Crime News Today: ತಾಯಿಯನ್ನು ಕೊಲೆ ಮಾಡಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಾದ ನಂತರ ಶವದ ಮೇಲೆ ಗಂಗಾಜಲ ಸಿಂಪಡಿಸಿ ಭಗವದ್ಗೀತೆ ಓದಿದ್ದಾನೆ. ತಾಯಿ ಮತ್ತು ಮಗ ಇಬ್ಬರ ಆರೋಗ್ಯದಲ್ಲೂ ಸಮಸ್ಯೆಯಿತ್ತು ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ಡೆತ್‌ ನೋಟ್‌ನಲ್ಲಿ ಮಗ ಬರೆದಿಟ್ಟಿದ್ದಾನೆ.

ನವದೆಹಲಿ: ತಾಯಿಯನ್ನೇ ಚೈನಿನಿಂದ ಬಿಗಿದು ಸಾಯಿಸಿ ನಂತರ ಕತ್ತು ಸೀಳಿ ಸಾಯಿಸಿದ ಘಟನೆ ನವದೆಹಲಿಯಲ್ಲಿ ಕಳೆದ ಗುರುವಾರ ನಡೆದಿದೆ. ತಾಯಿಯನ್ನು ಕೊಲೆ ಮಾಡಿದ ಮೂರು ದಿನಗಳ ನಂತರ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿಯನ್ನು ಕೊಲೆ ಮಾಡಿದ ನಂತರ ಕತ್ತು ಸೀಳಿದ್ದಾನೆ. ಕುತ್ತಿಗೆ ಬಿಗಿದರೆ ಮುಕ್ತಿ ಸಿಗುವುದಿಲ್ಲ ಎಂದು ಆತ ಎಲ್ಲೋ ಓದಿದ್ದನಂತೆ. ಈ ಕಾರಣಕ್ಕಾಗಿ ಕತ್ತು ಸೀಳಿದ್ದಾನೆ. ಅದಾದ ನಂತರ ಗಂಗಾಜಲ ದೇಹಕ್ಕೆ ಸಿಂಪಡಿಸಿ ಭಗವದ್ಗೀತೆ ಪಠಿಸಿದ್ದಾನೆ. ಒಂದು ರೀತಿಯಲ್ಲಿ ಇದು ವಿಲಕ್ಷಣ ಪ್ರಕರಣ. ತಾಯಿಯನ್ನೇ ಕೊಲೆ ಮಾಡುತ್ತಾನೆ, ಭಗವದ್ಗೀತೆ ಓದುತ್ತಾನೆ, ಗಂಗಾಜಲ ಸಿಂಪಡಿಸುತ್ತಾನೆ, ಇವೆಲ್ಲಾ ಆದ ನಂತರ ಬರೋಬ್ಬರಿ 77 ಪುಟಗಳ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 

ತಾಯಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡವನ ಹೆಸರು ಕ್ಷಿತಿಜ್‌ (25). ಗುರುವಾರ ತಾಯಿಯನ್ನು ಕೊಲೆ ಮಾಡಿದ ನಂತರ ಮೂರು ದಿನ ಮನೆಯಲ್ಲಿ ಶವದ ಮುಂದೆಯೇ ಕುಳಿತಿರುತ್ತಾನೆ. ಭಾನುವಾರ ತಾಯಿಯ ಸ್ನೇಹಿತೆಯೊಬ್ಬರು ಕರೆ ಮಾಡುತ್ತಾರೆ. ಕ್ಷಿತಿಜ್‌ ಕರೆ ಸ್ವೀಕರಿಸುತ್ತಾನೆ. ತಾಯಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ, ನಾನೂ ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಮ್ಮನ ಶವ ಮನೆಯಲ್ಲೇ ಇದೆ ಎಂದು ಆತ ಹೇಳಿದ್ದ. 

ಇದನ್ನೂ ಓದಿ: Crime News: ತಾಯಿ ಕೊಂದು ಆತ್ಮಹತ್ಯೆಗೆ ಶರಣಾದ ಮಗ; ಶವದ ಬಳಿಯಿತ್ತು 77 ಪುಟಗಳ ಡೆತ್‌ನೋಟ್‌

ಕ್ಷಿತಿಜ್‌ ಮಾತಿನಿಂದ ಭಯಗೊಂಡ ತಾಯಿಯ ಸ್ನೇಹಿತೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಗೆ ಭೇಟಿ ನೀಡಿದಾಗ ಬಾಗಿಲು ಲಾಕ್‌ ಆಗಿತ್ತು. ಮನೆಯ ಬಾಲ್ಕನಿಯಿಂದ ಒಳ ಪ್ರವೇಶಿಸಿದ ಪೊಲೀಸರಿಗೆ ಬಾತ್‌ರೂಮನಿಲ್ಲಿ ತಾಯಿಯ ದೇಹ ಮತ್ತು ರೂಮಿನಲ್ಲಿ ಕ್ಷಿತಿಜ್‌ ದೇಹ ಸಿಕ್ಕಿದೆ. ಡೆತ್‌ ನೋಟ್‌ನಲ್ಲಿ ಕ್ಷಿತಿಜ್‌, ತಾನು ಮತ್ತು ತಾಯಿ ಇಬ್ಬರಿಗೂ ಆರೋಗ್ಯ ಸಮಸ್ಯೆ ಇತ್ತು. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಖರ್ಚು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕ್ಷಿತಿಜ್‌ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಾಯಿಯೂ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಖರ್ಚು ಭರಿಸುವುದು ಕಷ್ಟವಾಗುತ್ತಿತ್ತು. ಕ್ಷಿತಿಜ್‌ ತಂದೆ ಹತ್ತು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರು ಸರ್ಕಾರ ನೌಕರರಾಗಿದ್ದ ಹಿನ್ನೆಲೆ, ಪೆನ್ಷನ್‌ ಬರುತ್ತಿತ್ತು. ಪೆನ್ಷನ್‌ನಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. 

ಡೆತ್ ನೋಟ್‌ನಲ್ಲಿ ಕ್ಷಿತಿಜ್‌ ಬರೆದಿರುವ ಪ್ರಕಾರ, ತಂದೆ ತೀರಿಹೋದ ನಂತರ ಕ್ಷಿತಿಜ್‌ಗೆ ತಾಯಿ ಹಣ ನೀಡುತ್ತಿರಲಿಲ್ಲ. ಒಬ್ಬಂಟಿತನದಿಂದ ಆತ ಬಳಲುತ್ತಿದ್ದ. ತಾಯಿ ಮತ್ತು ಅವನಿಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ತಾಯಿಯನ್ನು ನೋವಿನಿಂದ ಮುಕ್ತಿಗೊಳಿಸಲೆಂದೇ ಕೊಲೆ ಮಾಡಿದ್ದೇನೆ ಎಂದೂ ಕ್ಷಿತಿಜ್‌ ಬರೆದಿದ್ದಾನೆ. ನಂತರ ಸಾಯಿಸಿದ ಮೇಲೆ ತಪ್ಪು ಭಾವ ಆತನನ್ನು ಕಾಡಿದೆ. ಇದೇ ಕಾರಣಕ್ಕೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಖಾಯಿಲೆಯ ಜೀವನ ಸಾಕು ಎಂದು ಆತ ಬರೆದುಕೊಂಡಿದ್ದಾನೆ. 

ಇದನ್ನೂ ಓದಿ: ದೆಹಲಿ: ವಿದೇಶಿ ಮಹಿಳೆ ಮುಂದೆ ಹಸ್ತಮೈಥುನ: ಕ್ಯಾಬ್ ಚಾಲಕ ಅರೆಸ್ಟ್‌

ನಿನ್ನೆ ಈ ಪ್ರಕರಣ ಬೆಳಕಿಗೆ ಬಂದಾಗ 77 ಪುಟಗಳ ಡೆತ್‌ ನೋಟಲ್ಲಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಅದರಲ್ಲಿ ತಂದೆಯನ್ನು ಆತ ಎಷ್ಟು ಮಿಸ್‌ ಮಾಡಿಕೊಂಡ. ತಾಯಿ ಮತ್ತು ಅವನಲ್ಲಿ ಎಷ್ಟು ಆರೋಗ್ಯ ಸಮಸ್ಯೆಯಿತ್ತು ಎಂಬುದನ್ನು ಬರೆದುಕೊಂಡಿದ್ದಾನೆ. ಜತೆಗೆ ಭಗವದ್ಗೀತೆಯ ಕೆಲ ಸ್ತೋತ್ರಗಳನ್ನೂ ಬರೆದಿದ್ದಾನೆ. ಆತನಿಗೆ ದುಡಿಯುವ ವಯಸ್ಸಾಗಿತ್ತು ಆದರೆ ಕೆಲಸ ಸಿಕ್ಕಿರಲಿಲ್ಲ. ಮನೆಯ ಆರ್ಥಿಕ ಸಮಸ್ಯೆ, ತಂದೆಯ ಪೆನ್ಷನ್‌ನಲ್ಲೇ ಬದುಕಬೇಕಾದ ಅನಿವಾರ್ಯತೆ ಎಲ್ಲವೂ ಆತನ ಡೆತ್‌ ನೋಟ್‌ ನಲ್ಲಿ ಬರೆದಿಡಲಾಗಿದೆ. ಮೂರು ದಿನಗಳ ಕಾಲ ಆತನ ಒಂಟಿಯಾಗಿ ತಾಯಿಯ ಶವದ ಮುಂದೆ ಕುಳಿತಿದ್ದ. ಆತ ಮಾಡಿದ ತಪ್ಪಿನ ಅರಿವು ಅವನಿಗೆ ಆಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಆತನಿಗೆ ತಪ್ಪಿನ ಅರಿವಾಗಿರಬಹುದು ಎನ್ನುತ್ತಾರೆ ಪೊಲೀಸರು.