ಬೆಂಗಳೂರು(ಡಿ.28): ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಡಿವೈಎಸ್ಪಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ವಿಜಯನಗರ ನಿವಾಸಿ ನಿವೃತ್ತ ಡಿವೈಎಸ್‌ಪಿ ಹನುಮಂತಪ್ಪ (65) ಮೃತರು. ಹನುಮಂತಪ್ಪ ಅವರು ವಿಜಯನಗರದ ವಿನಾಯಕ ಲೇಔಟ್‌ನಲ್ಲಿ ಕುಟುಂಬದ ಜತೆ ನೆಲೆಸಿದ್ದರು. ಭಾನುವಾರ ಬೆಳಗ್ಗೆ ಎಷ್ಟೊತ್ತಾದರೂ ಮಲಗುವ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢವಾಗಿ ಮೃತಪಟ್ಟ ಡಿವೈಎಸ್ಪಿ ಲಕ್ಷ್ಮಿ ನಾಪತ್ತೆ ಕೇಸ್‌ಗೆ ಹೊಸ ಟ್ವಿಸ್ಟ್

ಕೆಲ ತಿಂಗಳಿಂದ ಹನುಮಂತಪ್ಪ ಅವರು ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗಾಗಿ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ತೆರಳಬೇಕಿತ್ತು. ಕ್ಯಾನ್ಸರ್‌ ರೋಗದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ವಿಜಯನಗರ ಪೊಲೀಸರು ಮಾಹಿತಿ ನೀಡಿದರು.

1981ನೇ ಬ್ಯಾಚ್‌ನ ಪಿಎಸ್‌ಐ ಆಗಿ ಸೇವೆ ಆರಂಭಿಸಿದ್ದ ಹನುಮಂತಪ್ಪ, ಇನ್‌ಸ್ಪೆಕ್ಟೆರ್‌ ಹುದ್ದೆಗೆ ಮುಂಬಡ್ತಿ ಪಡೆದು ಮಾಗಡಿರಸ್ತೆ, ಬ್ಯಾಟರಾಯನಪುರ ಠಾಣೆ ಸೇರಿದಂತೆ ಮುಂತಾದ ಕಡೆ ಕರ್ತವ್ಯನಿರ್ವಹಿಸಿದ್ದರು. ವಿಜಯನಗರ, ಯಶವಂತಪುರ, ಕೆಂಗೇರಿ ಗೇಟ್‌ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ, ಸೇವೆಯಿಂದ ನಿವೃತ್ತಿ ಹೊಂದಿದ್ದರು.