ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್‌ ಅಧಿಕಾರಿಗಳು ವಿದೇಶದಿಂದ ಮಾದಕವಸ್ತು ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಯಾಣಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ 38 ಕೋಟಿ ರು. ಮೌಲ್ಯದ 7.72 ಕೆ.ಜಿ ಕೊಕೇನ್‌ ಜಪ್ತಿ ಮಾಡಿದ್ದಾರೆ.

ಬೆಂಗಳೂರು : ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್‌ ಅಧಿಕಾರಿಗಳು ವಿದೇಶದಿಂದ ಮಾದಕವಸ್ತು ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಯಾಣಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ 38 ಕೋಟಿ ರು. ಮೌಲ್ಯದ 7.72 ಕೆ.ಜಿ ಕೊಕೇನ್‌ ಜಪ್ತಿ ಮಾಡಿದ್ದಾರೆ.

ಬ್ರೆಜಿಲ್‌ನ ಸಾವೊ ಪಾಲೊ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ತಡೆದು ತಪಾಸಣೆ ನಡೆಸಿದ್ದಾಗ ಆತನ ಬಳಿ 7.72 ಕೆ.ಜಿ ಕೊಕೇನ್‌ ಇರುವುದು ಪತ್ತೆಯಾಗಿದೆ. ಇವುಗಳ ಮೌಲ್ಯ ಅಂದಾಜು 38 ಕೋಟಿ ರು. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಕ್‌ನಲ್ಲಿ ಕೊಕೇನ್‌ ಇಟ್ಟು ಸಾಗಾಟ:

ಆರೋಪಿಯು ಪುಸ್ತಕಗಳ ಮಧ್ಯೆ ಕೊಕೇನ್‌ ಇಟ್ಟು ಯಾರಿಗೂ ಅನುಮಾನ ಬಾರದಂತೆ ಅಕ್ರಮವಾಗಿ ಮಾದಕ ವಸ್ತುವನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ. ಬೆಂಗಳೂರಿನ ಕಸ್ಟಮ್ಸ್‌ ಅಧಿಕಾರಿಗಳು ಅನುಮಾನದ ಮೇರೆಗೆ ಪ್ರಯಾಣಿಕನನ್ನು ತಡೆದು ಪರಿಶೀಲನೆ ನಡೆಸಿದ್ದಾಗ ಬುಕ್‌ಗಳ ರಟ್ಟಿನ ಭಾಗಕ್ಕೆ ಮಾದಕವಸ್ತುಗಳು ಅಂಟಿಸಿರುವುದು ಕಂಡು ಬಂದಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್‌ ಅಧಿಕಾರಿಗಳು ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3.14 ಕೋಟಿಯ ಹೈಡ್ರೋಪೋನಿಕ್ ಗಾಂಜಾ ಜಪ್ತಿ:

ಮತ್ತೊಂದು ಪ್ರಕರಣದಲ್ಲಿ ವಿದೇಶದಿಂದ ಮಾದಕವಸ್ತು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು 3.14 ಕೋಟಿ ರು. ಮೌಲ್ಯದ 8.98 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಬ್ಯಾಂಕಾಕ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ಅನುಮಾನದ ಮೇರೆಗೆ ತಡೆದು ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆತನ ಬಳಿ ಇದ್ದ ಅಂದಾಜು 3.14 ಕೋಟಿ ರು. ಮೌಲ್ಯದ 8.98 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಜಾ ಮಾರಾಟ ಯತ್ನ-ಇಬ್ಬರು ಪೆಡ್ಲರ್‌ ಸೆರೆ:

ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪತ್ಯೇಕವಾಗಿ ಜ್ಞಾನಭಾರತಿ ಹಾಗೂ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊತ್ತನೂರು ಹತ್ತಿರದ ನಾಗೇನಹಳ್ಳಿ ಹಾಗೂ ಉಲ್ಲಾಳ ಕೆರೆ ಸಮೀಪ ಪೆಡ್ಲರ್‌ಗಳು ಬಲೆಗೆ ಬಿದ್ದಿದ್ದು, ಆರೋಪಿಗಳಿಂದ 11 ಗ್ರಾಂ ಅಫೀಮು, 4 ಕೆಜಿ ಗಾಂಜಾ ಹಾಗೂ 24 ಗ್ರಾಂ ಎಡಿಎಂಎ ಸೇರಿದಂತೆ 4.90 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಕಡಿಮೆ ಬೆಲೆಗೆ ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.