರ್ಕಕ್ಕೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಡ್ರೋನ್ ಬಳಸಲಾಗಿತ್ತು. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿತ್ತು. ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಸೋನಮ್ಳನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆಮೇಲೆ ತನಿಖೆಯ ಬಳಿಕ ಪ್ರಿಯಕರನ ಜೊತೆಗೂಡಿ ಸೋನಂ ಗಂಡನನ್ನು ಮುಗಿಸಿರುವುದು ತಿಳಿದಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.


