* ಮೇವು ಅರಸಿ ಬಂದ ಕಾಡೆಮ್ಮೆಗಳು ಸಾವು* ರೈಲಿಗೆ ಸಿಲುಕಿ ಪ್ರಾಣತೆತ್ತ ಕಾಡೆಮ್ಮೆಗಳು* ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗಡಿಪ್ಪಿಲ ರೈಲ್ವೇ ಹಳಿಯಲ್ಲಿ ಘಟನೆ
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು, (ಮಾ.17): ಮೇವು ಅರಸಿ ಬಂದಿದ್ದ ಕಾಡೆಮ್ಮೆ ಮತ್ತು ಅದರ ಮರಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಗಡಿಪ್ಪಿಲ ರೈಲ್ವೇ ಹಳಿಯಲ್ಲಿ ನಡೆದಿದೆ.
ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೇ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಇಂದು(ಗುರುವಾರ) ಬೆಳಿಗ್ಗೆ ನಡೆದಿದೆ. ಸ್ಥಳೀಯ ಕೃಷಿ ತೋಟಗಳಿಗೆ ಮೇವು ಅರಸಿ ಬಂದಿದ್ದ ಕಾಡುಕೋಣಗಳು ಬೆಳಿಗ್ಗೆ ಮರಳಿ ಕಾಡು ಸೇರಲು ರೈಲ್ವೆ ಹಳಿಯಲ್ಲಿ ಹೋಗುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿವೆ.
ಇದೆಂಥಾ ಸಿಂಹ : ಎಮ್ಮೆಗಳ ಹಿಂಡು ನೋಡಿ ಮರ ಏರಿದ ಕಾಡಿನ ರಾಜ!
ಘಟನಾ ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್, ನರಿಮೊಗರು ಉಪ ವಲಯಾರಣ್ಯಾಧಿಕಾರಿ ಕುಮಾರಸ್ವಾಮಿ, ಇಪುತ್ತೂರು ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ಸತ್ಯನ್ ಡಿ.ಜಿ ಹಾಗೂ ದೀಪಕ್ ಭೇಟಿ ನೀಡಿ ಸಾವನ್ನಪ್ಪಿದ ಕಾಡುಕೋಣಗಳ ಮರಣೋತ್ತರ ಮಹಜರು ನಡೆಸಿದರು.
ಹಳಿ ಮಧ್ಯೆಯೇ ಸಂಚಾರ!
ಇನ್ನು ಈ ಕಾಡುಕೋಣಗಳ ಸಾವಿಗೆ ರೈಲು ಡಿಕ್ಕಿ ಹೊಡೆದಿರುವುದು ಕಾರಣವಾದರೂ ಘಟನೆ ಹೇಗೆ ನಡೆಯುತು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಭಾಗದಲ್ಲಿ ಜನ ಸಂಚಾರ ಕಡಿಮೆಯಿದ್ದು, ರೈಲು ಹಳಿಯ ಒಂದು ಭಾಗ ಸಣ್ಣದಾದ ಕಾಡಿನ ರೀತಿಯಲ್ಲಿದೆ. ಹೀಗಾಗಿ ನಿತ್ಯ ಕಾಡು ಪ್ರಾಣಿಗಳು ಅದರಲ್ಲೂ ಕಾಡೆಮ್ಮೆಗಳು ಆಹಾರ ಅರಸಿ ರೈಲು ಹಳಿ ದಾಟಿ ಈ ಭಾಗದ ಗ್ರಾಮಗಳತ್ತ ಬರುತ್ತದೆ. ಅದೇ ರೀತಿ ತನ್ನ ಮರಿಯ ಜೊತೆ ಬಂದಿದ್ದ ಈ ಕಾಡೆಮ್ಮೆ ಸ್ಥಳೀಯ ಕೃಷಿ ತೋಟಗಳಲ್ಲಿ ಮೇವು ತಿಂದು ವಾಪಾಸ್ ಆಗುತ್ತಿದ್ದವು ಎನ್ನಲಾಗಿದೆ.
ಈ ವೇಳೆ ರೈಲು ಹಳಿಯ ಮಧ್ಯ ಭಾಗದಲ್ಲೇ ಕಾಡೆಮ್ಮೆ ತನ್ನ ಮರಿಯ ಜೊತೆ ಸಂಚರಿಸುತ್ತಿದ್ದ ವೇಳೆ ಏಕಾಏಕಿ ರೈಲು ಆಗಮಿಸಿದ ಕಾರಣ ಡಿಕ್ಕಿಯಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು-ಮಂಗಳೂರು ನಡುವಿನ ಎಲ್ಲಾ ರೈಲು ರದ್ದು
ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ನಿರ್ವಹಿಸಲು ಗುರುವಾರದಿಂದಲೇ 18 ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಸುಬ್ರಹ್ಮಣ್ಯ ರಸ್ತೆ- ಮಂಗಳೂರು ಸೆಂಟ್ರಲ್ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು, ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ಪ್ರಯಾಣಿಕರ ರೈಲುಗಳು(06487/06486) ಮಾ.17ರಿಂದ 20ರವರೆಗೆ ಸಂಚರಿಸುವುದಿಲ್ಲ.
ಪುಣೆ- ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು(11097/11098) ಮಾ.19ರಂದು ಮತ್ತು 21ರಂದು ರದ್ದಾಗಿದೆ. ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ(16515/16516) ಮಾ.18 ಮತ್ತು 19ರಂದು ಇರುವುದಿಲ್ಲ.
ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು(16575/16576) ಮಾ.17 ಮತ್ತು 18ರಂದು ಇರುವುದಿಲ್ಲ. ಯವಂತಪುರ-ಮಂಗಳೂರು ಎಕ್ಸ್‌ಪ್ರೆಸ್(16539/16540) ರೈಲು ಮಾ.19 ಮತ್ತು 20ರಂದು ಸಂಚರಿಸುವುದಿಲ್ಲ.
ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್(16595/16596), ಯಶವಂತಪುರ-ಕಣ್ಣೂರು ಎಕ್ಸ್‌ಪ್ರೆಸ್(16511/16511), ಕೆಎಸ್‌ಆರ್ ಬೆಂಗಳೂರು - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್(16585/16586) ರೈಲುಗಳು ಸಂಚಾರ ಮಾ.19 ಮತ್ತು 20ರಂದು ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.
