ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ಕಳೆದ ಐದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಜಾರ್ಖಂಡ್‌ನ ದುಮ್ಕಾ ಪಟ್ಟಣದ ಅಂಕಿತಾ ಜೀವ ಕೈಚೆಲ್ಲಿದ್ದಾರೆ. ಫೋನ್‌ನಲ್ಲಿ ಅಂಕಿತಾ ಮಾತನಾಡಲು ನಿರಾಕರಿಸಿದ ಕಾರಣಕ್ಕೆ, ಶಾರುಖ್ ಎನ್ನುವ ವ್ಯಕ್ತಿ ಪಿಯುಸಿ ವಿದ್ಯಾರ್ಥಿನಿ ಅಂಕಿತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹಚ್ಚಿದ್ದ. ಅಂಕಿತಾ ಸಾವು ಕಂಡ ಬೆನ್ನಲ್ಲಿಯೇ ಜಾರ್ಖಂಡ್‌ನ ಧುಮ್ಕಾದಲ್ಲಿ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
ಧುಮ್ಕಾ (ಆ. 29): ಕಳೆದ ಐದು ದಿನಗಳಿಂದ ಬದುಕಬೇಕು ಎನ್ನುವ ಆಸೆಯಲ್ಲಿ ಹೋರಾಟ ನಡೆಸಿದ್ದ ಅಂಕಿತಾ ಕೊನೆಗೂ ತನ್ನ ಪ್ರಾಣ ಬಿಟ್ಟಿದ್ದಾರೆ. ರಾಂಚಿಯ ರಿಮ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಅಂಕಿತಾ ಸಾವು ಕಂಡಿದ್ದಾರೆ. ಅಂಕಿತಾ ಸಾವು ಕಂಡ ಸುದ್ದಿ ಧುಮ್ಕಾ ನಗರಕ್ಕೆ ತಲುಪುತ್ತಿದ್ದಂತೆ, ಆಕ್ರೋಶಗೊಂಡ ಜನರು ಧುಮ್ಕಾ ಟವರ್ ಚೌಕ್‌ನಲ್ಲಿ ರಸ್ತೆ ತಡೆ ನಡೆಸಿ, ಆಕೆಯ ಸಾವಿಗೆ ಕಾರಣನಾದ ಶಾರುಖ್‌ನ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಂಕಿತಾ ಸಾವಿಗೆ ನ್ಯಾಯ ದೊರಕಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನು ಸ್ಥಳೀಯ ಅಧಿಕಾರಿಗಳು ಕೂಡ ಅಂಕಿತಾಳ ಮನೆಗೆ ಆಗಮಿಸಿದ್ದಾರೆ. ಐದು ದಿನಗಳ ಹಿಂದೆ ಧುಮ್ಕಾ ನಗರ ಪೊಲೀಟ್ ಠಾಣೆ ವ್ಯಾಪ್ತಿಯ ಜರುವಾಡಿಹ್ ಪ್ರದೇಶದ ನಿವಾಸಿ ಶಾರುಖ್, ಅಂಕಿತಾ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದ. ಅಂಕಿತಾ ಫೋನ್‌ನಲ್ಲಿ ತನ್ನ ಮೊತೆ ಮಾತನಾಡಲು ನಿರಾಕರಿಸಿದಳು ಎನ್ನುವ ಕಾರಣಕ್ಕಾಗಿ ಶಾರುಖ್ ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿದ್ದ. ತೀವ್ರವಾಗಿ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅಂಕಿತಾಳನ್ನು ಧುಮ್ಕಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಗಾಗಿ ರಾಂಚಿಯ ರಿಮ್ಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಸೋಮವಾರ ಮುಂಜಾನೆ ಅಂಕಿತಾ ಸಾವು ಕಂಡಿದ್ದಾರೆ.
ಬಿಗಿ ಭದ್ರತೆಯ ನಡುವೆ ಅಂಕಿತಾ (Ankita) ಅವರ ಶವವನ್ನು ಮನೆಯಿಂದ ಹೊರತರಲಾಗಿದೆ. ಆಕೆಯ ಅಂತಿಮ ಸಂಸ್ಕಾರ ಬೆಟ್ಟಯ್ಯ ಘಾಟ್‌ನಲ್ಲಿ ನಡೆಯಲಿದೆ. ಅಂತಿಮ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು. ನಗರದ ವಾತಾವರಣ ಹಾಳು ಮಾಡಬಾರದೆಂಬ ಉದ್ದೇಶದಿಂದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಅಂಕಿತಾ ಅವರನ್ನು ಸುಟ್ಟು ಹಾಕಿರುವ ಘಟನೆ ಆಗಸ್ಟ್ 23ರಂದು ಬೆಳಗಿನ ಜಾವ 4 ಗಂಟೆಗೆ ನಡೆದಿದೆ. ಈ ವೇಳೆ ಅಂಕಿತಾ ಅವರ ಅಜ್ಜಿ, ತಂದೆ, ಚಿಕ್ಕಣ್ಣ ಮನೆಯಲ್ಲಿದ್ದರು. ಅಂಕಿತಾ ನಿದ್ದೆಯಿಂದ ಏಳುವ ಹೊತ್ತಿಗೆ ಬೆಂಕಿ ಆಕೆಯ ಸುತ್ತ ಸುತ್ತಿತ್ತು. ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆದರೂ, ಸಾಹಸ ಮಾಡಿ ಕೋಣೆಯ ಬಾಗಿಲು ತೆಗೆದು, ಮನೆಯ ಹೊರಗಡೆ ಬಕೆಟ್‌ನಲ್ಲಿ ಇಟ್ಟಿದ್ದ ನೀರನ್ನು ಸುರಿದುಕೊಂಡಿದ್ದಳು. ಹಾಗಿದ್ದರೂ, ಆಕೆಯ ಮೇಲಿನ ಬೆಂಕಿ ಆರಿ ಹೋಗಿರಲಿಲ್ಲ. ಆಕೆಯ ಕಿರುಚಾಟವನ್ನು ಕೇಳಿ, ಮನೆಯವರು ಎಚ್ಚರಗೊಂಡು, ಕಂಬಳಿಯನ್ನು ಆಕೆಗೆ ಸುತ್ತಿ ಬೆಂಕಿಯನ್ನು ನಂದಿಸಿದ್ದರು. ತೀವ್ರ ಗಾಯವಾಗಿದ್ದ ಕಾರಣಕ್ಕೆ ಆಕೆಯನ್ನು ಧುಮ್ಕಾ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿದ ತಕ್ಷಣ ನಗರ ಠಾಣೆ ಪೊಲೀಸರು ಆರೋಪಿ ಶಾರುಖ್ ನನ್ನು ಬಂಧಿಸಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕಾಮುಕ ಶಿಕ್ಷಕ ಅರೆಸ್ಟ್, ಅಜುರುದ್ದೀನ್ ಕಾಮಪುರಾಣದ ಹಿಂದೆ ಲವ್ ಜಿಹಾದ್..!
ಶಾರುಖ್ (Shahrukh) ಪ್ರತಿದಿನ ಕಿರುಕುಳ ನೀಡುತ್ತಿದ್ದ. ಗೆಳತನ ಮಾಡುವಂತೆ ಒತ್ತಾಯ ಮಾಡುತ್ತಿದ್ದ. ಅದಲ್ಲದೆ, ನನ್ನ ಫೋನ್‌ನಂಬರ್‌ಅನ್ನು ಎಲ್ಲಿಂದಲೋ ಪಡೆದುಕೊಂಡು ಪ್ರತಿ ದಿನ ಕರೆ ಮಾಡಿ ಹಿಂದೆ ಮಾಡುತ್ತಿದ್ದ. ಈ ವೇಳೆ ಅಂಕಿತಾ ಕೂಡ ಎಚ್ಚರಿಕೆ ನೀಡಿದ್ದು ಗೆಳೆತನ ಸಾಧ್ಯವಿಲ್ಲ ಎಂದಿದ್ದಾಳೆ. ಹೀಗಾದಲ್ಲಿ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದ ಎಂದು ಅಂಕಿತಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ. 12ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳು ಹೀಗೆ ದಾರುಣವಾಗಿ ಸಾವು ಕಂಡಿದ್ದಾಳೆ. ಆರೋಪಿಯನ್ನು ತಕ್ಷಣವೇ ಗಲ್ಲಿಗೇರಿಸಬೇಕು ಎಂದು ಅಂಕಿತಾಳ ಅಜ್ಜಿ ಕಣ್ಣೀರಿಡುತ್ತಲೇ ಹೇಳಿದ್ದಾರೆ. ನನಗೆ ಈಗಾಗಲೇ ವಯಸ್ಸಾಗಿದೆ. ಯಾವಾಗ ಸಾಯುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಹಾಗಾಗಿ ನಾನು ಸಾಯುವ ಮುನ್ನವೇ ಆತನನ್ನು ಗಲ್ಲಿಗೇರಿಸಬೇಕು. ಹಾಗಿದ್ದಲ್ಲಿ ಮಾತ್ರವೇ ನನಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಮನೆಯ ಪರಿಸ್ಥಿತಿಯನ್ನು ಕಂಡು, ದೊಡ್ಡವಳಾದ ಮೇಲೆ ಚಂದದ ಮನೆ ಕಟ್ಟಿಸಬೇಕೆಂಬ ಆಸೆ ಹೊತ್ತಿದ್ದಳು. ಅದಲ್ಲದೆ, ಕಲಿಯುವುದರೊಂದಿಗೆ ಪಾರ್ಟ್‌ಟೈಮ್ ಕೆಲಸಕ್ಕೂ ಪ್ರಯತ್ನ ಮಾಡುತ್ತಿದ್ದಳು. ಆಕೆಯ ಎಲ್ಲಾ ಕನಸುಗಳು ಒಬ್ಬನಿಂದಾಗಿ ಕಮರಿಹೋಗಿದೆ ಎಂದು ಅಂಕಿತಾಳ ಅಜ್ಜ ಮಾತನಾಡಿದ್ದಾರೆ.
Love Jihad ಹಿಂದೂ ಹುಡುಗಿ ಪ್ರೀತಿಸಿ ಕಿಡ್ನಾಪ್ ಆರೋಪ, ಎರಡು ಮುಸ್ಲಿಮ್ ಮನೆಗೆ ಬೆಂಕಿ!
ಕಠಿಣ ಶಿಕ್ಷೆ: ಈ ನಡುವೆ ಆರೋಪಿಯನ್ನು ಬಂಧನ ಮಾಡಿರುವ ಪೊಲೀಸರು, ಆತನಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಎಲ್ಲಾ ರೀತಿಯ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಅಂಕಿತಾ ತನ್ನ ಸಾವಿಗೂ ಮುನ್ನ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾಳೆ. ಇದರಿಂದಾಗಿ ಶಾರುಖ್‌ಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡುವುದರಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ಧುಮ್ಕಾ (Dhumka SP) ಎಸ್‌ಪಿ ತಿಳಿಸಿದ್ದಾರೆ. ಇದರ ನಡುವೆ ಬಿಜೆಪಿ ಹಾಗೂ ಸಿಂದು ಸಂಘಟನೆಗಳ ಕಾರ್ಯಕರ್ತರು ಧುಮ್ಕಾದಲ್ಲಿ ಪ್ರತಿಭಟನೆಯನ್ನು ಆರಂಭ ಮಾಡಿದ್ದಾರೆ. ಶಾರುಖ್ ಮಾತ್ರವಲ್ಲ, ಚೋಟು ಎನ್ನುವ ಇನ್ನೊಬ್ಬ ವ್ಯಕ್ತಿ ಕೂಡ ಇದರಲ್ಲಿ ಭಾಗಿಯಾಗಿದ್ದಾನೆ ಆತನನ್ನೂ ಕೂಡ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.