ನವದೆಹಲಿ(ಜ.06): ಭಾರತೀಯ ಬಳಕೆದಾರರಿಗೆ ಸೇರಿದ 10 ಕೋಟಿ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಮಾಹಿತಿ ಸೋರಿಕೆಯಾಗಿದ್ದು, ಇದನ್ನು ಡಾರ್ಕ್ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ.

ಅಮೆಜಾನ್‌, ಮೇಕ್‌ ಮೈ ಟ್ರಿಪ್‌ ಹಾಗೂ ಸ್ವಿಗ್ಗಿಯಂತಹ ಆ್ಯಪ್‌ಗಳು ಭಾರತೀಯ ಮತ್ತು ಜಾಗತಿಕ ಗ್ರಾಹಕರ ಹಣಕಾಸು ಪಾವತಿ ವ್ಯವಹಾರವನ್ನು ಜಸ್‌ಪೇ ಎಂಬ ಪೇಮೆಂಟ್‌ ಪ್ಲಾಟ್‌ಫಾಮ್‌ರ್‍ ಮೂಲಕ ನಡೆಸುತ್ತವೆ. ಜಸ್‌ ಪೇ ಮೂಲಕ ಹಣ ಪಾವತಿಸಿರುವ ಗ್ರಾಹಕರ ಮಾಹಿತಿಯೇ ಸೋರಿಕೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಸೋರಿಕೆಯಾದ ಮಾಹಿತಿಯಲ್ಲಿ ಗ್ರಾಹಕರ ಪೂರ್ಣ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್‌ ವಿಳಾಸವಿದೆ. ಜತೆಗೆ ಕಾರ್ಡಿನ ಮೊದಲ ಹಾಗೂ ಕೊನೆಯ ನಾಲ್ಕು ಅಂಕಿಗಳು ಕೂಡ ಇವೆ. ಇದಕ್ಕೆ ಪುಷ್ಟಿನೀಡುವಂತೆ ಕಳೆದ ಆಗಸ್ಟ್‌ನಲ್ಲಿ ತನ್ನ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು ಎಂದು ಬೆಂಗಳೂರು ಮೂಲದ ಸ್ವಿಗ್ಗಿ ದೃಢಪಡಿಸಿದೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

2017ರ ಮಾಚ್‌ರ್‍ನಿಂದ 2020ರ ಆಗಸ್ಟ್‌ ನಡುವೆ ನಡೆದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಇವಾಗಿವೆ. ಹಲವಾರು ಭಾರತೀಯರ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ವಾಯಿದೆ ಅಂತ್ಯಗೊಳ್ಳುವ ಸಮಯ, ಕಸ್ಟಮರ್‌ ಐಡಿ, ಕಾರ್ಡ್‌ಗಳ ಮಸುಕಾಗಿರುವ ಸಂಖ್ಯೆ, ಸ್ಪಷ್ಟವಾಗಿ ಕಾಣುವ ಮೊದಲ ಹಾಗೂ ಕೊನೆಯ ನಾಲ್ಕು ಸಂಖ್ಯೆಗಳು ಡಾರ್ಕ್ವೆಬ್‌ನಲ್ಲಿವೆ. ಇದನ್ನು ಹ್ಯಾಕರ್‌ಗಳು ಕದ್ದಿದ್ದು, ಟೆಲಿಗ್ರಾಮ್‌ ಮೂಲಕ ದಾಖಲೆ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಟ್‌ ಕಾಯಿನ್‌ ಮೂಲಕ ಹಣ ಪಾವತಿಸುವಂತೆ ಖರೀದಿದಾರರ ಎದುರು ಬೇಡಿಕೆ ಇಡುತ್ತಿದ್ದಾರೆ ಎಂದು ಸೈಬರ್‌ ಭದ್ರತೆ ಸಂಶೋಧಕ ರಾಜಶೇಖರ್‌ ರಾಜಾಹರಿಯಾ ಅವರು ತಿಳಿಸಿದ್ದಾರೆ.

ಈ ನಡುವೆ, ಮಾಹಿತಿ ಕದಿಯಲು ಆ.18ರಂದು ಅನಧಿಕೃತ ಪ್ರಯತ್ನವೊಂದು ಪತ್ತೆಯಾಗಿತ್ತು. ಅದು ಜಾರಿಯಲ್ಲಿರುವಾಗಲೇ ಅದನ್ನು ರದ್ದುಗೊಳಿಸಲಾಯಿತು. ಕಾರ್ಡ್‌ ಸಂಖ್ಯೆ, ಹಣಕಾಸು ವ್ಯವಹಾರದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಜಸ್‌ಪೇ ಸಂಸ್ಥಾಪಕ ವಿಮಲ್‌ ಕುಮಾರ್‌ ಅವರು ತಿಳಿಸಿದ್ದಾರೆ.