ಬೆಂಗಳೂರು(ಸೆ.13): ಉದ್ದೀಪನಾ ಮದ್ದು ಸೇವನೆ ಪರೀಕ್ಷೆ ವೇಳೆ ಮೂತ್ರದ ಬದಲು ನೀರು ತುಂಬಿಕೊಟ್ಟಿದ್ದಾಯ್ತು. ಈಗ ವಿಚಾರಣೆಗೆ ಜ್ವರದ ನೆಪ ಹೇಳಿ ಯಮಾರಿಸಲು ಯತ್ನಿಸಿದ ನಟಿಯರಿಗೆ ಸಿಸಿಬಿ ಅಧಿಕಾರಿಗಳು ಶನಿವಾರ ಚಳಿ ಬಿಡಿಸಿದ್ದಾರೆ.

"

ಮಾದಕ ವಸ್ತು ಮಾರಾಟ ಜಾಲ ಸಂಬಂಧ ಬಂಧಿತರಾಗಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಅನಾರೋಗ್ಯದ ನೆಪ ನೀಡಿ ವಿಚಾರಣೆಗೆ ಅಸಹಕಾರ ತೋರಿದ್ದಾರೆ ಎಂದು ತಿಳಿದುಬಂದಿದೆ. ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿಯರ ವಿಚಾರಣೆ ನಡೆಸಲು ಇನ್ಸ್‌ಪೆಕ್ಟರ್‌ ಅಂಜುಮಾಲಾ ನಾಯಕ್‌ ತೆರಳಿದ್ದರು. ಆದರೆ ತನಗೆ ಜ್ವರ ಎಂದು ರಾಗಿಣಿ ಹೇಳಿದರೆ, ಸಂಜನಾ ಸಹ ತನಗೆ ಆರೋಗ್ಯ ಸರಿಯಿಲ್ಲ ಎಂದಿದ್ದಾರೆ. ಇದಕ್ಕೆ ಸಿಸಿಬಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಡ್ರಾಮಾ ಮಾಡಲು ಹೋಗಿ ಸಿಕ್ಕಾಕ್ಕೊಂಡ ಮಾದಕ ರಾಣಿಯರು; ಇದು ಶೂಟಿಂಗ್ ಅಲ್ಲ ಕಣ್ರಮ್ಮೋ!

ನೀವು ವಿಚಾರಣೆಗೆ ಸ್ಪಂದಿಸದೆ ಹೋದರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಈಗಾಗಲೇ ನಿಮ್ಮ ಸ್ನೇಹಿತರು ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ಪರಿಸ್ಥಿತಿ ಅರಿತುಕೊಂಡು ತನಿಖೆಗೆ ಸಹಕರಿಸಿ ಎಂದು ನಟಿಯರಿಗೆ ಅಧಿಕಾರಿಗಳು ತರಾಟೆ ತೆಗೆದುಕೊಂಡಿದ್ದಾರೆ. 

ಈ ಮಾತಿಗೆ ತಣ್ಣಗಾದ ರಾಗಿಣಿ ಹಾಗೂ ಸಂಜನಾ, ತಮಗೆ ವಾತಾವರಣ ಬದಲಾವಣೆಯಿಂದ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಸಮರ್ಥನೆ ಕೊಟ್ಟಿದ್ದಾರೆ. ಕೊನೆಗೆ ಕೆಲವು ನಿಮಿಷಗಳು ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ.