ಬೆಳಗಾವಿ: ಮೋಸ್ಟ್ ವಾಂಟೆಡ್ 'ಮಹಾ'ವಂಚಕ ಅರೆಸ್ಟ್..!
* ಸಿಮೆಂಟ್, ಸ್ಟೀಲ್ ವ್ಯವಹಾರದಲ್ಲಿ ಹಣ ಡಬಲ್ ಮಾಡೋದಾಗಿ ನೂರಾರು ಕೋಟಿ ವಂಚನೆ
* ಕರ್ನಾಟಕ ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಶಿವಾನಂದ ಕುಂಬಾರ ಅರೆಸ್ಟ್
* ಶಿವಾನಂದ ಕುಂಬಾರ ಬಳಿ ಬ್ಲ್ಯಾಕ್ ಮನಿ ಇನ್ವೆಸ್ಟ್ ಮಾಡಿದ್ರಾ ಉದ್ಯಮಿಗಳು?
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜು.02): ಕಳೆದ ಒಂದು ವರ್ಷದಿಂದ ಕರ್ನಾಟಕ ಮಹಾರಾಷ್ಟ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಮಹಾವಂಚಕನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಸಿಮೆಂಟ್ ಸ್ಟೀಲ್ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಬರುತ್ತೆ ಎಂದು ಕರ್ನಾಟಕ ಮಹಾರಾಷ್ಟ್ರದ ವಿವಿಧೆಡೆ ಉದ್ಯಮಿಗಳು, ಸಾರ್ವಜನಿಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಶಿವಾನಂದ ಕುಂಬಾರ್‌ನನ್ನು ಬೆಳಗಾವಿ ಅಪರಾಧ ವಿಭಾಗದ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆ ತಂದಿದ್ದಾರೆ.
ಸಿಮೆಂಟ್, ಸ್ಟೀಲ್ ದಂಧೆಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು ನೂರಾರು ಕೋಟಿ ವಂಚನೆ ಮಾಡಿ ಕಳೆದ ವರ್ಷ ಜುಲೈನಲ್ಲಿ ಭೂಗತನಾಗಿದ್ದ ಶಿವಾನಂದ ಕುಂಬಾರ ಹಿಡಿಯಲು ಕರ್ನಾಟಕ ಮಹಾರಾಷ್ಟ್ರ ಪೊಲೀಸರು ಸತತ ಪ್ರಯತ್ನ ನಡೆಸಿದ್ದರು. ಆದರೆ ಈ ಚಾಲಾಕಿ ವಂಚಕ ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದನೆಂಬ ಮಾಹಿತಿ ಬಂದಿತ್ತು. ನೇಪಾಳ ಪೊಲೀಸರನ್ನು ಇಂಟರ್‌ಪೋಲ್, ಧೂತಾವಾಸ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು ಶಿವಾನಂದ ಕಂಬಾರ ಬಂಧನಕ್ಕೆ ಬಲೆ ಬೀಸಿದ್ದರು. ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ & ಟೀಮ್ ಅರೆಸ್ಟ್ ಮಾಡಿದೆ.
ಬೀಗ ಹಾಕಿದ ಮನೆಗಳೇ ಖದೀಮನ ಟಾರ್ಗೆಟ್: ತಂದೆ-ಮಗ ಸೇರಿ ಮೂವರ ಬಂಧನ
ಶಿವಾನಂದ ಕುಂಬಾರ ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ನಿವಾಸಿ. ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ನೆಲೆಸಿದ್ದ ಈತ ಮಹಾರಾಷ್ಟ್ರದ ಕೋಪರಗಾಂವ್ ಬಿಳಿ ಆಶ್ರಮವೊಂದರಲ್ಲಿ ಕಾರು ಚಾಲಕನಾಗಿದ್ದ. ಈ ವೇಳೆ ಸಿಮೆಂಟ್, ಸ್ಟೀಲ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂದು ಜನರನ್ನು ಪುಸಲಾಯಿಸಿ ಕೋಟ್ಯಂತರ ಹಣ ಪಡೆದಿದ್ದ. ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿ ಬಳಿಕ ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500ಕೋಟಿಗೂ ಹೆಚ್ಚು ಹಣ ಪಡೆದು ಹಣ ವಾಪಸ್ ನೀಡದೇ ಕುಟುಂಬ ಸಮೇತ ಪರಾರಿಯಾಗಿದ್ದ. ಶಿವಾನಂದ ಕುಂಬಾರ ಬಳಿ ಬೆಳಗಾವಿ ಜಿಲ್ಲೆಯ ಹಲವು ಉದ್ಯಮಿಗಳು, ವ್ಯಾಪಾರಸ್ಥರು ಹಣ ಹೂಡಿಕೆ ಮಾಡಿದ್ದರು. ವೋಲ್‌ಸೇಲ್ ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬುವನ ಮೂಲಕ ಬಹುತೇಕ ವೋಲ್‌ಸೇಲ್ ತರಕಾರಿ ವ್ಯಾಪಾರಸ್ಥರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ರು. ಆದ್ರೆ ಈ ಬಗ್ಗೆ ದೂರು ನೀಡಲು ಹಲವರು ಮುಂದೆ ಬಂದಿರಲಿಲ್ಲ. ಬೆಳಗಾವಿ ತಾಲೂಕಿನ ಜಾಫರವಾಡಿ ನಿವಾಸಿ ಯಲ್ಲಪ್ಪ ಮನಗುತಕರ್‌ಗೆ 75 ಲಕ್ಷ ರೂ. ಹಣ ನೀಡಿದ್ದ, ಹಣ ವಾಪಸ್ ನೀಡದಿದ್ದಾಗ ಕಳೆದ ವರ್ಷ ಬೆಳಗಾವಿ ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406, 420 ಅಡಿ ಪ್ರಕರಣ ದಾಖಲಾಗಿತ್ತು. ಗಂಭೀರ ಪ್ರಕರಣವಾದ ಹಿನ್ನೆಲೆ ತನಿಖೆ ಜವಾಬ್ದಾರಿಯನ್ನು ಅಪರಾಧ ವಿಭಾಗದ ಎಸಿಪಿ ಎನ್.ವಿ.ಬರಮನಿಯವರಿಗೆ ನೀಡಲಾಗಿತ್ತು. ಈ ವೇಳೆ ಶಿವಾನಂದ ಕುಂಬಾರ ಸಾರ್ವಜನಿಕರಿಂದ ಪಡೆದ ಹಣ ಸ್ವಂತಕ್ಕೆ ಬಳಸಿಕೊಂಡು ಹಣ ನೀಡಿದವರಿಗೆ ವಾಪಸ್ ಕೊಡದೇ ಹೆಂಡತಿ ಮಕ್ಕಳ ಜೊತೆ ಮಾಲ್ಡೀವ್ಸ್, ಈಜಿಪ್ಟ್, ದುಬೈನಲ್ಲಿ ಅಡ್ಡಾಡಿ ಕೊನೆಗೆ ನೇಪಾಳನಲ್ಲಿ ಬಂದು ಮನೆ ಮಾಡಿಕೊಂಡು ವಾಸವಿದ್ದ. ನೇಪಾಳದಲ್ಲಿನ ಪೊಲೀಸರನ್ನು ಇಂಟರ್‌ಪೋಲ್ ಹಾಗೂ ಧೂತಾವಾಸ ಮೂಲಕ ಸಂಪರ್ಕಿಸಿ ಹಸ್ತಾಂತರ ಪ್ರಕ್ರಿಯೆ ಇದ್ದಾಗ ಆರೋಪಿ ಶಿವಾನಂದ ಕುಂಬಾರ ಮುಂಬೈಗೆ ಬರ್ತಾನೆ ಎಂಬ ಖಚಿತ ಮಾಹಿತಿ ಬಂದಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ಜೂನ್ 26ರಂದು ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ & ಟೀಮ್ ಮುಂಬೈಗೆ ತೆರಳಿ ಆರೋಪಿ ಶಿವಾನಂದ ಕುಂಬಾರ ಬಂಧಿಸಿ ಕರೆತಂದಿದ್ದಾರೆ.
ಆಶ್ರಮದ ಚಾಲಕ ಕೋಟ್ಯಾಧೀಶ ವಂಚಕನಾದ ಕಥೆ
ಇನ್ನು ಪೊಲೀಸ್ ಮೂಲಗಳ ಪ್ರಕಾರ ಬಂಧಿತ ವಂಚಕ ಮಹಾರಾಷ್ಟ್ರದ ಕೋಪರಗಾಂವದಲ್ಲಿ ಆಶ್ರಮವೊಂದರ ಕಾರು ಚಾಲಕನಾಗಿದ್ದ. 2009ರ ವೇಳೆ ಅಹಮ್ಮದ್ ನಗರದಿಂದ ತನ್ನ ವಂಚನೆ ಆರಂಭಿಸಿದ್ದ ಈತ ಕರ್ನಾಟಕದವರೆಗೂ ವಿಸ್ತರಿಸಿದ್ದ. ಕಡಿಮೆ ದರದಲ್ಲಿ ಸ್ಟೀಲ್ & ಸೀಮೆಂಟ್ ನೀಡುವ ಯೋಜನೆ ರೂಪಿಸಿದ್ದ ಈತ ಅಹಮ್ಮದ್ ನಗರದ ಕೋಪರಗಾಂವ್‌ನಲ್ಲಿ ವ್ಯವಹಾರ ಆರಂಭಿಸಿದ್ದ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸಿಮೆಂಟ್, ಸ್ಟೀಲ್ ಪೂರೈಕೆ ಮಾಡುತ್ತಿದ್ದ. ಪ್ರತಿ ಚೀಲ ಸಿಮೆಂಟ್‌ಗೆ ಮಾರುಕಟ್ಟೆ ದರಕ್ಕಿಂತ 60 ರಿಂದ 70 ರೂಪಾಯಿ ಕಡಿಮೆ ಹಣ ಪಡೆದ್ರೆ, ಪ್ರತಿ ಕಿಲೋ ಕಬ್ಬಿಣಕ್ಕೆ 10 ರಿಂದ 20ರೂಪಾಯಿ ಕಡಿಮೆ ಹಣ ಪಡೆಯುತ್ತಿದ್ದ. ಯಾರಿಗೆ ಸಿಮೆಂಟ್ ಬೇಡವೋ ಅವರ ಬಳಿ ಹಣ ಹೂಡಿಕೆ ಮಾಡಿ, ಹೂಡಿಕೆ ಮಾಡಿದ ಹಣ ವರ್ಷದೊಳಗೆ ದುಪ್ಪಟ್ಟು ಆಗುತ್ತೆ ಅಂತಾ ನಂಬಿಸುತ್ತಿದ್ದ.
ಮೊದಲಿಗೆ ತಾನು ಹೇಳಿದಷ್ಟು ಹಣ ನೀಡಿ ಅವರ ನಂಬಿಕೆ ಗಳಿಸಿ ಮತ್ತಷ್ಟು ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಇದೇ ರೀತಿ ಉದ್ಯಮಿ, ಬಿಲ್ಡರ್ ಗಳ ವಿಶ್ವಾಸಕ್ಕೆ ಪಡೆದು ಹಣ ಡಬಲ್ ಮಾಡೋದಾಗಿ ನೂರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದನಂತೆ. ಮಹಾರಾಷ್ಟ್ರದ ಅಹಮದ್ ನಗರ, ಕೋಪರಗಾಂವ್, ಔರಂಗಾಬಾದ್, ವೈಜಾಪುರ, ನಾಶಿಕ್, ಸಿನ್ನರ್, ಯೆವಲಾ,ಪುಣೆ, ಕೊಲ್ಲಾಪುರ, ಇಚಲಕರಂಜಿ, ಸಾಂಗಲಿ,ಸಾತಾರಾ ಹಾಗೂ ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಸಂಕೇಶ್ವರ ಸೇರಿ ವಿವಿಧೆಡೆಯಿಂದ ಸಾರ್ವಜನಿಕರ, ವ್ಯಾಪಾರಸ್ಥರ ಬಳಿ ಸುಮಾರು 500 ಕೋಟಿಗೂ ಹೆಚ್ಚು ಹಣ ಪಡೆದು ಪರಾರಿಯಾಗಿದ್ದ ಆರೋಪ ಕೇಳಿ ಬಂದಿತ್ತು. ಹಲವು ಉದ್ಯಮಿಗಳು, ವ್ಯಾಪಾರಸ್ಥರು ಕಪ್ಪು ಹಣ ಹೂಡಿಕೆ ಮಾಡಿದ ಬಗ್ಗೆಯೂ ಮಾಹಿತಿ ಇದೆ.
ಹುಬ್ಬಳ್ಳಿ: ಮಲತಾಯಿ ಕಿರುಕುಳ ಸಹಿಸದೆ ತಂದೆಯನ್ನೇ ಕೊಂದ ಮಕ್ಕಳು..!
ಮಹಾವಂಚಕ ಶಿವಾನಂದ ಕುಂಬಾರ ವಶಕ್ಕೆ ಪಡೆಯಲು ಮಹಾರಾಷ್ಟ್ರ ಪೊಲೀಸರು ಬೆಳಗಾವಿಗೆ ಆಗಮಿಸಿದ್ದಾರೆ. ಕಳೆದ ವರ್ಷ ಜುಲೈ 28ರಿಂದ ತಲೆಮರಿಸಿಕೊಂಡಿದ್ದ ಆರೋಪಿ ಶಿವಾನಂದ ಕುಂಬಾರ ವೇಷ ಬದಲಿಸಿ ಕುಟುಂಬ ಸಮೇತ ದೇಶ ವಿದೇಶ ಸುತ್ತುತ್ತಿದ್ದ. ಇನ್ನು ಶಿವಾನಂದ ಕುಂಬಾರ ವಿರುದ್ಧ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS Act. 2019)ರಡಿ ಕೇಸ್ ದಾಖಲಿಸಿ ಶಿವಾನಂದ ಕುಂಬಾರ ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಇದ್ದ ಆಸ್ತಿ ಜಪ್ತಿ ಮಾಡಿದ್ದಾರೆ. ಶಿವಾನಂದ ಕುಂಬಾರಗೆ ಸೇರಿದ 7 ವಿವಿಧ ಬ್ಯಾಂಕ್‌ಗಳ ಖಾತೆಗಳು ಫ್ರೀಜ್ ಮಾಡಿದ್ದಾರೆ.
ಇನ್ನು ಶಿವಾನಂದ ಕಂಬಾರ ಹಲವರ ಬಳಿ ಹಣ ಪಡೆದು ವಂಚನೆ ಮಾಡಿದ್ರೆ ಕೆಲವೇ ಕೆಲವು ಜನ ದೂರು ನೀಡಿದ್ದಾರೆ. ಇನ್ನು ಕೆಲವರು ಬೇರೆ ಬೇರೆಯವರ ಹೆಸರಲ್ಲಿ ದೂರು ದಾಖಲಿಸಿದ ಮಾಹಿತಿ ಇದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ತಮ್ಮ ಬಳಿಯ ಕಪ್ಪು ಹಣ ಹೂಡಿಕೆ ಮಾಡಿದ್ದರೂ ಎಂಬ ಸಂಶಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಅದೇನೇ ಇರಲಿ ಹಣ ಡಬಲ್ ಆಗುತ್ತೆ ಅಂತಾ ಸಾಲ ಸೋಲ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಮಾರಿ ಹಣ ನೀಡಿದವರೂ ಸಹ ಕಂಗಾಲಾಗಿದ್ದಾರೆ.