ಸಬ್‌ಜೈಲ್ ಮುಖ್ಯದ್ವಾರದಿಂದಲೇ ಕೈದಿ ಪರಾರಿ: ಜೈಲಿನ ಮುಖ್ಯ ವೀಕ್ಷಕನ ಮೇಲೆ ಬಿತ್ತು ಕೇಸ್
ಬೆಳಗಾವಿ ಜಿಲ್ಲೆ ಬೈಲಹೊಂಗಲ ಉಪಕಾರಾಗೃಹದ ಮುಖ್ಯದ್ವಾರದಿಂದಲೇ ವಿಚಾರಣಾಧೀನ ಕೈದಿ ಪರಾರಿಯಾದ ಪ್ರಕರಣ ಸಂಬಂಧ ಬೈಲಹೊಂಗಲ ಸಬ್‌ಜೈಲ್ ಮುಖ್ಯವೀಕ್ಷಕ ವೈ.ಐ.ಬುದ್ನಿ ಮೇಲೆ ಪ್ರಕರಣ ದಾಖಲಾಗಿದೆ.
ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮಾ.19): ಬೆಳಗಾವಿ ಜಿಲ್ಲೆ ಬೈಲಹೊಂಗಲ ಉಪಕಾರಾಗೃಹದ ಮುಖ್ಯದ್ವಾರದಿಂದಲೇ ವಿಚಾರಣಾಧೀನ ಕೈದಿ ಪರಾರಿಯಾದ ಪ್ರಕರಣ ಸಂಬಂಧ ಬೈಲಹೊಂಗಲ ಸಬ್‌ಜೈಲ್ ಮುಖ್ಯವೀಕ್ಷಕ ವೈ.ಐ.ಬುದ್ನಿ ಮೇಲೆ ಪ್ರಕರಣ ದಾಖಲಾಗಿದೆ. ಬೈಲಹೊಂಗಲ ಉಪಕಾರಾಗೃಹದ ಸಹಾಯಕ ಜೈಲರ್ ಡಿ.ಆರ್.ಕೋಣಿ ನೀಡಿದ ದೂರಿನ ಮೇರೆಗೆ ಎ1 ಆರೋಪಿ ಜೈಲಿನಿಂದ ಪರಾರಿಯಾದ ವಿಚಾರಣಾಧೀನ ಕೈದಿ ಖಾದೀರಸಾಬ್, ಎ2 ಆರೋಪಿ ಸಬ್‌ಜೈಲ್ ಮುಖ್ಯ ವೀಕ್ಷಕ ವೈ.ಐ.ಬುದ್ನಿಯನ್ನಾಗಿಸಿ ಐಪಿಸಿ ಸೆಕ್ಷನ್ 223, 224ರಡಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
34 ವರ್ಷದ ಖಾದೀರ್‌ಸಾಬ್‌ನನ್ನು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಖಾದೀರ್‌ಸಾಬ್ ಮೇಲೆ ಕೊಲೆಯತ್ನ, ಗಲಾಟೆ, ಜಾತಿ ನಿಂದನೆ ಸೇರಿ ಹಲವು ಆರೋಪಗಳಿದ್ವು. ಮುರಗೋಡ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 307, 324, 504, 506 ಸಹಕಲಂ 34ನೇದ್ದರಡಿ ಖಾದೀರ್‌ಸಾಬ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿ ಖಾದೀರ್‌ಸಾಬ್‌ನನ್ನು ಬಂಧಿಸಿ ಮಾರ್ಚ್ 3ರಂದು ಬೈಲಹೊಂಗಲ ಉಪಕಾರಾಗೃಹಕ್ಕೆ ಕಳಿಸಲಾಗಿತ್ತು. ಬೈಲಹೊಂಗಲ ಉಪಕಾರಾಗೃಹಕ್ಕೆ ದಾಖಲಾದ 13 ದಿನಗಳಲ್ಲೇ ಜೈಲಿನ ವಿಚಾರಣಾಧೀನ ಕೈದಿ ಖಾದೀರ್‌ಸಾಬ್ ಪರಾರಿಯಾಗಿದ್ದ.
ಜೈಲಲ್ಲಿ ಮತ್ತೊಂದು ಕರ್ಮಕಾಂಡ: ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್!
ಸಬ್‌ಜೈಲ್‌ನ ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ: ಮಾರ್ಚ್ 3ರಂದು ಬೈಲಹೊಂಗಲ ಉಪಕಾರಾಗೃಹಕ್ಕೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಖಾದೀರ್‌ಸಾಬ್ ಮಾರ್ಚ್ 16ರಂದು ಉಪಕಾರಾಗೃಹದ ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದ. ಮಾರ್ಚ್ 16ರಂದು ಜೈಲಿನ ಸ್ವಚ್ಛತಾ ಕಾರ್ಯದ ಕೆಲಸಕ್ಕೆ ಅಂತಾ ಕೈದಿ ಖಾದೀರ್‌ಸಾಬ್ ನನ್ನು ಬಿಡಲಾಗಿತ್ತು.
ಈ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಬೈಲಹೊಂಗಲ ಉಪಕಾರಾಗೃಹದ ಮುಖ್ಯದ್ವಾರದ ಕೀ ಪಡೆದು ಬೀಗ ಓಪನ್ ಮಾಡಿ ಮುಖ್ಯದ್ವಾರದಿಂದಲೇ ಎಸ್ಕೇಪ್ ಆಗಿದ್ದ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಬೈಲಹೊಂಗಲ ಉಪಕಾರಾಗೃಹದ ಮುಖ್ಯವೀಕ್ಷಕ ವೈ.ಐ.ಬುದ್ನಿ ನಿಷ್ಕಾಳಜಿತನದಿಂದ ಕೈದಿ ಪರಾರಿಯಾಗಿದ್ದ ಹಿನ್ನೆಲೆ ಉಪಕಾರಾಗೃಹದ ಸಹಾಯಕ ಜೈಲರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಠಾಣೆಯಿಂದ ಎಸ್ಕೇಪ್ ಆಗಿ ಆರೋಪಿ ಆತ್ಮಹತ್ಯೆ: ಪತ್ನಿ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ಕಾರ್ಪೆಂಟರ್‌ವೊಬ್ಬ ಸೋಮವಾರ ಬೆಳಗ್ಗೆ ಪೊಲೀಸ್ ಠಾಣೆಯಿಂದ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡು 30 ಅಡಿ ಎತ್ತರದ ಸ್ಕೈವಾಕ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ. ಆನಂದಪುರದ ನಿವಾಸಿ ಶಕ್ತಿವೇಲು (32) ಮೃತ ದುರ್ದೈವಿ. ಒಂದೂವರೆ ವರ್ಷದ ಹಿಂದೆ ತಮಿಳುನಾಡು ಮೂಲದ ಶಕ್ತಿವೇಲು ಹಾಗೂ ಸಂಗೀತಾ ಪ್ರೇಮ ವಿವಾಹವಾಗಿದ್ದರು. ವಿವಾಹದ ಬಳಿಕ ಸಣ್ಣಪುಟ್ಟವಿಚಾರಗಳಿಗೆ ಶಕ್ತಿವೇಲು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಶನಿವಾರವೂ ಸತಿ-ಪತಿ ಜಗಳವಾಡಿದ್ದರು.
ಪೊಲೀಸ್ ವಾಹನದಿಂದ ಹಾರಿ ಎಸ್ಕೇಪ್ ಆದ ಕೈದಿ ... ವಿಡಿಯೋ ವೈರಲ್
ಆಗ ಬೇಸರಗೊಂಡ ಸಂಗೀತಾ(30), ತನ್ನ ತಂದೆಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿ ನೇಣು ಬಿಗಿದುಕೊಂಡಿದ್ದಳು. ಸಂಗೀತಾಳ ತಂದೆ ದೂರು ಆಧರಿಸಿ ಕೆ.ಆರ್.ಪುರ ಠಾಣೆಯಲ್ಲಿ ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ 498 (ವರದಕ್ಷಿಣೆ ಕಿರುಕುಳ) ಆರೋಪಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಂಧನ ಭೀತಿಯಿಂದ ಪರಾರಿ ಆಗಿದ್ದ ಶಕ್ತಿವೇಲು ಭಾನುವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಲಾಕಪ್‌ನಲ್ಲಿದ್ದ ಶಕ್ತಿವೇಲು, ಸೋಮವಾರ ಬೆಳಗ್ಗೆ 6.30ಕ್ಕೆ ಶೌಚಕ್ಕೆ ಹೋಗಬೇಕೆಂದು ಮನವಿ ಮಾಡಿದ್ದ. ಆತನನ್ನು ಕಾನ್‌ಸ್ಟೇಬಲ್‌ವೊಬ್ಬರು, ಠಾಣೆ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ.
ಆಗ ಕಾನ್‌ಸ್ಟೇಬಲ್‌ನನ್ನು ದೂಡಿ ಕಾಂಪೌಂಡ್ ಜಿಗಿದು ಕಾಲ್ಕಿತ್ತಿದ್ದಾನೆ. ಕೂಡಲೇ ಪೊಲೀಸರು ಆರೋಪಿಯ ಬೆನ್ನಟ್ಟಿದ್ದಾರೆ. ಠಾಣೆಯಿಂದ ಸ್ಪಲ್ಪದೂರ ಹೋದ ಬಳಿಕ ಆಟೋ ಹತ್ತಿ ದೂರವಾಣಿ ನಗರದ ಸ್ಕೈವಾಕ್ ಸಮೀಪ ತೆರಳಿದ್ದಾನೆ. 30 ಅಡಿಯ ಸ್ಕೈವಾಕ್ ಹತ್ತಿ ಕೆಳಗೆ ಜಿಗಿದ್ದಾನೆ. ಅದೇ ವೇಳೆಗೆ ಹೊಸಕೋಟೆ ಕಡೆಯಿಂದ ಬರುತ್ತಿದ್ದ ನಾಯಕ್ ಎಂಬುವವರ ಕಾರು ಸ್ಕೈವಾಕ್‌ನಿಂದ ದಿಢೀರ್ ರಸ್ತೆಗೆ ಬಿದ್ದವನ ಮೇಲೆ ಹರಿದಿದೆ. ಆಗ ತೀವ್ರ ಗಾಯಗೊಂಡು ಶಕ್ತಿವೇಲು ಮೃತಪಟ್ಟಿದ್ದಾನೆ. ಆರೋಪಿಯನ್ನು ಹಿಂಬಾಲಿಸಿ ಬಂದ ಪೊಲೀಸರು, ಸ್ಥಳಕ್ಕೆ ತೆರಳುವ ಮುನ್ನವೇ ಆತ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.