ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ 'ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್' ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಿತ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.

ಹಾವೇರಿ(ಜ.7): ಚಿಟ್ಸ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ನುಂಗಿಹಾಕಿದ್ದ ವಂಚಕನೊಬ್ಬ ನ್ಯಾಯಾಲಯಕ್ಕೆ ಬಂದ ವೇಳೆ ಗ್ರಾಹಕರ ಕೈಗೆ ಸಿಕ್ಕಿಬಿದ್ದಿದ್ದು, ರಾಣೇಬೆನ್ನೂರು ರಸ್ತೆಯಲ್ಲಿ ಹೈಡ್ರಾಮಾವೇ ನಡೆದಿದೆ.

ಕೋಟಿ ಕೋಟಿ ಹಣ ಪಂಗನಾಮ

ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ 'ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್' ಮಾಲೀಕ ಈಶ್ವರ ಚಿನ್ನಿಕಟ್ಟಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತಿದ್ದಾರೆ. ಹೆಚ್ಚಿನ ಲಾಭದ ಆಸೆ ತೋರಿಸಿ ನೂರಾರು ಗ್ರಾಹಕರಿಂದ ಹಣ ಸಂಗ್ರಹಿಸಿ ಕೈಕೊಟ್ಟಿದ್ದ ಈತನ ವಿರುದ್ಧ ಜನರು ಕೆಂಡಾಮಂಡಲವಾಗಿದ್ದರು.

ನ್ಯಾಯಾಲಯದ ಬಳಿಯೇ ಗ್ರಾಹಕರಿಂದ ಅಟ್ಯಾಕ್

ಆರೋಪಿ ಈಶ್ವರ ಚಿನ್ನಿಕಟ್ಟಿ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಮಾಹಿತಿಯನ್ನು ತಿಳಿದ ಗ್ರಾಹಕರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ, ಕಷ್ಟಪಟ್ಟು ಸಂಪಾದಿಸಿದ ಹಣ ಕಳೆದುಕೊಂಡಿದ್ದ ಗ್ರಾಹಕರು ಪೊಲೀಸರ ವಾಹನಕ್ಕೆ ಅಡ್ಡ ಹಾಕಿ ವಂಚಕನನ್ನು ಹೊರಗೆ ಎಳೆದಿದ್ದಾರೆ.

ಪೊಲೀಸ್ ವಾಹನ ತಡೆದು ಬೀದಿ ಮೆರವಣಿಗೆ!

ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಆಕ್ರೋಶಿತ ಗ್ರಾಹಕರು ಆರೋಪಿಯನ್ನು ರಸ್ತೆಯಲ್ಲೇ ನಡೆಸಿಕೊಂಡು ಹೋಗಲು ನಿರ್ಧರಿಸಿದರು. ಪೊಲೀಸರ ವಾಹನಕ್ಕೆ ಅವಕಾಶ ನೀಡದೆ, ವಂಚಕ ಈಶ್ವರನನ್ನು ಬೀದಿಯಲ್ಲೇ ಮೆರವಣಿಗೆ ಮಾಡಿಕೊಂಡು ಪೊಲೀಸ್ ಠಾಣೆಯವರೆಗೂ ಎಳೆದೊಯ್ದರು. ಈ ವೇಳೆ ರಸ್ತೆಯುದ್ದಕ್ಕೂ ಜನರು ಆತನ ವಿರುದ್ಧ ಆಕ್ರೋಶ ಹೊರಹಾಕಿದರು.

ಠಾಣೆಯ ಮುಂದೆ ಹಣಕ್ಕಾಗಿ ಪಟ್ಟು

ಪೊಲೀಸ್ ಠಾಣೆಯ ಆವರಣದಲ್ಲಿ ನೂರಾರು ಗ್ರಾಹಕರು ಜಮಾಯಿಸಿದ್ದು, ನಮ್ಮ ಹಣ ವಾಪಸ್ ಕೊಡಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ನಮಗೆ ನ್ಯಾಯ ಬೇಕು' ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.