ಡೆಬಿಟ್ ಕಾರ್ಡ್ ಕಿಸೆಯಲ್ಲಿದ್ದರೂ ಹಣ ಡ್ರಾ ಆಗುತ್ತೆ ಹುಷಾರ್..!
ಡೆಬಿಟ್ ಕಾರ್ಡ್ ದತ್ತಾಂಶ ಕದಿವ ಸ್ಕಿಮ್ಮರ್| ಹುಬ್ಬಳ್ಳಿ ಧಾರವಾಡ ಜನರಲ್ಲಿ ಹೆಚ್ಚಿದ ಆತಂಕ| ಹೊಸ ವರ್ಷದಲ್ಲಿ 12ಕ್ಕೂ ಹೆಚ್ಚು ಪ್ರಕರಣ| ಸೈಬರ್ ಕ್ರೈಂ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪಿ ಬಂಧನ| ಎಟಿಎಂಗಳೇ ಸೈಬರ್ ಖದೀಮರ ಟಾರ್ಗೆಟ್|
ಹುಬ್ಬಳ್ಳಿ(ಫೆ.10): ಪ್ರಕರಣ1; ಹುಬ್ಬಳ್ಳಿ ವಿದ್ಯಾನಗರದ ಫೋಟೋ ಸ್ಟುಡಿಯೋ ಮಾಲೀಕ ರವಿಚಂದ್ರ ಕೆಲಸ ಮಾಡುತ್ತಿದ್ದಾಗ ಅವರ ಮೊಬೈಲ್‌ಗೆ ಖಾತೆಯಿಂದ 95 ಸಾವಿರ ಡೆಬಿಟ್ ಆಗಿರುವ ಸಂದೇಶ ಬರುತ್ತದೆ. ಆ ವೇಳೆ ಅವರ ಡೆಬಿಟ್ ಕಾರ್ಡ್ ಕಿಸೆಯಲ್ಲೇ ಇತ್ತು.
ಪ್ರಕರಣ2;
ಧಾರವಾಡದ ಚನ್ನಬಸವೇಶ್ವರ ನಗರದ ನಿವಾಸಿ ಉಮೇಶ ಮದಗುಣಕಿ ಅವರ ಐಸಿಐಸಿಐ ಬ್ಯಾಂಕ್ ಖಾತೆ ಎಟಿಎಂ ಕಾರ್ಡ್ ವಾಲೆಟ್‌ನಲ್ಲೇ ಇತ್ತು. ಆದರೂ ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿದ್ದ 20 ಸಾವಿರ ಅವರ ಎಟಿಎಂ ಮೂಲಕ ಅವರಿಗೆ ಗೊತ್ತಿಲ್ಲದಂತೆ ಡ್ರಾ ಮಾಡಲಾಗಿತ್ತು.
ಹೀಗೆ ಡೆಬಿಟ್ ಕಾರ್ಡ್ ನಿಮ್ಮ ಕಿಸೆಯಲ್ಲೆ ಇರುತ್ತದೆ. ಪಾಸ್‌ವರ್ಡ್ ನಿಮಗೆ ಮಾತ್ರ ಗೊತ್ತಿರುತ್ತದೆ. ಆದರೂ, ನಿಮಗೆ ಗೊತ್ತಿಲ್ಲದಂತೆ ಲಕ್ಷಾಂತರ ರು. ಎಟಿಎಂನಿಂದ ಡ್ರಾ ಆಗುತ್ತದೆ. ಇದು ಹೇಗಾಯಿತು ಎಂಬ ಗೊಂದಲ ಒಂದು ಕಡೆಯಾದರೆ ಹಣ ಹೋಯಿತಲ್ಲ ಎಂಬ ಚಿಂತೆ ಮತ್ತೊಂದು ಕಡೆ.
ಹಿಂದೆ, ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ನಂಬಿಸಿ, ಆನ್‌ಲೈನ್ ಮೂಲಕ ಒಟಿಪಿ ಕದ್ದು, ಲಿಂಕ್ ಕಳುಹಿಸುವ ಮೂಲಕ ಹಣ ಲಪಟಾಯಿಸುತ್ತಿದ್ದ ಸೈಬರ್ ಕಳ್ಳರೀಗ ಇನ್ನೊಂದು ಮಾರ್ಗ ಕಂಡುಕೊಂಡಿದ್ದಾರೆ. ಅದೇ ‘ಸ್ಕಿಮ್ಮರ್’. ಹೌದು. ಎಟಿಎಂ ಮಷಿನ್‌ಗಳಿಗೆ ಇವುಗಳನ್ನು ಅಳವಡಿಸುವ ಮೂಲಕ ಜನತೆಯ ಗಮನಕ್ಕೆ ಬಾರದೆ ಲಕ್ಷಾಂತರ ರು. ಡ್ರಾ ಮಾಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಹೊಸ ವರ್ಷದಿಂದ ಇಲ್ಲಿವರೆಗೆ ಇಂತಹ 12ಕ್ಕೂ ಹೆಚ್ಚು ಪ್ರಕರಣಗಳು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಉಳಿದ ಮಾದರಿಯ ಸೈಬರ್ ಪ್ರಕರಣಗಳಂತೆ ಯಾರು ಯಾವ ಎಟಿಎಂಗಳಲ್ಲಿ ಸ್ಕಿಮ್ಮರ್ ಅಳವಡಿಕೆ ಮಾಡುತ್ತಿದ್ದಾರೆ? ಎಂಬುದು ಇಲ್ಲಿಯೂ ನಿಗೂಢ. ಆದರೆ, ಅಸ್ಸಾಂ, ಉತ್ತರ ಪ್ರದೇಶ ಸೇರಿ ಉತ್ತರ ಭಾರತ ಭಾಗದ ಸಂಕೀರ್ಣ ಭಾಗದ ಎಟಿಎಂಗಳಲ್ಲಿ ಹಣ ಡ್ರಾ ಆಗಿರುತ್ತದೆ ಎಂಬುದು ಮಾತ್ರ ತಿಳಿದುಬಂದಿದೆ.
10 ಕೋಟಿ ಭಾರತೀಯರ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ!
ಏನಿದು ಸ್ಕಿಮ್ಮರ್?
ಇದು ಡೆಬಿಟ್ ಕಾರ್ಡ್‌ನ ದತ್ತಾಂಶವನ್ನು ಕದಿಯುವ ಸಾಧನ. ಕೇವಲ ಇದನ್ನು ಮಾತ್ರ ಎಟಿಎಂಗೆ ಅಳವಡಿಸಲಾಗುತ್ತಿಲ್ಲ. ಡೆಬಿಟ್ ಕಾರ್ಡ್‌ನ ಪಿನ್‌ಕೋಡ್ ತಿಳಿದುಕೊಳ್ಳಲು ಪಾಸ್‌ವರ್ಡ್ ಕೀಪ್ಯಾಡ್ ಮೇಲ್ಭಾಗದಲ್ಲಿ ಮೈಕ್ರೋ ಕ್ಯಾಮೆರಾ, ಮೆಮೊರಿ ಕಾರ್ಡ್‌ನ್ನೂ ಅಳವಡಿಸಲಾಗುತ್ತಿದೆ. ಡೆಬಿಟ್ ಕಾರ್ಡ್ ಎಟಿಎಂಗೆ ಅಳವಡಿಸಿದ ತಕ್ಷಣ ಅದರ ದತ್ತಾಂಶವನ್ನು ಸ್ಕಿಮ್ಮರ್ ಕದಿಯುತ್ತದೆ. ಪಾಸ್‌ವರ್ಡನ್ನು ಮೈಕ್ರೋ ಕ್ಯಾಮೆರಾ ಚಿತ್ರೀಕರಣ ಮಾಡಿಕೊಳ್ಳುತ್ತದೆ.
ಎಟಿಎಂ ಭದ್ರತೆ ಹೇಗಿದೆ?
ಹುಧಾ ಮಹಾನಗರದಲ್ಲಿ ಎಲ್ಲ ಬ್ಯಾಂಕುಗಳದ್ದು ಸೇರಿ 88 ಎಟಿಎಂ ಕೇಂದ್ರಗಳಿವೆ. ಆದರೆ, ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹಾಗೂ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಸುಸ್ಥಿತಿಯಲ್ಲಿರುವ ವ್ಯವಸ್ಥೆ ಇಲ್ಲ. ಇಂತಹ ಎಟಿಎಂಗಳೆ ಸೈಬರ್ ಖದೀಮರ ಟಾರ್ಗೆಟ್ ಆಗುತ್ತಿದೆ. ಭದ್ರತಾ ಸಿಬ್ಬಂದಿ ಬದಲಾಗುವ ವೇಳೆ, ಸಿಸಿ ಕ್ಯಾಮೆರಾ ಕೆಟ್ಟಿರುವ ಸಂದರ್ಭ ಬಳಸಿ ಸ್ಕಿಮ್ಮರ್‌ನ್ನು ಎಟಿಎಂಗೆ ಕ್ಲೋನಿಂಗ್ ಮಾಡುತ್ತಿದ್ದಾರೆ. ಇವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಕೊಳ್ಳಬಹುದು. ಆದರೆ, ಗ್ರಾಹಕರು, ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಲಕ್ಷ್ಯ ವಹಿಸುವ ಸಾಧ್ಯತೆ ಕಡಿಮೆ. ಹೀಗಾಗಿಯೆ ಗ್ರಾಹಕರು ವಂಚನೆಗೆ ಒಳಗಾಗುತ್ತಿದ್ದಾರೆ.
ಲೀಡ್ ಬ್ಯಾಂಕ್ ಮುಖ್ಯಸ್ಥರ ಜತೆಗೆ ಸಭೆ ನಡೆಸಿದ ವೇಳೆ ಚರ್ಚಿಸಿದ್ದೇವೆ. ಭದ್ರತೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಧಾರವಾಡದಲ್ಲಿ ಸೈಬರ್ ಕ್ರೈಂ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದ್ದಾರೆ.