ಆತ ಎಲ್ಲೇ ಇದ್ದರೂ ಬಂಧಿಸಿ ಮಟ್ಟ ಹಾಕ್ತೇವೆ, ನನಗೂ ಆತನಿಗೂ ಸಂಬಂಧವಿಲ್ಲ, ಇತರ ಜನರಂತೆ ಆತನೂ ನನ್ನ ಜತೆ ಫೋಟೋ ತೆಗೆಸಿಕೊಂಡಿದ್ದಾನೆ. ನನ್ನನ್ನು ಭೇಟಿ ಆಗೋರಿಗೆ ಪೊಲೀಸ್ ಸರ್ಟಿಫಿಕೇಟ್ ತನ್ನಿ ಎನ್ನೋಕಾಗುತ್ತಾ?: ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು(ಜ.12): ಸ್ಯಾಂಟ್ರೋ ರವಿ ಬೆಳೆದಿರುವುದೇ ಕಾಂಗ್ರೆಸ್ ಕಾಲದಲ್ಲಿ. ಅವನು ಬೆಳೆಯಲು ಕಾಂಗ್ರೆಸ್ಸೇ ಕಾರಣ. ಆತ ಎಲ್ಲೇ ಇದ್ದರೂ ನಮ್ಮ ಪೊಲೀಸರು ಹುಡುಕಿ ಎಳೆದು ತರುತ್ತಾರೆ. ನಾವು ಅವನನ್ನು ಮಟ್ಟಹಾಕುತ್ತೇವೆ ಅವನನ್ನು ಬಿಡುವುದಿಲ್ಲ ಮಟ್ಟಹಾಕುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಂಧನಕ್ಕೆ ಮೈಸೂರು ಪೊಲೀಸರು ತಂಡಗಳನ್ನು ರಚಿಸಿಕೊಂಡು ಹುಡುಕುತ್ತಿದ್ದಾರೆ. ಅವನ ಫೋನ್ ಸ್ವಚ್‌್ಡ ಆಫ್ ಆಗಿದೆ. ಹಾಗಾಗಿ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆದರೆ, ಎಲ್ಲೆ ಇದ್ದರೂ ನಮ್ಮ ಪೊಲೀಸರು ಬಿಡೋದಿಲ್ಲ. ಹುಡುಕಿ ತರುತ್ತಾರೆ ಎಂದರು.
ಸ್ಯಾಂಟ್ರೋ ರವಿ ಬಗ್ಗೆ ಗೊತ್ತಿದ್ದರೂ ಬಿಜೆಪಿ ಸರ್ಕಾರ ಅವರನ್ನು ಬಂಧಿಸಿರಲಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆಯಲ್ಲಾ ಎಂಬ ಪ್ರಶ್ನೆಗೆ, ಅವನು ಇಷ್ಟುಬೆಳೆಯಲು ಕಾಂಗ್ರೆಸ್ಸೇ ಕಾರಣ. ಕಾಂಗ್ರೆಸ್ ಅಧಿಕಾರಾವಧಿಯಲ್ಲೇ ಅವನು ಬೆಳೆದಿರೋದು. ದೂರು ದಾಖಲಾಗಿದೆ ಅವನ್ನು ಬಿಡೋದಿಲ್ಲ, ಬಂಧಿಸಿ ಮಟ್ಟಹಾಕುತ್ತೇವೆ ಎಂದರು.
ಸ್ಯಾಂಟ್ರೋ ರವಿ ಪ್ರಕರಣ: ಕುಮಾರಸ್ವಾಮಿ ಹತಾಶೆ ಸ್ಥಿತಿಗೆ ತಲುಪಿದ್ದಾರೆ: ಆರಗ
ಸ್ಯಾಂಟ್ರೋ ರವಿ ಬಿಜೆಪಿ ಸಚಿವರ ಜತೆ ಮಾತನಾಡಿರುವ ಆಡಿಯೋ, ವಿಡಿಯೋ, ಫೋಟೋಗಳನ್ನು ತೆಗೆಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಜನಪ್ರತಿನಿಧಿಗಳಾದವರು ಸಾರ್ವಜನಿಕ ಜೀವನದಲ್ಲಿ ಇರುತ್ತಾರೆ. ಎಲ್ಲರಿಗೂ ಲಭ್ಯವಿರುತ್ತಾರೆ. ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ನಮ್ಮ ಮನೆಗೆ ಬರೋ ಎಲ್ಲರಿಗೂ ಪೊಲೀಸ್ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನು ಅನ್ನೋಕೆ ಆಗುತ್ತಾ. ಬಂದವರಲ್ಲಿ ಅನೇಕರು ನಮ್ಮೊಂದಿಗೆ ಫೋಟೋ ತೆಗೆದುಕೊಳ್ತಾರೆ. ಏನು ಮಾಡೋದು’ ಎಂದರು.
ಸ್ಯಾಂಟ್ರೋ ರವಿ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ ನಾವು ಯಾರನ್ನೂ ಬಿಟ್ಟಿಲ್ಲ. ಅದೇ ರೀತಿ ಈ ರವಿ ಇರಲಿ ಯಾರೇ ಇರಲಿ ಏನೇ ಅಕ್ರಮಗಳನ್ನು ನಡೆಸಿದ್ದರೂ ಎಲ್ಲವನ್ನೂ ಹೊರಗೆ ತರುತ್ತೇವೆ. ಮೇಲ್ನೋಟಕ್ಕೆ ಏನೂ ಹೇಳಲಾಗಲ್ಲ. ಬಂಧಿಸಿ ವಿಚಾರಣೆ ನಡೆಸುತ್ತೇವೆ’ ಎಂದರು.
