ಹಳೇ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿ ಮುಂದೆ ತಾನು ಪೊಲೀಸ್ ವರ್ಗಾವಣೆಯಲ್ಲಿ ತೊಡಗಿರುವುದಾಗಿ ಆತ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಎನ್ನಲಾದ ದಾಖಲೆ ಬಹಿರಂಗ.
ಬೆಂಗಳೂರು(ಜ.12): ‘ಪೊಲೀಸ್ ವರ್ಗಾವಣೆ’ ದಂಧೆಯಲ್ಲಿ ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನಿರತನಾಗಿದ್ದ ಎಂಬ ಆರೋಪಕ್ಕೆ ಪುರಾವೆ ಸಿಕ್ಕಿದ್ದು, ಹಳೇ ವಂಚನೆ ಪ್ರಕರಣದಲ್ಲಿ ತನಿಖಾಧಿಕಾರಿ ಮುಂದೆ ತಾನು ಪೊಲೀಸ್ ವರ್ಗಾವಣೆಯಲ್ಲಿ ತೊಡಗಿರುವುದಾಗಿ ಆತ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಎನ್ನಲಾದ ದಾಖಲೆ ಬುಧವಾರ ಬಹಿರಂಗವಾಗಿದೆ. ಅಲ್ಲದೆ ಈ ಹೇಳಿಕೆಯಲ್ಲಿ ಗೃಹ ಸಚಿವರ ಆಪ್ತ ಸಹಾಯಕ ಎನ್ನಲಾದ ವಿಕ್ರಮ್, ಸಚಿವರ ಇಬ್ಬರು ಸ್ನೇಹಿತರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ಆಪ್ತ ಸಹಾಯಕ ಕಿರಣ್ ಹೆಸರನ್ನು ಸ್ಯಾಂಟ್ರೋ ರವಿ ಉಲ್ಲೇಖಿಸಿದ್ದಾನೆ. ಹಾಗೆಯೇ ತನ್ನಿಂದ ವರ್ಗಾವಣೆಗೊಂಡಿದ್ದರು ಎಂದು ಇಬ್ಬರು ಇನ್ಸ್‌ಪೆಕ್ಟರ್, ಓರ್ವ ಕೆಎಎಸ್ ಅಧಿಕಾರಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಹೆಸರುಗಳನ್ನು ಕೂಡಾ ಆತ ಬಯಲುಗೊಳಿಸಿದ್ದಾನೆ. ಈ ತಪ್ಪೊಪ್ಪಿಗೆ ಹೇಳಿಕೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.
ನಾನು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಆಗ ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರು ಹಾಗೂ ಮುಖಂಡರ ಪರಿಚಯವಾಗಿದ್ದರು. ಇದರಿಂದ ಕೆಲವು ಸರ್ಕಾರಿ ಅಧಿಕಾರಿಗಳು ವರ್ಗಾವಣೆಗೆ ಸಹಕಾರ ಕೋರಿದ್ದರು. ಆ ವೇಳೆ ಅವರನ್ನು ವರ್ಗಾವಣೆ ಮಾಡಿಸಿದ್ದೆ ಎಂದು ಸ್ಯಾಂಟ್ರೋ ರವಿ ಹೇಳಿಕೊಂಡಿದ್ದಾನೆ.
ಸ್ಯಾಂಟ್ರೋ ರವಿ ಬೆಳೆಸಿದ್ದೇ ಕಾಂಗ್ರೆಸ್: ಗೃಹ ಸಚಿವ ಜ್ಞಾನೇಂದ್ರ
ನಾನು ಇನ್ನು ಮುಂದೆ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ, ಹಣಕಾಸಿನ ವ್ಯವಹಾರವನ್ನೂ ಮಾಡುವುದಿಲ್ಲ ಹಾಗೂ ಯಾವುದೇ ರೀತಿಯ ರಾಜಕೀಯ ವ್ಯಕ್ತಿಗಳಿಗೆ ಧಕ್ಕೆ ಬರುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಸ್ಯಾಂಟ್ರೋ ರವಿ ಅಲವತ್ತುಕೊಂಡಿದ್ದಾನೆ.
ಏನಿದು ಪ್ರಕರಣ?
ಸರ್ಕಾರಿ ನೌರಕರರಿಗೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದಾನೆ ಎಂದು ಆರೋಪಿಸಿ ಸ್ಯಾಂಟ್ರೋ ರವಿ ವಿರುದ್ಧ 2022ರ ಜ.21ರಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಗಟ್ಟಿಗೆರೆಯ ಜಗದೀಶ್ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್ ಲೋಹಿತ್ ಅವರು, ಜ.22 ರಂದು ಸ್ಯಾಂಟ್ರೋ ರವಿಯನ್ನು ವಿಚಾರಣೆ ನಡೆಸಿದ್ದರು. ಆಗ ತನ್ನ ವರ್ಗಾವಣೆ ದಂಧೆ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಆತನ ತಪ್ಪೊಪ್ಪಿಗೆ ಹೇಳಿಕೆ ಎನ್ನಲಾದ ದಾಖಲೆ ಈಗ ಬಹಿರಂಗವಾಗಿದೆ.
ಸ್ಯಾಂಟ್ರೋ ರವಿ ಹೇಳಿಕೆ ಪೂರ್ಣ ವಿವರ ಹೀಗಿದೆ:
* ನಾನು 3-4 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದೆ. ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರು ಹಾಗೂ ರಾಜಕೀಯ ವ್ಯಕ್ತಿಗಳು ಪರಿಚಯವಾಗಿರುತ್ತಾರೆ. ಅದೇ ವೇಳೆ ನನ್ನ ಸ್ನೇಹಿತರಾದ ಮೈಸೂರು ಮೂಲದ ಗಣೇಶ್ ಬಾಬು, ರವಿಕುಮಾರ್ ಹಾಗೂ ಶ್ರೀವಸ್ಥ ಎಂಬುವರ ಜೊತೆಯಲ್ಲಿ ಹಣಕಾಸಿನ ವ್ಯವಹಾರವನ್ನು ಸಹ ಮಾಡಿಕೊಂಡಿರುತ್ತೇನೆ. ಈ ಸಮಯದಲ್ಲಿ ನಾನು ಪೊಲೀಸ್ ವರ್ಗಾವಣೆಯಲ್ಲಿ ಕೂಡಾ ತೊಡಗಿದ್ದೆ.
* 2021ರಲ್ಲಿ ಕರ್ನಾಟಕ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಇನ್ಸ್‌ಪೆಕ್ಟರ್ ಜೆ.ಕೆ.ಸುಬ್ರಹ್ಮಣ್ಯ ಅವರನ್ನು ಚನ್ನರಾಯಪಟ್ಟಣ ಠಾಣೆಗೆ ವರ್ಗಾ ಮಾಡಿಸಿಕೊಟ್ಟಿರುತ್ತೇನೆ. ಅಲ್ಲದೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಅವರನ್ನು ಮಳವಳ್ಳಿ ಠಾಣೆಗೆ ವರ್ಗಾವಣೆ ಮಾಡಿಸಿದ್ದೇನೆ.
* ನಾನು ಬಿಜೆಪಿ ಕಾರ್ಯಕರ್ತನಾಗಿದ್ದಾಗ ಅಧಿಕಾರಿಗಳು ಪರಿಚಯವಾಗಿದ್ದರು. ನನ್ನನ್ನು ಅವರು ಸಂಪರ್ಕಿಸಿ ರಾಜಕಾರಣಗಳ ಸಹಾಯದಿಂದ ಬೇರೆ ಕಡೆಗಳಲ್ಲಿ ವರ್ಗವಣೆ ಮಾಡಿಸಿಕೊಡಿವಂತೆ ವಿನಂತಿಸಿದ್ದ ನಾನು ವರ್ಗಾವಣೆ ಮಾಡಿಸಿರುತ್ತೇನೆ. ಅವರಿಂದ ನಾನು ಯಾವುದೇ ರೀತಿಯ ಕಮಿಷನ್ ಪಡೆದಿರುವುದಿಲ್ಲ.
* ಜ.9 ರಂದು ರಾತ್ರಿ 8.52ರ ಗಂಟೆ ಸುಮಾರಿಗೆ ಬೆಂಗಳೂರು ನಗರ ಬಿಡಿಎನಲ್ಲಿ ಕರ್ತನಿರ್ವಹಿಸುತ್ತಿರುವ ಕೆಎಎಸ್ ಅಧಿಕಾರಿಗಳಾದ ಆನಂದ್‌ರವರಿಗೆ ಮೈಸೂರು ಮುಡಾಗೆ ವರ್ಗವಣೆ ಮಾಡಿಸುವ ಸಂಬಂಧ ಅವರಿಗೆ ಸಂದೇಶ ಕಳುಹಿಸಿರುತ್ತೇನೆ.
* ಜ.11 ರಂದು ರಾತ್ರಿ 9.17ರ ಸುಮಾರಿಗೆ ಡಿಜಿ-ಐಜಿಪಿ ಕಚೇರಿಯಲ್ಲಿ ಕರ್ತವ್ಯನಿರ್ವಹಿಸುವ ಕಿರಣ್ ಅವರಿಗೆ ಇನ್ಸ್‌ಪೆಕ್ಟರ್‌ಗಳ ವರ್ಗವಣೆ ಸಂಬಂಧ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ಸಂದೇಶ ಕಳುಹಿಸಿದ್ದೆ.
* ಜ.13 ರಂದು ಸಂಜೆ 6.35ರ ಸುಮಾರಿಗೆ ಗೃಹ ಸಚಿವರ ಸ್ನೇಹಿತರಾದ ಶ್ರೀನಾಥ್‌ರವರಿಗೆ ಬಿ.ಬಿ.ಗಿರೀಶ್ ವರ್ಗಾವಣೆ ವಿಚಾರವಾಗಿ ಸಂದೇಶ ಕಳುಹಿಸಿದ್ದೇನೆ. ಅದೇ ದಿನ ಮಧ್ಯಾಹ್ನ 12.49 ಗಂಟೆ ಸುಮಾರಿಗೆ ಕುಂಬಳಗೋಡು ಪೊಲೀಸ್ ಠಾಣೆಗೆ ಇನ್ಸ್‌ಪೆಕ್ಟರ್ ರಾಜೀವ್ ಅವರ ವರ್ಗವಣೆ ವಿಚಾರವಾಗಿ ಮಾತನಾಡಲು ಸಂದೇಶ ಕಳುಹಿಸಿದ್ದೇನೆ.
* 2022ರ ಜ.19 ಬೆಳಗ್ಗೆ 10 ಗಂಟೆಗೆ ಗೃಹ ಸಚಿವರ ಕಚೇರಿಯಲ್ಲಿ ಪಿಎ ಆಗಿರುವ ವಿಕ್ರಮ್ (ಮೊ.86603195991)ರವರಿಗೆ ಅಶೋಕ ನಗರ ಠಾಣೆ ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರವಾಗಿ ನನ್ನ ಮೊಬೈಲ್ ನಂ.7379793374 ರಿಂದ ಸಂದೇಶಗಳನ್ನು ಕಳುಹಿಸಿರುತ್ತೇನೆ. ಇದಾದ ಎರಡು ದಿನಗಳ ನಂತರ ಜ.21 ರಂದು 11.20 ಗಂಟೆ ಸುಮಾರಿನಲ್ಲಿ ಶಿವಮೊಗ್ಗದ ಇನ್ಸ್‌ಪೆಕ್ಟರ್ ರಾಜೇಂದ್ರರವರಿಗೆ ವರ್ಗಾವಣೆ ವಿಚಾರವಾಗಿ ಅವರ ಮೊ.9886802409ಗೆ ಸಂದೇಶ ಕಳುಹಿಸಿರುತ್ತೇನೆ.
ಸ್ಯಾಂಟ್ರೋ ರವಿ ಪ್ರಕರಣ: ಏಳು ಮಂದಿಯನ್ನ ಅಮಾನತು ಮಾಡಿ ಎಂದ ಸಂತ್ರಸ್ತೆ
* ಜ.15 ರಂದು ರಾತ್ರಿ 9.44ರ ಸುಮಾರಿನಲ್ಲಿ ಬಿಜೆಪಿ ಪಕ್ಷದ ಶಿವಮೊಗ್ಗದ ಬಸವರಾಜ್ ಒಡ್ಡಾಳ ಅವರು ಗೃಹ ಸಚಿವರಿಗೆ ಆತ್ಮೀಯರಾಗಿದ್ದು, ಇವರಿಗೆ ಇನ್ಸ್‌ಪೆಕ್ಟರ್ ಬಿ.ಬಿ. ಗಿರೀಶ್ ಅವರನ್ನು ಅಶೋಕ ನಗರ ಠಾಣೆಗೆ ವರ್ಗಾವಣೆ ಮಾಡಿಸುವ ಸಂಬಂಧ ಸಂದೇಶಗಳನ್ನು ಕಳುಹಿಸಿರುತ್ತೇನೆ.
* 2022ರ ನವೆಂಬರ್ 7 ರಂದು ಬೆಳಗ್ಗೆ 9.41ರ ಸುಮಾರಿಗೆ ಮೈಸೂರು ಐಜಿಪಿ ಕಚೇರಿಯ ಪಿಎ ಆಗಿರುವ ಮಹೇಶ್‌ರವರಿಗೆ ಹಲಗೂರು ಠಾಣೆ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ ವಿಚಾರವಾಗಿ ಮಾಹಿತಿ ನೀಡಿರುತ್ತೇನೆ.
