Bengaluru Parappana Agrahara ಜೈಲಲ್ಲಿ ಮತ್ತೊಂದು ಕರ್ಮಕಾಂಡ: ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್!
*ಪರಪ್ಪನ ಅಗ್ರಹಾರ ಜೈಲಲ್ಲಿ ಕರ್ಮಕಾಂಡ
*ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್!
*ಜೈಲಿನ ಗೇಟಲ್ಲೇ ಸಿಕ್ಕಿಬಿದ್ದ ಎಫ್‌ಡಿಎ
ಬೆಂಗಳೂರು (ಫೆ. 05): ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದ ರಾಜಾತಿಥ್ಯದ ಬಗ್ಗೆ ವಿಚಾರಣೆ ನಡೆದಿರುವಾಗಲೇ, ಕೈದಿಗಳಿಗೆ ಡ್ರಗ್ಸ್ ಪೂರೈಸಲು ಯತ್ನಿಸಿದ ಕೇಂದ್ರ ಕಾರಾಗೃಹ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕನೊಬ್ಬ (ಎಫ್‌ಡಿಎ) ಸಿಕ್ಕಿಬಿದ್ದಿದ್ದಾನೆ. ಇದರ ಬೆನ್ನಲ್ಲೇ ಆತನನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆಡಳಿತ ಕಚೇರಿಯ ಸಜಾ ಕೈದಿಗಳ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಗುರುಸ್ವಾಮಿ ಗುರುಸಿದ್ದಪ್ಪ ಹುಬ್ಬಳ್ಳಿ ಬಂಧಿತನಾಗಿದ್ದು, ಆರೋಪಿಯಿಂದ ಎಲ್‌ಎಸ್‌ಡಿ ಮಾತ್ರೆಗಳು ಹಾಗೂ 50 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಲಾಗಿದೆ. ಕಾರಾಗೃಹದ ಪ್ರವೇಶ ದ್ವಾರದ ಬಳಿ ಗುರುಸಿದ್ದಪ್ಪನನ್ನು ಭದ್ರತಾ ಸಿಬ್ಬಂದಿ ಬುಧವಾರ ತಪಾಸಣೆ ನಡೆಸಿದರು.
ಆ ವೇಳೆ ಆತ ಪ್ಯಾಂಟಿನ ಜೇಬಿನಲ್ಲಿ ಅಡಗಿಸಿಟ್ಟುಕೊಂಡಿದ್ದ ಡ್ರಗ್ಸ್ ಪತ್ತೆಯಾಗಿದೆ. ತಕ್ಷಣವೇ ಆತನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಕೇಂದ್ರ ಕಾರಾಗೃಹದ ಅಧಿಕಾರಿಗಳು ನೀಡಿದ ದೂರಿನನ್ವಯ ಎನ್‌ಡಿಪಿಎಸ್ ಕಾಯ್ದೆಯಡಿ ಗುರುಸಿದ್ದಪ್ಪನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ
ಉತ್ತರ ಕರ್ನಾಟಕ ಮೂಲದ ಗುರುಸಿದ್ದಪ್ಪ, 2019ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಗಳ ಆಡಳಿತ ಕಚೇರಿಯ ಸಜಾ ಕೈದಿಗಳ ವಿಭಾಗದಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲಸದ ನಿಮಿತ್ತ ಕಚೇರಿಗೆ ಬರುವ ಕೈದಿಗಳ ಜತೆ ಗುರುಸಿದ್ದಪ್ಪನಿಗೆ ಸ್ನೇಹವಾಗಿತ್ತು. ಈ ವೇಳೆ ಹಣಕ್ಕಾಗಿ ಕೈದಿಗಳಿಗೆ ಆತ ಡ್ರಗ್ಸ್ ಪೂರೈಸಲು ಯತ್ನಿಸಿರಬಹುದು. ಪ್ರತಿ ದಿನ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮತ್ತು ಕೆಲಸ ಮುಗಿಸಿ ತೆರಳುವ ವೇಳೆ ಕಾರಾಗೃಹದ ಮುಖ್ಯದ್ವಾರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿ ಒಳ ಬಿಡುತ್ತಾರೆ.
ಎಂದಿನಂತೆ ಬುಧವಾರ ಬೆಳಗ್ಗೆ ಗುರುಸಿದ್ದಪ್ಪ ಕೆಲಸಕ್ಕೆ ಬಂದಿದ್ದಾನೆ. ಆ ವೇಳೆ ಪ್ಯಾಂಟಿನ ಒಳ ಜೇಬಿನಲ್ಲಿ ಡ್ರಗ್ಸ್ ಅಡಗಿಸಿಟ್ಟುಕೊಂಡಿದ್ದ ಆರೋಪಿ, ಜೈಲಿನ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ಕಂಡ ಕೂಡಲೇ ಆತಂಕಗೊಂಡಿದ್ದಾನೆ. ಮಾಮೂಲಿಯಂತೆ ಎಫ್‌ಡಿಎನನ್ನು ಸಿಬ್ಬಂದಿ ಪರಿಶೀಲಿಸಿದ್ದಾರೆ. ಆಗ ಜೇಬಿನಲ್ಲಿ ದಪ್ಪನೆಯ ಪ್ಯಾಕೆಟ್ ಪತ್ತೆಯಾಗಿದೆ. ಇದರಿಂದ ಶಂಕೆಗೊಂಡ ಭದ್ರತಾ ಸಿಬ್ಬಂದಿ, ಕೂಡಲೇ ಗುರುಸಿದ್ದಪ್ಪನನ್ನು ವಶಕ್ಕೆ ಪಡೆದು ಹೆಚ್ಚಿನ ತಪಾಸಣೆ ನಡೆಸಿದಾಗ ಜೇಬಿನ ಗುಟ್ಟು ರಟ್ಟಾಗಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Bengaluru: ಕೈಯಲ್ಲಿ ಮಾರಕಾಸ್ತ್ರ ಹಿಡಿದು ಜನರಿಗೆ ಆವಾಜ್, ಗಾಂಜಾ ವ್ಯಸನಿಗಳ ಪುಂಡಾಟ
ಇಲಾಖೆಗೆ ಮುಜುಗರ: ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಗಾಂಜಾ, ಸಿಗರೆಟ್ ಪೂರೈಕೆ, ವಿಶೇಷ ಸೌಲಭ್ಯದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಸರ್ಕಾರ ವಿಚಾರಣೆಗೆ ಸೂಚಿಸಿತ್ತು. ಜೈಲಿನ ಅಕ್ರಮದ ಬಗ್ಗೆ ಎಡಿಜಿಪಿ ಎಸ್.ಮುರುಗನ್ ನೇತೃತ್ವದಲ್ಲಿ ವಿಚಾರಣೆ ನಡೆದಿರುವ ಹೊತ್ತಿನಲ್ಲಿ ಕೈದಿಗಳಿಗೆ ಡ್ರಗ್ಸ್ ಪೂರೈಸುವ ಯತ್ನದಲ್ಲಿ ಜೈಲಿನ ನೌಕರ ಸಿಕ್ಕಿಬಿದ್ದಿರುವುದು ಕಾರಾಗೃಹ ಇಲಾಖೆಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಆಫ್ರಿಕನ್ ಕಿಚನ್ ನೆಪದಲ್ಲಿ ಡ್ರಗ್ಸ್ ದಂಧೆ: ‘ಆಫ್ರಿಕನ್ ಕಿಚನ್’(African Kitchen) ನೆಪದಲ್ಲಿ ಗ್ರಾಹಕರಿಗೆ ಡ್ರಗ್ಸ್(Drugs) ಉಣ ಬುಡಿಸುತ್ತಿದ್ದ ಇಬ್ಬರು ಚಾಲಾಕಿ ವಿದೇಶಿ ಪ್ರಜೆಗಳನ್ನು ಸೆರೆಹಿಡಿದ ಗೋವಿಂದಪುರ ಠಾಣೆ ಪೊಲೀಸರು(Police), ಆರೋಪಿಗಳಿಂದ .3 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
ಹೊರಮಾವು ನಿವಾಸಿಗಳಾದ ಸಿಕ್ಸ್‌ಟಸ್ ಯುಚೆಕ್ ಹಾಗೂ ಚುಕ್ವುಡಬೆನ್ ಹೆನ್ರಿ ಬಂಧಿತರು(Arrest). ಆರೋಪಿಗಳಿಂದ(Accused) 1.5 ಕೆ.ಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಎಂಡಿಎಂಎ, ಎರಡು ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಂಬಿದ್ದ 16.5 ಕೆ.ಜಿ ಎಂಡಿಎಂಎ ಮಿಕ್ಸ್ ವಾಟರ್, 300 ಗ್ರಾಂ ಗಾಂಜಾ ಎಣ್ಣೆ ಹಾಗೂ ಕಾರು ಸೇರಿದಂತೆ .3 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಚ್‌ಬಿಆರ್ ಲೇಔಟ್‌ನ 1ನೇ ಹಂತದಲ್ಲಿ ಕಾರಿನಲ್ಲಿ ಬಂದು ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾಗ ಮಾಹಿತಿ ಪಡೆದು ಪೆಡ್ಲರ್‌ಗಳನ್ನು(Peddler) ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ