*   ಸೆ.12ರಂದು ನಡೆದಿದ್ದ ರೌಡಿ ಕೊಲೆ*   ಹಂತಕರಿಂದ ತಪ್ಪಿಸಿಕೊಳ್ಳಲು ಫುಟ್ಬಾಲ್‌ ಕ್ರೀಡಾಂಗಣಕ್ಕೆ ನುಗ್ಗಿದ್ದ ರೌಡಿ*   ಬಾಗಿಲು ಮುರಿದು ಒಳ ನುಗ್ಗಿ ಹತ್ಯೆ​ಗೈ​ದಿ​ದ್ದ ಹಂತ​ಕರು  

ಬೆಂಗಳೂರು(ಸೆ.15): ಕಳೆದ ಮೂರು ದಿನಗಳ ಹಿಂದೆ (ಸೆ.12) ಕೊಲೆಯಾದ ರೌಡಿಶೀಟರ್‌ ಅರವಿಂದ್‌ನನ್ನು(30), ಹತ್ಯೆಗೂ ಮೊದಲು ಆರೋಪಿಗಳು ಅಟ್ಟಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಂತಕರಿಂದ ತಪ್ಪಿಸಿಕೊಳ್ಳಲು ಅರವಿಂದ್‌ ಫುಟ್ಬಾಲ್‌ ಕ್ರೀಡಾಂಗಣಕ್ಕೆ ನುಗ್ಗಿದ್ದು, ಹೆಲ್ಮೆಟ್‌ ಧರಿಸಿರುವ ಹಂತಕರು ಓಡಿಸಿಕೊಂಡು ಹೋಗಿರುವ ವಿಡಿಯೋ ಭಯ ಹುಟ್ಟಿಸುವಂತಿದೆ. ಮತ್ತೊಂದೆಡೆ ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಗೆ ಹಳೇ ದ್ವೇಷ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಲ ದಿನ​ಗ​ಳ ಹಿಂದಷ್ಟೇ ಕೊಲೆಯಾದ ಅರ​ವಿಂದ್‌, ಸುಭಾಷ್‌ ಎಂಬಾ​ತನ ಮೇಲೆ ಹಲ್ಲೆ ನಡೆ​ಸಿದ್ದ. ಈ ದ್ವೇಷದ ಹಿನ್ನೆ​ಲೆ​ಯಲ್ಲಿ ಹತ್ಯೆ​ಗೈ​ದಿ​ರುವ ಸಾಧ್ಯ​ತೆ​ಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಫುಟ್ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ರೌಡಿಶೀಟರ್‌ ಹತ್ಯೆ

ಸಿಸಿ ಕ್ಯಾಮೆ​ರಾ​ದಲ್ಲಿ ಏನಿ​ದೆ?

ಆರಂಭ​ದಲ್ಲಿ ಹಲ್ಲೆ​ಗೊ​ಳ​ಗಾ​ಗಿದ್ದ ಅರ​ವಿಂದ್‌​ ಪ್ರಾಣ ಉಳಿ​ಸಿ​ಕೊ​ಳ್ಳಲು ಫುಟ್ಬಾಲ್‌ ಮೈದಾ​ನಕ್ಕೆ ಓಡಿ​ದ್ದಾನೆ. ಆಗ ನಾಲ್ವರು ಮಾರ​ಕಾ​ಸ್ತ್ರ​ಗ​ಳನ್ನು ಹಿಡಿದು ಮೈದಾ​ನಕ್ಕೆ ನುಗ್ಗಿ​ದ್ದಾರೆ. ಮೈದಾ​ನದ ಒಳಾಂಗ​ಣದಲ್ಲಿ ಹಂತ​ಕರು ಹುಡು​ಕಾಟ ನಡೆ​ಸು​ತ್ತಿ​ರುವ ದೃಶ್ಯ ಸೆರೆ​ಯಾ​ಗಿದೆ. ಹಂತಕರು ಮುಖ ಚಹರೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಹೆಲ್ಮೆಟ್‌ ಧರಿಸಿದ್ದಾರೆ. ಮತ್ತೊಬ್ಬ ಟೋಪಿ ಹಾಕಿ, ಮಾಸ್ಕ್‌ ಧರಿಸಿದ್ದ. ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಓಡುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಬೆಚ್ಚಿ ಬೀಳುವಂತೆ ಮಾಡಿದೆ.

ಭಾರತಿನಗರ ಮತ್ತು ಡಿ.ಜೆ.ಹಳ್ಳಿ ಠಾಣೆಯ ರೌಡಿಶೀಟರ್‌ ಆಗಿದ್ದ ಅರವಿಂದ್‌ ಮೇಲೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿತ್ತು. ಭಾರತಿನಗರ ಠಾಣೆಯ ರೌಡಿಶೀಟರ್‌ ಕೂಡ ಆಗಿದ್ದ. ಭಾರತಿನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಅರವಿಂದ್‌ನನ್ನು ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್‌, ಪುಟ್ಬಾಲ್‌ ತಂಡವೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಸೆ.12ರಂದು ಸಂಜೆ ತನ್ನ ಕೆಡಿ​ಎ​ಫ್‌ ತಂಡದ ಜತೆ ಆಟವಾಡುತ್ತಿ​ದ್ದಾಗ ಅರ​ವಿಂದ್‌ ಮೇಲೆ ನಾಲ್ವರು ಮಾರ​ಕಾಸ್ತ್ರ ಬೀಸಿ​ದ್ದಾರೆ. ಅಲ್ಲಿಂದ ತಪ್ಪಿ​ಸಿ​ಕೊಂಡ ಅರ​ವಿಂದ್‌, ಮೈದಾ​ನಕ್ಕೆ ನುಗ್ಗಿದ್ದಾನೆ. ಬಳಿಕ ರೆಫ್ರಿ ಕೊಠ​ಡಿಗೆ ತೆರಳಿ ಲಾಕ್‌ ಮಾಡಿ​ಕೊಂಡಿ​ದ್ದಾನೆ. ಆದರೂ ಬಿಡದ ಹಂತ​ಕರು ಬಾಗಿಲು ಮುರಿದು ಒಳ ನುಗ್ಗಿ ಹತ್ಯೆ​ಗೈ​ದಿ​ದ್ದಾ​ರೆ.