MLA, MP ಟಿಕೆಟ್ ಕೊಡಿಸುವುದಾಗಿ ನಂಬಿಸಿ ಪಂಗನಾಮ: ಸ್ಯಾಂಡಲ್​ವುಡ್​ ನಟ-ನಿರ್ದೇಶಕ ವಿರೇಂದ್ರಬಾಬು ಬಂಧನ

Sandalwood Director Veerendra Babu Arrested: ಚುನಾವಣೆಯಲ್ಲಿ ಎಮ್‌ಎಲ್‌ಎ, ಎಂಪಿಗೆ ಟಿಕೆಟ್ ಕೊಡಿಸುತ್ತೇನೆ ಎಂದು  ಜನರಿಗೆ ಪಂಗನಾಮ ಹಾಕುತ್ತಿದ್ದ ಆರೋಪದಡಿ ನಿರ್ದೇಶಕ ವಿರೇಂದ್ರಬಾಬುನನ್ನು ಬಂಧಿಸಲಾಗಿದೆ

Sandalwood Actor Director Veerendra Babu arrested for duping people in the name MLA  MP Ticket mnj

ವರದಿ: ಚೇತನ್ ಮಹಾದೇವ

ಬೆಂಗಳೂರು (ಜು. 15): ಮುಂದಿನ ಚುನಾವಣೆಯಲ್ಲಿ ಎಮ್‌ಎಲ್‌ಎ, ಎಂಪಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿ ಹಣ ಪಡೆದು ಜನರಿಗೆ ಪಂಗನಾಮ ಹಾಕುತ್ತಿದ್ದ ಆರೋಪದಡಿ ಸ್ಯಾಂಡಲ್​ವುಡ್‌ನಲ್ಲಿ​ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ  ವಿರೇಂದ್ರಬಾಬುನನ್ನು ಪೋಲಿಸರು ಬಂಧಿಸಿದ್ದಾರೆ. ಅಲ್ಲದೆ ಲರ್ನಿಂಗ್​ ಆ್ಯಪ್​ ಹೆಸರಲ್ಲೂ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪ ಸಹ ಈ ವ್ಯಕ್ತಿಯ ಮೇಲಿದೆ.

ಕಳೆದ ಕೆಲ ವರ್ಷಗಳ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ರಿಲೀಸ್​ ಆಗಿದ್ದ ಸ್ವಯಂ ಕೃಷಿ ಅನ್ನೋ ಸಿನಿಮಾ ರಿಲೀಸ್​ ಆಗಿತ್ತು. ಈ ಚಿತ್ರದಲ್ಲಿ ನಟಿಸೋದರ ಜತೆಗೆ ಅದರ ನಿರ್ದೇಶನ ಮಾಡಿದ್ದ ವಿರೇಂದ್ರಬಾಬು ಮೇಲೆ ಈಗ ಕೋಟಿ ಕೋಟಿ ವಂಚನೆ ಆರೋಪ ಬಂದಿದೆ.  

ಬೆಂಗಳೂರಿನ ಯಲಹಂಕ ವಾಸಿಯಾಗಿರುವ ವಿರೇಂದ್ರಬಾಬು, ಮುಂದಿನ ಚುನಾವಣೆ ವೇಳೆಗೆ ರಾಷ್ಟ್ರೀಯ ಜನಹಿತ ಪಕ್ಷ ಮಾಡೋದಾಗಿ ಹೇಳಿದ್ದರಂತೆ. ಆ ಪಕ್ಷಕ್ಕೆ ರಾಜ್ಯಾದ್ಯಂತ, ಎಂಎಲ್‌ಎ, ಎಂಪಿ ಸೇರಿದಂತೆ ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಹುಡುಕಾಡುತ್ತಿದ್ದರು ಎನ್ನಲಾಗಿದೆ.. 

ಎಮ್‌ಎಲ್‌ಎ ಆಗಬೇಕು ಎಂದು ಆಸೆ ಇರೋರು, ಲಕ್ಷಾಂತರ ರೂಪಾಯಿ ಹಣ ನೀಡಬೇಕಾಗುತ್ತೆ. ಆ ಹಣದಲ್ಲಿ ಆರ್ಯನ್​ ಇನ್ಫೋ ಟೆಕ್​ ಅನ್ನೋ ಕಂಪೆನಿ ಅಡಿ ವಿಕೇರ್​ ಲರ್ನಿಂಗ್​ ಆ್ಯಪ್​ ಮೂಲಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆನ್ಲೈನ್ ಶಿಕ್ಷಣ ಸೇರಿದಂತೆ, ವಿವಿಧ ಉಪಕರಣಗಳನ್ನು ನೀಡುವ ಮೂಲಕ ಜನರನ್ನು ತಮ್ಮ ಪಕ್ಷದ ಕಡೆಗೆ ಸೆಳೆಯುವ ಪ್ಲಾನ್ ಬಗ್ಗೆ ಹೇಳಿಕೊಂಡಿದ್ರು. 

ಇದನ್ನೂ ಓದಿ: ಬೆಳಗಾವಿ: ಮೋಸ್ಟ್ ವಾಂಟೆಡ್‌ 'ಮಹಾ'ವಂಚಕ ಅರೆಸ್ಟ್‌..!

ಇದನ್ನು ನಂಬಿದ ಬಸವರಾಜ್ ಘೋಷಲ್ ಎಂಬ ವ್ಯಕ್ತಿ ಸೇರಿದಂತೆ ಹಲವಾರು ಮಂದಿ ವಿರೇಂದ್ರಬಾಬುಗೆ 1.8 ಕೋಟಿ ಹಣ ನೀಡಿದ್ದರಂತೆ. ಈಗ ಹಣ ಪಡೆದ ವೀರೇಂದ್ರ ಬಾಬು ಸೇರಿದಂತೆ ಏಳು ಜನರ ಮೇಲೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿರೇಂದ್ರಬಾಬು ಸಿನಿಮಾದಲ್ಲಿ ಕೈಸುಟ್ಟುಕೊಂಡ ಮೇಲೆ ತನ್ನದೇ ಆದ ಕೇಬಲ್ ಚಾನಲ್, ಕರ್ನಾಟಕ ರಕ್ಷಣಾ ಪಡೆ ಸಂಘಟನೆ ಕೂಡ ಆರಂಭಿಸಿದ್ದರು. ಈ ಸಂಘಟನೆಗೂ ತಾಲೂಕು ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿದಂತೆ ವಿವಿಧ ಪೋಸ್ಟ್ ಕೊಡಸ್ತೀನಿ ಅಂತಾ ಸಾಕಷ್ಟು ಜನರ ಬಳಿ ಹಣ ತೆಗೆದುಕೊಂಡು ವಂಚಿಸಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿಅಂಚೆ ಸಿಬ್ಬಂದಿಯಿಂದಲೇ ಫಲಾನುಭವಿಗಳಿಗೆ 1 ಕೋಟಿ 27 ಲಕ್ಷ ರೂ. ವಂಚನೆ!

ಅಲ್ಲದೇ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ಹಣ ಕಲೆಕ್ಟ್ ಮಾಡಿ ಯಾವುದೇ ಸಹಾಯ ಮಾಡದೇ ವಂಚಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸೂಕ್ತ  ಕ್ರಮ ತೆಗೆದುಕೊಂಡು ತನಿಖೆ ನಡೆಸುವಂತೆ ದೂರುದಾರ ಬಸವರಾಜ್ ಘೋಷಲ್ ದೂರು ನೀಡಿದ್ದಾರೆ. 

ಸದ್ಯ ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ವೀರೇಂದ್ರ ಬಾಬು ಸೇರಿದಂತೆ ಮೂವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇನ್ನು ಬಿಬಿಎಂಪಿ ಮತ್ತು ಎಮ್‌ಎಲ್‌ಎ ಚುನಾವಣೆ ಹತ್ತಿರವಾಗ್ತಿದ್ದಂತೆ ನಾನಾ ರೀತಿಯ ವಂಚನೆಗಳು ಬೆಳಕಿಗೆ ಬರುತ್ತಿದ್ದು, ಅಧಿಕಾರದ ಆಸೆಗೆ ಬಿದ್ದು ಹಣ ನೀಡೋರು ಕೊಂಚ ಎಚ್ಚರ ವಹಿಸಿದ್ರೆ ಉತ್ತಮ.

Latest Videos
Follow Us:
Download App:
  • android
  • ios