ಕೆ.ಆರ್.ಪೇಟೆ ತಾಲೂಕಿನ ಹರಿಹರಪುರದಲ್ಲಿ ಬೆಂಗಳೂರು-ಜಲಸೂರು ಹೆದ್ದಾರಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿರುವ ಗ್ರಾಮಸ್ಥರು, ಸರ್ವೀಸ್ ರಸ್ತೆ ಮತ್ತು ವೇಗ ನಿಯಂತ್ರಕಗಳ ಅಳವಡಿಕೆಗೆ ಆಗ್ರಹಿಸಿದ್ದಾರೆ.

ಕೆ.ಆರ್.ಪೇಟೆ (ಅ.27): ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿಯ ತಾಲೂಕಿನ ಹರಿಹರಪುರ ಗ್ರಾಮದ ವ್ಯಾಪ್ತಿಯಲ್ಲಿ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬೆಂಗಳೂರು-ಜಲಸೂರು ಹೆದ್ದಾರಿಯಲ್ಲಿ ಬೈಕ್ ಅಪಘಾತ:

ತಾಲೂಕು ವೈಷ್ಣವ ಸಂಘದ ಅಧ್ಯಕ್ಷ ಹಾಗೂ ಬೊಮ್ಮೆನಹಳ್ಳಿ ಮುತ್ತುರಾಯಸ್ವಾಮಿ ದೇವಸ್ಥಾನದ ಅರ್ಚಕ ಹರಿಹರಪುರದ ಎಚ್.ವಿ.ಕೃಷ್ಣಮೂರ್ತಿ ಮೃತಪಟ್ಟವರು. ಬೈಕ್ ಅಪಘಾತದಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಮೃತಪಟ್ಟಿದ್ದು, ಮೃತರ ಅಂತ್ಯಕ್ರಿಯೆ ವೈಷ್ಣವ ವಿಧಿ ವಿಧಾನಂತೆ ಅವರ ಜಮೀನಿನಲ್ಲಿ ಭಾನುವಾರ ನೆರವೇರಿತು.ಶಾಸಕ ಎಚ್.ಟಿ.ಮಂಜು, ಆರ್.ಟಿ.ಓ ಮಲ್ಲಿಕಾರ್ಜುನ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ಗ್ರಾಮಸ್ಥರ ಆಕ್ರೋಶ:

ಹರಿಹರಪುರ ಗ್ರಾಮದ ಮೂಲಕ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ವೈಜ್ಞಾನಿಕವಾಗಿದೆ. ರಸ್ತೆ ನಿರ್ಮಾಣ ಮಾಡಿರುವ ಕೆಶಿಪ್ ಎಂಜಿನಿಯರುಗಳು ಗ್ರಾಮ ವ್ಯಾಪ್ತಿಯಲ್ಲಿ ಅಗತ್ಯ ಸುರಕ್ಷಾ ಕ್ರಮಗಳನ್ನು ರೂಪಿಸಿಲ್ಲ. ನಿಯಮಾನುಸಾರ ರಾಜ್ಯ ಹೆದ್ದಾರಿ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ ದ್ವಿಪಥ ರಸ್ತೆ ನಿರ್ಮಿಸಿದರೆ ಅಥವಾ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ಅಳವಡಿಸಿದರೆ ಅತಿವೇಗವಾಗಿ ಬರುವ ವಾಹನಮಗಳನ್ನು ನಿಯಂತ್ರಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಹೆದ್ದಾರಿಗೆ ವೇಗ ಮಿತಿ ನಿಗಧಿಗೊಳಿಸಿಲ್ಲ. ಇದರ ಪರಿಣಾಮ ಗ್ರಾಮ ವ್ಯಾಪ್ತಿಯಲ್ಲಿ ಹಲವು ಅಪಘಾತಗಳಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಕೆಶಿಪ್ ಅಧಿಕಾರಿಗಳು ಆಗಾಗ್ಗೆ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಿ ಜನರ ಜೀವ ಉಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.