ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರು ಚುನಾವಣಾ ವೆಚ್ಚಕ್ಕಾಗಿ ಪಡೆದ 99 ಲಕ್ಷ ರೂ. ಸಾಲ ಮರುಪಾವತಿಸದೆ ವಂಚಿಸಿದ್ದಾರೆಂದು ಉದ್ಯಮಿಯೊಬ್ಬರು ದೂರು ನೀಡಿದ್ದಾರೆ. ಶಾಸಕರು ನೀಡಿದ ಚೆಕ್ ಬೌನ್ಸ್ ಆಗಿದ್ದು, ಖಾತೆ ಮುಚ್ಚಿರುವುದು ಬೆಳಕಿಗೆ ಬಂದಿದೆ. ಈಗ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೀದರ್ (ಡಿ.29): ಕಳೆದ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೆಚ್ಚಕ್ಕಾಗಿ ಪಡೆದಿದ್ದ 99 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸದೆ ವಂಚಿಸಿರುವ ಆರೋಪದ ಮೇಲೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ಸಂಜು ಸುಗುರೆ ನೀಡಿದ ದೂರಿನನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ದೂರಿನಲ್ಲಿ ಉಲ್ಲೇಖಿಸಿರುವಂತೆ, 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸಕ ಶರಣು ಸಲಗರ್ ಅವರು ತಮ್ಮ ಚುನಾವಣಾ ವೆಚ್ಚಗಳಿಗಾಗಿ ಉದ್ಯಮಿ ಸಂಜು ಸುಗುರೆ ಅವರಿಂದ ಒಟ್ಟು 99 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು. ಸಾಲಕ್ಕೆ ಶ್ಯೂರಿಟಿಯಾಗಿ ಶಾಸಕರು ತಮ್ಮ ಸಹಿ ಇರುವ ಖಾಲಿ ಚೆಕ್ ಹಾಗೂ ಲೆಟರ್ ಹೆಡ್‌ಗಳನ್ನು ನೀಡಿದ್ದರು ಎಂದು ಹೇಳಲಾಗಿದೆ. ಆದರೆ, ಚುನಾವಣೆ ಮುಗಿದು ಹಲವು ತಿಂಗಳು ಕಳೆದರೂ ಶಾಸಕರು ಹಣವನ್ನು ಹಿಂದಿರುಗಿಸಿರಲಿಲ್ಲ. ಉದ್ಯಮಿ ಹಲವು ಬಾರಿ ಹಣಕ್ಕಾಗಿ ಮನವಿ ಮಾಡಿದರೂ ಶಾಸಕರು ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ನಂತರ 14-09-2025 ರಂದು ಹಿರಿಯರ ಸಮ್ಮುಖದಲ್ಲಿ ನಡೆದ ಸಂಧಾನದಲ್ಲಿ, ಹಣ ನೀಡುವುದಾಗಿ ಒಪ್ಪಿಕೊಂಡ ಶಾಸಕರು ಚೆಕ್ ನೀಡಿದ್ದರು.

ದೌರ್ಜನ್ಯ ಮತ್ತು ಬೆದರಿಕೆ ಆರೋಪ:

ಸೆಪ್ಟೆಂಬರ್ 16ರಂದು ಉದ್ಯಮಿ ಸಂಜು ಸುಗುರೆ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಚೆಕ್ ಬ್ಯಾಂಕಿಗೆ ಹಾಕುವ ಕುರಿತು ಖಚಿತಪಡಿಸಿಕೊಳ್ಳಲು ಶಾಸಕರ ಮನೆಗೆ ತೆರಳಿದ್ದರು. ಈ ವೇಳೆ ಶಾಸಕರು ಅಸಭ್ಯವಾಗಿ ವರ್ತಿಸಿ, ಚೆಕ್ ಬ್ಯಾಂಕಿಗೆ ಹಾಕದಂತೆ ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಹಣ ಕೇಳಲು ಬಂದ ಉದ್ಯಮಿಯ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬ್ಯಾಂಕ್ ಖಾತೆ ಕ್ಲೋಸ್!

ಸೆಪ್ಟೆಂಬರ್ 19ರಂದು ಶಾಸಕರು ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಸಲ್ಲಿಸಿದಾಗ, ಆ ಖಾತೆಯು ಈಗಾಗಲೇ ಮುಚ್ಚಲ್ಪಟ್ಟಿದೆ (Account Closed) ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ತಮಗೆ ವಂಚನೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಉದ್ಯಮಿ ಸಂಜು ಸುಗುರೆ ಬೆಂಗಳೂರಿನ ACJM ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ಈಗ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಶಾಸಕರ ವಿರುದ್ಧ ಕೇಳಿಬಂದಿರುವ ಈ ವಂಚನೆ ಮತ್ತು ಬೆದರಿಕೆ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.