ಬೆಂಗಳೂರಿನಲ್ಲಿ ಮತ್ತೆ ರಾಕ್ಷಸ ಪ್ರವೃತ್ತಿಯ ಕಾರ್ ರೈಡ್: ಬಾನೆಟ್ ಏರಿದವನ 2 ಕಿ.ಮೀ ಎಳೆದೊಯ್ದಳು
ಇತ್ತೀಚೆಗೆ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಾಗಡಿ ಟೋಲ್ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ವೃದ್ಧ ಕಾರು ಚಾಲಕನನ್ನು 1 ಕಿ.ಮೀ. ಎಳೆದೊಯ್ದ ಘಟನೆ ಮಾಸುವ ಮುನ್ನವೇ ಶುಕ್ರವಾರ ಮತ್ತೊಂದು ಅದೇ ಮಾದರಿಯ ಘಟನೆ ನಡೆದಿದೆ.
ಬೆಂಗಳೂರು (ಜ.21): ಇತ್ತೀಚೆಗೆ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮಾಗಡಿ ಟೋಲ್ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ವೃದ್ಧ ಕಾರು ಚಾಲಕನನ್ನು 1 ಕಿ.ಮೀ. ಎಳೆದೊಯ್ದ ಘಟನೆ ಮಾಸುವ ಮುನ್ನವೇ ಶುಕ್ರವಾರ ಮತ್ತೊಂದು ಅದೇ ಮಾದರಿಯ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಾಗ್ವಾದದ ಬಳಿಕ ಕ್ಷಮೆ ಕೇಳುವಂತೆ ಒತ್ತಾಯಿಸಿ ಕಾರಿನ ಬಾನೆಟ್ ಏರಿ ಕುಳಿತ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬರು ಸಿನಿಮೀಯ ಶೈಲಿಯಲ್ಲಿ ಸುಮಾರು 2 ಕಿ.ಮೀ. ಚಲಾಯಿಸಿಕೊಂಡು ಹೋಗಿದ್ದಾರೆ.
ಶುಕ್ರವಾರ ಬೆಳಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳ ಮುಖ್ಯ ರಸ್ತೆಯ ಮಂಗಳೂರು ಇಂಡಿಪೆಂಡೆಂಟ್ ಕಾಲೇಜು ಬಳಿ ಘಟನೆ ನಡೆದಿದೆ. ಈ ಸಂಬಂಧ ದೂರು-ಪ್ರತಿದೂರು ದಾಖಲಿಸಿರುವ ಪೊಲೀಸರು, ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳಾದ ಎಂ.ವಿ.ಲೇಔಟ್ ನಿವಾಸಿ ಕಾರು ಚಾಲಕಿ ಟೆಕ್ಕಿ ಪ್ರಿಯಾಂಕಾ, ಮತ್ತೊಂದು ಕಾರಿನ ಚಾಲಕ ಮರಿಯಪ್ಪನಪಾಳ್ಯದ ಉದ್ಯಮಿ ದರ್ಶನ್, ಸುಜನ್, ಯಶವಂತ್ ಹಾಗೂ ವಿನಯ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವೇಗೌಡರ ಕಾಲಿನ ಧೂಳಿಗೂ ನಳಿನ್ ಕಟೀಲ್ ಸಮನಲ್ಲ: ಎಚ್.ಡಿ.ಕುಮಾರಸ್ವಾಮಿ
ಸಾಫ್ಟ್‌ವೇರ್ ದಂಪತಿ ಪ್ರಿಯಾಂಕಾ ಹಾಗೂ ಪ್ರಮೋದ್ ಶುಕ್ರವಾರ ಬೆಳಗ್ಗೆ 10.15ರಲ್ಲಿ ಟಾಟಾ ಎಕ್ಸಾನ್ ಕಾರಿನಲ್ಲಿ ಅಂಬೇಡ್ಕರ್ ಕಾಲೇಜು ಬಳಿಯಿರುವ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಹೋಗಿದ್ದರು. ಮನೆಗೆ ವಾಪಾಸ್ ಬರುವಾಗ ನಾಗರಬಾವಿ ಕಡೆಯಿಂದ ರಿಂಗ್ ರೋಡ್‌ನಲ್ಲಿ ಬಂದು ಉಲ್ಲಾಳ ಮುಖ್ಯ ರಸ್ತೆ ಹತ್ತಿರ ಬಲಕ್ಕೆ ತಿರುವು ಪಡೆದಿದ್ದಾರೆ. ಇದೇ ವೇಳೆ ಹೋಟೆಲ್ ಉದ್ಯಮಿ ಎನ್.ದರ್ಶನ್, ತನ್ನ ಸ್ನೇಹಿತರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ರೆಸ್ಟೋರೆಂಟ್‌ಗೆ ಹೊರಟ್ಟಿದ್ದರು. ಆಗ ಉಲ್ಲಾಳ ಮುಖ್ಯ ರಸ್ತೆ ಸಿಗ್ನಲ್‌ನಲ್ಲಿ ಜ್ಞಾನಭಾರತಿ ಕಡೆಗೆ ಹೋಗಲು ಪ್ರಯತ್ನಿಸುವಾಗ ಎದುರಿಗೆ ಪ್ರಿಯಾಂಕಾ ಕಾರು ಬಂದು ರಸ್ತೆ ಜಾಮ್ ಆಗಿದೆ.
ಪ್ರಿಯಾಂಕಾ ಅಶ್ಲೀಲ ಸನ್ನೆ: ದರ್ಶನ್, ‘ಸಿಗ್ನಲ್ ಇದ್ದರೂ ಯಾಕೇ ಬಂದೇ’ ಎಂದು ಪ್ರಿಯಾಂಕಾಳನ್ನು ಪ್ರಶ್ನಿಸಿದ್ದಾನೆ. ಆಗ ಪ್ರಿಯಾಂಕಾ ತನ್ನ ಕೈನ ಮಧ್ಯದ ಬೆರಳು ತೋರಿಸಿ ಅಶ್ಲೀಲ ಪದ ಬಳಸಿ ದರ್ಶನ್‌ನನ್ನು ನಿಂದಿಸಿ ಮುಂದಕ್ಕೆ ತೆರಳಿದ್ದಾಳೆ. ಅಶ್ಲೀಲ ಸನ್ನೆಯಿಂದ ರೊಚ್ಚಿಗೆದ್ದ ದರ್ಶನ್, ಪ್ರಿಯಾಂಕಾಳ ಟಾಟಾ ಎಕ್ಸಾನ್ ಕಾರನ್ನು ಹಿಂಬಾಲಿಸಿ ಮಂಗಳೂರು ಪಿಯು ಕಾಲೇಜು ಬಳಿ ಅಡ್ಡಗಟ್ಟಿಕ್ಷಮೆ ಕೇಳುವಂತೆ ಪ್ರಿಯಾಂಕಾಳನ್ನು ಒತ್ತಾಯಿಸಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದಿದೆ.
ಗಲಾಟೆ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಪ್ರಿಯಾಂಕಾ ಕಾರು ಚಲಾಯಿಸಿಕೊಂಡು ಸ್ಥಳದಿಂದ ತೆರಳಲು ಮುಂದಾದಾಗ ದರ್ಶನ್ ಬಾನೆಟ್ ಮೇಲೆ ಕುಳಿತು ಕ್ಷಮೆಗೆ ಒತ್ತಾಯಿಸಿದ್ದಾನೆ. ಕಾರು ನಿಲ್ಲಿಸದ ಪ್ರಿಯಾಂಕಾ ದಂಪತಿ ವೇಗವಾಗಿ ವಿದ್ಯಾನಿಕೇತನ ಶಾಲೆ ಕಡೆಯಿಂದ ಜ್ಞಾನಭಾರತೀ ಆರ್‌ಟಿಒ ಕಚೇರಿ ಮಾರ್ಗವಾಗಿ ಕಾರನ್ನು ಚಲಾಯಿಸಿದ್ದಾರೆ.
ಕಾರು ಹಿಂಬಾಲಿಸಿದ ಬೈಕ್ ಸವಾರರು: ಸಿನಿಮೀಯ ಶೈಲಿನಲ್ಲಿ ದರ್ಶನ್ ಕಾರಿನ ಬಾನೆಟ್ ಮೇಲೆ ನೇತಾಡುವುದನ್ನು ನೋಡಿದ ದ್ವಿಚಕ್ರ ವಾಹನ ಸವಾರರು, ಪ್ರಿಯಾಂಕಾಳ ಕಾರನ್ನು ನಿಲ್ಲಿಸುವಂತೆ ಕೂಗಿಕೊಂಡು ಹಿಂಬಾಲಿಸುತ್ತಾರೆ. ಕಾರನ್ನು ತಡೆದು ನಿಲ್ಲಿಸುವಂತೆ ಸಾರ್ವಜನಿಕರಿಗೆ ಕೂಗಿ ಹೇಳುತ್ತಾರೆ. ಕಾರು ಸುಮಾರು ಎರಡು ಕಿ.ಮೀ. ಸಾಗಿದ ಬಳಿಕ ಸಂಕಲ್ಪ ಆಸ್ಪತ್ರೆ ಬಳಿ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಕಾರನ್ನು ಅಡ್ಡಗಟ್ಟಿದರ್ಶನ್‌ನನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಎರಡು ಗುಂಪುಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಎರಡೂ ಕಡೆಯ ವಾದ ಆಲಿಸಿ ದೂರು-ಪ್ರತಿದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಕಡೆ ಬಂಧನ: ಹೋಟೆಲ್ ಉದ್ಯಮಿ ದರ್ಶನ್ ನೀಡಿದ ದೂರಿನ ಮೇರೆಗೆ ಪ್ರಿಯಾಂಕಾ, ಪ್ರಮೋದ್, ನಿತೀಶ್ ವಿರುದ್ಧ ಕೊಲೆ ಯತ್ನ, ಬೆದರಿಕೆ, ನಿಂದನೆ, ಅಡ್ಡಾದಿಡ್ಡಿ ವಾಹನ ಚಾಲನೆ, ಅಶ್ಲೀಲ ಪದ ಬಳಕೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಿಯಾಂಕಾ ಪತಿ ಪ್ರಮೋದ್ ನೀಡಿದ ದೂರಿನ ಮೇರೆಗೆ ದರ್ಶನ್ ಹಾಗೂ ಆತನ ಸ್ನೇಹಿತರ ವಿರುದ್ಧ ಲೈಂಗಿಕ ದೌರ್ಜನ್ಯ, ಅಶ್ಲೀಲ ನಿಂದನೆ, ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎರಡೂ ಕಡೆಯಿಂದ ಐವರನ್ನು ಬಂಧಿಸಲಾಗಿದೆ.
ಜೆಡಿಎಸ್ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ, 20 ಸೀಟು ಗೆದ್ದರೆ ಜಾಸ್ತಿ: ಸಿದ್ದರಾಮಯ್ಯ
ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ನಡೆದ ಘಟನೆ ಸಂಬಂಧ ಎರಡೂ ಕಡೆಯಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಐವರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ
-ಲಕ್ಷ್ಮಣ್ ನಿಂಬರಗಿ, ಪಶ್ಚಿಮ ವಿಭಾಗದ ಡಿಸಿಪಿ.