PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ

ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ತನಿಖೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳ ತಂಡ ಕಲಬುರಗಿಯಲ್ಲಿ ಸೋಮವಾರ ದೈಹಿಕ ಶಿಕ್ಷಕನೊಬ್ಬನನ್ನು ಬಂಧಿಸಿದೆ. 

PSI Recruitment Scam Physical Education Teacher Shankrappa Arrested In Kalaburagi gvd

ಕಲಬುರಗಿ/ಯಾದಗಿರಿ (ನ.15): ಪೊಲೀಸ್‌ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ತನಿಖೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳ ತಂಡ ಕಲಬುರಗಿಯಲ್ಲಿ ಸೋಮವಾರ ದೈಹಿಕ ಶಿಕ್ಷಕನೊಬ್ಬನನ್ನು ಬಂಧಿಸಿದೆ. ಅಭ್ಯರ್ಥಿಗಳಿಂದ 20 ಲಕ್ಷ ರುಪಾಯಿ ಪಡೆದು ಬ್ಲೂಟೂತ್‌ ಮೂಲಕ ಉತ್ತರ ಹೇಳಿದ್ದ ಹಾಗೂ ಅಕ್ರಮದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಪಿಎಸ್‌ವೈ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ನ ಸಹವರ್ತಿಗಳಲ್ಲೊಬ್ಬನಾದ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಶಂಕರಪ್ಪ (33) ಬಂಧಿತ ಆರೋಪಿ.

ಚಿತ್ತಾಪೂರ ತಾಲೂಕಿನ ಕರದಾಳದಲ್ಲಿರುವ ಡಾ.ಅಂಬೇಡ್ಕರ್‌ ವಸತಿ ಶಾಲೆಯ ದೈಹಿಕ ಶಿಕ್ಷಕನಾಗಿರುವ ಈತ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಸಿಐಡಿ ಇನ್ಸ್‌ಪೆಕ್ಟರ್‌ ಆನಂದ ಮತ್ತಿತರರ ತಂಡ ಶಂಕರಪ್ಪನನ್ನು ಬಂಧಿಸಿ, ತುಮಕೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದ್ದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ದಾಖಲಾಗಿದ್ದ ಪ್ರಕರಣದ ಆಧಾರದ ಮೇರೆಗೆ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಮೂಲದ ಶ್ರೀಶೈಲ ಬಿರಾದರ್‌ ಸೇರಿ ಮೂವರು ಅಭ್ಯರ್ಥಿಗಳನ್ನು ಅ.13ರಂದು ಬಂಧಿಸಲಾಗಿತ್ತು.

ಪಿಎಸ್‌ಐ ಅಕ್ರಮ: ಕಲ್ಯಾಣ ಕರ್ನಾಟಕದ ಮೊದಲ ರ‍್ಯಾಂಕ್‌ ವಿಜೇತೆ ಸೆರೆ

ಈ ಆರೋಪಿಗಳ ವಿಚಾರಣೆ ವೇಳೆ ಸಿಐಡಿಗೆ ಶಂಕರಪ್ಪನ ಬಗ್ಗೆ ಮಾಹಿತಿ ಸಿಕ್ಕಿದೆ. ಬಿರಾದರ್‌ ಸೇರಿ ಆರೋಪಿಗಳಿಂದ ಶಂಕರಪ್ಪ ಬ್ಲೂಟೂತ್‌ ಮೂಲಕ ಉತ್ತರಗಳನ್ನು ಹೇಳಿದ್ದ. ಇದಕ್ಕಾಗಿ .20 ಲಕ್ಷವನ್ನೂ ಪಡೆದಿದ್ದ ಎಂದು ಹೇಳಲಾಗಿದೆ. ತನ್ನ ಬಂಧನ ಭೀತಿ ಅರಿತ ಶಂಕರಪ್ಪ ಕಳೆದೊಂದು ತಿಂಗಳಿನಿಂದ ಕರ್ತವ್ಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೀಗ ಆತನನ್ನು ಬಂಧಿಸುವಲ್ಲಿ ಸಿಐಡಿ ತಂಡ ಯಶಸ್ವಿಯಾಗಿದೆ. ಅಕ್ರಮದಲ್ಲಿ ಶಾಮೀಲಾದವರ ಹೆಡೆಮುರಿ ಕಟ್ಟಲು ತನಿಖೆಯನ್ನು ಮತ್ತಷ್ಟುಚುರುಕುಗೊಳಿಸಿರುವ ಕಲಬುರಗಿ ಸಿಐಡಿ ತಂಡ, ಇನ್ನೂ ಹಲವರ ಬಂಧನಕ್ಕೆ ಜಾಲ ಬೀಸಿದೆ.

ಪಿಎಸ್‌ಐ ಕೇಸ್‌ನ ದಲ್ಲಾಳಿ ಕೋರ್ಟ್‌ನಲ್ಲಿ ಶರಣಾಗತಿ: ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣ ಸಂಬಂಧ ತಲೆಮರೆಸಿಕೊಂಡಿದ್ದ ದಲ್ಲಾಳಿಯೊಬ್ಬ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಗುರುವಾರ ಶರಣಾಗಿದ್ದಾನೆ. ಲಗ್ಗೆರೆ ನಿವಾಸಿ ಬೋರೇಗೌಡ ಬಂಧಿತನಾಗಿದ್ದು, ತನ್ನ ಸಂಬಂಧಿಗೆ ಪಿಎಸ್‌ಐ ಹುದ್ದೆ ಕೊಡಿಸಲು ಪೊಲೀಸ್‌ ನೇಮಕಾತಿ ವಿಭಾಗದ ಅಧಿಕಾರಿಗಳಿಗೆ ಆತ ಮಧ್ಯವರ್ತಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕೃತ್ಯ ಬೆಳಕಿಗೆ ಬಂದ ದಿನದಿಂದ ಬಂಧನ ಭೀತಿಗೊಳಗಾಗಿ ತಲೆಮರೆಸಿಕೊಂಡಿದ್ದ ಬೋರೇಗೌಡನ ಪತ್ತೆಗೆ ಸಿಐಡಿ ಹುಡುಕಾಟ ನಡೆಸಿತ್ತು.

PSI Recruitment Scam: ಕಲಬುರಗಿ ವ್ಯಾಪ್ತಿಯ ಎಲ್ಲ 8 ಕೇಸಲ್ಲೂ ಚಾರ್ಜ್‌ಶೀಟ್

ಲಗ್ಗೆರೆ ಹಾಗೂ ಆರೋಪಿಯ ಸ್ವಗ್ರಾಮ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಕೋಡಿಹೊಸಹಳ್ಳಿಯಲ್ಲಿ ಬೋರೇಗೌಡನ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ತಮಟೆ ಹೊಡೆದು ಪ್ರಚಾರ ಮಾಡಿಸಿತ್ತು. ಕೊನೆಗೆ ನ್ಯಾಯಾಲಯಕ್ಕೆ ತಾನಾಗಿಯೇ ಬಂದು ಆರೋಪಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಆರೋಪಿಯನ್ನು ಸಿಐಡಿ ವಶಕ್ಕೊಪಿಸಿ ನ್ಯಾಯಾಲಯ ಆದೇಶಿಸಿದೆ.

Latest Videos
Follow Us:
Download App:
  • android
  • ios