* ಹೊಳೆಗೆ ಉರುಳಿ ಬಿದ್ದ KSRTC ಬಸ್* ಧರ್ಮಸ್ಥಳದಿಂದ ಗುಂಡ್ಲುಪೇಟೆ ಕಡೆ ಹೊರಟಿದ್ದ ಸರ್ಕಾರಿ ಬಸ್* ಎಡಬದಿಯ ಟಯರ್ ಬ್ಲಾಸ್‌ನಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು, (ಮಾ.17): ಧರ್ಮಸ್ಥಳದಿಂದ ಗುಂಡ್ಲುಪೇಟೆ ಕಡೆ ಹೊರಟಿದ್ದ ಸರ್ಕಾರಿ ಬಸ್ (KSRTC Bus) ರಸ್ತೆ ಬದಿಯ ಹೊಳೆಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಗಡಿಕಲ್ಲು ಎಂಬಲ್ಲಿ ನಡೆದಿದೆ.
ಘಟನೆಯನಲ್ಲಿ ಬಸ್ ನಲ್ಲಿದ್ದ 25 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಸ್ ಟಯರ್ ಬ್ಲಾಸ್ಟ್ ಆದ ಕಾರಣ ಚಾಲಕನ ನಿಯಂತ್ರಣಕ್ಕೆ ಬಾರದೇ ರಸ್ತೆ ಪಕ್ಕದ ನದಿಗೆ ಬಿದ್ದಿದೆ. ರಸ್ತೆಯಿಂದ ಸುಮಾರು 25 ಅಡಿ ಆಳದಲ್ಲಿ ಹರಿಯುತ್ತಿದ್ದ ಹೊಳೆಗೆ ಬಸ್ ಇಳಿದಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ.
ಮಂಗಳೂರು: ಮೇವು ಅರಸಿ ಬಂದ ಕಾಡೆಮ್ಮೆಗಳು ಸಾವು
ಗಾಯಾಳುಗಳಿಗೆ ಸುಳ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಸೇರಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆರಂಭದಲ್ಲಿ ಪಕ್ಕದ ಸಂಪಾಜೆ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಬಳಿಕ ಗಂಭೀರ ಗಾಯಗೊಂಡವರನ್ನು ಸುಳ್ಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಒಟ್ಟು ಆರು ಅಂಬ್ಯುಲೆನ್್ಸ್ ಗಳ ಮೂಲಕ ಗಾಯಾಳುಗಳನ್ನ ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೂ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕ ಮತ್ತು ನಿರ್ವಾಹಕನಿಗೆ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಬಸ್ ವೇಗವಾಗಿ ಬರುತ್ತಿದ್ದ ವೇಳೆ ಸಂಪಾಜೆ ತಲುಪುತ್ತಿದ್ದಂತೆ ಎಡಬದಿಯ ಟಯರ್ ಸ್ಪೋಟಗೊಂಡಿದೆ. ಹೀಗಾಗಿ ಬಸ್ ಏಕಾಏಕಿ ನಿಯಂತ್ರಣ ತಪ್ಪಿದ್ದು, ತಕ್ಷಣ ಚಾಲಕ ಬಸ್ಸನ್ನ ತಿರುಗಿಸಿದ ಪರಿಣಾಮ ಪಯಶ್ವಿನಿ ಹೊಳೆಗೆ ಇಳಿದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
