ಬೆಂಗ​ಳೂರು(ಅ.13): ಮಾದಕ ವಸ್ತುಗಳ ಸಂಗ್ರಹ ಮತ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿ ಇರುವ ನಟಿ ರಾಗಿಣಿ ದ್ವಿವೇದಿ, ತನಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ನಗರದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸ್ಲಿಪ್‌ಡಿಸ್ಕ್‌ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಗುಣಮಟ್ಟದ ಚಿಕಿತ್ಸೆ ಪಡೆಯಬೇಕಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಮತ್ತು ತಾಯಿ ಬಳಿಯಿದ್ದ ಐ-ಪ್ಯಾಡ್‌, ಪೆನ್‌ಡ್ರೈವನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ತಕ್ಷಣ ಬಿಡುಗಡೆ ಮಾಡಲು ಸೂಚನೆ ನೀಡಬೇಕು. ಜೊತೆಗೆ, ಪ್ರಕರಣ ಸಂಬಂಧ ಮಾಹಿತಿ ಪಡೆಯಲು ಸಂಬಂಧಿಕರು ಮತ್ತು ವಕೀಲರನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಜೈಲಿಗೆ ಹೋದ್ರೂ ಬುದ್ದಿ ಬಂದಿಲ್ಲ; ಕಿತ್ತಾಡೋದು ನಿಲ್ಸೋದು ಇಲ್ಲ..!

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಸಿಬಿ ಪರ ವಕೀಲರು, ಅರ್ಜಿದಾರರಿಗೆ ಆರೋಗ್ಯ ಸಮಸ್ಯೆ ಇರುವ ಕುರಿತು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಈ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಲು ಅವಕಾಶ ಇಲ್ಲ. ಜೊತೆಗೆ, ಬಂದೀಖಾನೆ ನಿಯಮಗಳ ಪ್ರಕಾರ ವಕೀಲರು ಮತ್ತು ಸಂಬಂಧಿಕರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಅ.16ಕ್ಕೆ ಮುಂದೂಡಿದರು.