ಹನಿಮೂನ್​ಗೆ ಹೋಗಿದ್ದ ವೇಳೆ ಪತ್ನಿಯನ್ನು ಮುಗಿಸಿದ ಹಂತಕಿ ಡೌಟ್​ ಬಾರದಂತೆ ಅತ್ತೆಗೆ ಕರೆ ಮಾಡಿ ಹೇಳಿದ್ದೇನು? ಆಡಿಯೋ ಈಗ ವೈರಲ್​ ಆಗಿದೆ.

ಹನಿಮೂನ್​ಗೆ ಹೋಗಿ ಗಂಡನನ್ನು ಪ್ರಿಯಕರನ ಜೊತೆಗೂಡಿ ಪತ್ನಿ ಮರ್ಡ*ರ್​ ಮಾಡಿರುವ ಮಧ್ಯಪ್ರದೇಶದ ಇಂದೋರ್​ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಜೆಗೆ ಹೋಗಿದ್ದ ಜೋಡಿ ಸಂಪರ್ಕಕ್ಕೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಡ್ರೋನ್​ ಬಳಸಲಾಗಿತ್ತು. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿತ್ತು. ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಸೋನಮ್​ಳನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆಮೇಲೆ ತನಿಖೆಯ ಬಳಿಕ ಪ್ರಿಯಕರನ ಜೊತೆಗೂಡಿ ಸೋನಂ ಗಂಡನನ್ನು ಮುಗಿಸಿರುವುದು ತಿಳಿದಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದರ ತನಿಖೆಯ ವೇಳೆ ಗಂಡನನ್ನು ಮುಗಿಸಿದ ಬಳಿಕ ಯಾವುದೇ ರೀತಿಯ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಅತ್ತೆಗೆ ಕರೆ ಮಾಡಿದ್ದಳು ಹಂತಕಿ. ರಾಜಾಇನ್ನೂ ಮಲಗಿದ್ದಾರೆ ಎಂದಿದ್ದಳು. ಅವರು ಎದ್ದಾಗ ಕರೆ ಮಾಡಿಸುತ್ತೇನೆ ಎಂದಿದ್ದ ಆಕೆ. ಅಂದು ತನಗೆ ಉಪವಾಸ ಆಗಿದ್ದ ಬಗ್ಗೆ ತಿಳಿಸಿದ್ದಳು. ಆಗ ಅತ್ತೆ, ಹೌದು ನನಗೂ ಇವತ್ತು ತಿಂಡಿ ರೆಡಿ ಮಾಡುವ ಸಮಯದಲ್ಲಿ ನೀನು ಉಪವಾಸ ಇರುವುದು ನೆನಪಾಯ್ತು. ಬೆಟ್ಟ ಗುಡ್ಡ ಎಲ್ಲಾ ಹತ್ತಲು ಹೋಗುತ್ತಿ. ಹಸಿವೆಯಿಂದ ಹೋಗಬೇಡ, ಏನಾದರೂ ತಿಂದುಕೊಂಡು ಹೋಗು ಎಂದು ಅತ್ತೆ ಸೊಸೆಯ ಬಗ್ಗೆ ಕಾಳಜಿ ತೋರಿದ್ದರು. ಆಗ ಸೋನಂ... ಇಲ್ಲ ಇಲ್ಲ ಬೆಟ್ಟ ಗುಡ್ಡ ಹತ್ತಬೇಕು ಎನ್ನುವ ಕಾರಣಕ್ಕೆ ನನ್ನ ಉಪವಾಸವನ್ನು ಮುರಿಯುವುದಿಲ್ಲ ಎಂದಳು. ಆಗ ರಾಜಾ ಅವರ ಅಮ್ಮ, ಸ್ವಲ್ಪ ಹಾಲು, ಲಸ್ಸಿಯನ್ನಾದರೂ ಕುಡಿದುಕೊಂಡು ಹೋಗು ಎಂದರು. ನೀನು ಉಪವಾಸ ಇರುತ್ತೀ ಎನ್ನುವ ಕಾರಣಕ್ಕೆ ಸ್ವಲ್ಪ ಒಣದ್ರಾಕ್ಷಿ ತೆಗೆದುಕೊಂಡು ಹೋಗುವಂತೆ ರಾಜನಿಗೆ ಹೇಳಿದ್ದೆ. ಅವನಿಗೆ ನೆನಪು ಇತ್ತೋ ಇಲ್ವೋ ಎಂದು ತಿಳಿಸುವ ಮೂಲಕ ಅತ್ತೆ, ಸೊಸೆಯ ಮೇಲೆ ಪ್ರೀತಿಯ ಧಾರೆಯನ್ನೇ ಎರೆದಿದ್ದಾರೆ.

ಆದರೆ, ಆ ಬಗ್ಗೆ ಹಾಂ, ಹೂಂ ಎಂದಷ್ಟೇ ಹೇಳಿದ ಹಂತಕಿ ಸೋನಂ, ಪರವಾಗಿಲ್ಲ. ನಾನು ಉಪವಾಸ ಮಾಡುತ್ತೇನೆ ಎಂದಿದ್ದಾಳೆ. ಕೊನೆಗೆ ಯಾವುದಕ್ಕೂ ಇರಲಿ ಎನ್ನುವ ಕಾರಣಕ್ಕೆ ಮುಂಜಾಗರೂಕತಾ ಕ್ರಮವಾಗಿ ಮಾತನಾಡಿದ್ದ ಸೋನಂ, ಇದು ಆಳವಾದ ಕಾಡು. ಇದು ತುಂಬಾ ಕಡಿದಾಗಿದೆ. ಹತ್ತುವುದು ಕೂಡ ಕಷ್ಟವೇ ಎಂದಿದ್ದಾರೆ. ಇಲ್ಲಿಗೆ ಹೋದಾಗ ತನ್ನ ಪತಿ ಸತ್ತರು ಎಂದು ನೆಪ ಹೇಳುವ ಸಲುವಾಗಿ ಇದನ್ನೆಲ್ಲಾ ಪ್ಲ್ಯಾನ್​ ಮಾಡಿ ಹೇಳಿದ್ದಳು ಆಕೆ. ನಂತರ ಅಲ್ಲಿ ಏನೇನು ನೋಡಿದ್ರಿ ಎಂದು ಅತ್ತೆ ಪ್ರಶ್ನಿಸಿದಾಗ, ಜಲಪಾತ ನೋಡಿ ಬಂದ್ವಿ. ಅದು ತುಂಬಾ ಆಳವಾಗಿತ್ತು ಎಂದೆಲ್ಲಾ ಬಣ್ಣಿಸಿದ್ದಾಳೆ. ಇಷ್ಟು ಆದ ಬಳಿಕ ಇಲ್ಲಿ ಸಿಗ್ನಲ್​ ಸರಿ ಕೇಳಿಸುತ್ತಿಲ್ಲ. ಆಮೇಲೆ ಕಾಲ್​ ಮಾಡುವೆ ಎಂದು ತನ್ನ ಕೆಲಸ ಆಯಿತು, ಇನ್ನು ತಾನು ಸೇಫ್​ ಎನ್ನುವ ರೀತಿಯಲ್ಲಿ ಮಾತನಾಡಿದ್ದಾಳೆ.

ಇನ್ನು ಮೇಘಾಲಯ ಪೊಲೀಸರ ಪ್ರಕಾರ, ಸೋನಮ್ 21 ವರ್ಷದ ರಾಜ್ ಕುಶ್ವಾಹ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಅವರ ಪತಿಯನ್ನು ಕೊಲ್ಲಲು ಪ್ರಿಯತಮನೊಂದಿಗೆ ಸಂಚು ರೂಪಿಸಿದ್ದರು. ಹೀಗಾಗಿ ಇಬ್ಬರನ್ನೂ ಬಂಧಿಸಲಾಗಿದೆ. ಸೋನಮ್, ಇಂದೋರ್‌ನಲ್ಲಿ ತನ್ನ ಮಾಜಿ ಉದ್ಯೋಗಿಯಾಗಿದ್ದ ರಾಜ್ ಮತ್ತು ಇತರ ಮೂವರು - ವಿಶಾಲ್ ಸಿಂಗ್ ಚೌಹಾಣ್ (22), ಆಕಾಶ್ ರಜಪೂತ್ (19) ಮತ್ತು ಆನಂದ್ ಸಿಂಗ್ ಕುರ್ಮಿ​​(23) ಸಹಾಯದಿಂದ ಕೊಲೆಗೆ ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಈ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಅವರ ತಂದೆ, ತನ್ನ ಮಗಳ ವಿರುದ್ಧ ಕೊಲೆ ಆರೋಪವನ್ನು ತಿರಸ್ಕರಿಸಿದ್ದಾರೆ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೇಘಾಲಯ ಪೊಲೀಸರು ತಮ್ಮ ಮಗಳ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 

View post on Instagram