* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣ್ಣಾಪುರ ಗ್ರಾಮದಲ್ಲಿ ನಡೆದ ಘಟನೆ* ಪತಿ, ಮಾವ, ಅಜ್ಜಿಯರಿಂದ ಕೃತ್ಯ, ನೇಣು ಬಿಗಿದು ಕೊಲೆ* ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಪೊಲೀಸರು  

ಗಂಗಾವತಿ(ಜೂ.25): ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವರದಕ್ಷಿಣೆಗಾಗಿ ಪತಿ, ಮಾವ ಅತ್ತೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಿದ ಘಟನೆ ತಾಲೂಕಿನ ಸಣ್ಣಾಪುರ ಗ್ರಾಮದಲ್ಲಿ ನಡೆದಿದೆ.

ಶಿಲ್ಪಾ (19) ಎನ್ನುವ ಗೃಹಿಣಿ ಕೊಲೆಯಾಗಿದ್ದಾರೆ. ಸಣ್ಣಾಪುರ ಗ್ರಾಮದಲ್ಲಿ ಪತಿ ವಿಕ್ರಮ್‌ ಬಳ್ಳಾರಿ, ಮಾವ ದುರುಗಪ್ಪ ಬಳ್ಳಾರಿ, ಅಜ್ಜಿ ಹುಲಿಗೆಮ್ಮ ಈ ಮೂವರು ಸೇರಿ ಶಿಲ್ಪಾ ಅವರಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಕೊಲೆಯಾಗಿರುವ ಶಿಲ್ಪಾಳ ತಂದೆ ಸಂತೋಷ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಮೂವರನ್ನು ಬಂಧಿಸಲಾಗಿದೆ.

ಶಿಲ್ಪಾ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹೊಸಕೊಪ್ಪ ಗ್ರಾಮದವರು. ಮೊಬೈಲ್‌ ಮೂಲಕ ಸಣ್ಣಾಪುರ ಗ್ರಾಮದ ವಿಕ್ರಮ್‌ ಬಳ್ಳಾರಿ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಿದ್ದರು. 2020 ಡಿ. 20ರಂದು ಸಣ್ಣಾಪುರ ಗ್ರಾಮದಲ್ಲಿ ಮದುವೆ ಮಾಡಲಾಗಿತ್ತು. ನಾಲ್ಕು ತಿಂಗಳ ಕಾಲ ಚೆನ್ನಾಗಿ ಸಂಸಾರ ನಡೆಸಿದ್ದರು. ಶಿಲ್ಪಾ ಗರ್ಭಿಣಿಯಾಗಿದ್ದರು. ಆನಂತರ ವರದಕ್ಷಿಣೆ ಕಿರುಕುಳ ಪ್ರಾರಂಭವಾಯಿತು.

ವಿಜಯಪುರ ಮರ್ಯಾದೆ ಹತ್ಯೆಗೆ ಟ್ವಿಸ್ಟ್; ತಾಯಿ ಎದುರೇ ಕೃತ್ಯ!

ದಿನ ನಿತ್ಯ ಪೀಡೆ:

ಶಿಲ್ಪಾ ಮದುವೆಯಾಗಿ ನಾಲ್ಕು ತಿಂಗಳ ಆನಂತರ ಪತಿ ವಿಕ್ರಮ್‌, ಮಾವ ದುರುಗಪ್ಪ ಬಳ್ಳಾರಿ ಮತ್ತು ಅಜ್ಜಿ ಹುಲಿಗೆಮ್ಮ ಸೇರಿ ದಿನನಿತ್ಯ ಕಿರುಕುಳ ನೀಡಿ, ಚಿನ್ನ, ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದರು. ವಿಕ್ರಮಗೆ ಬೇರೆ ಹೆಣ್ಣು ನೋಡಿ ಮದುವೆ ಮಾಡಿದ್ದರೆ ಚಿನ್ನ, ಬೆಳ್ಳಿ ಮತ್ತು ಸಾಕಷ್ಟುಹಣ ತರುತ್ತಿದ್ದ. ನೀನು ಮದುವೆಯಾದಾಗಿನಿಂದ ಏನೂ ಕಂಡಿಲ್ಲ. ಕೂಡಲೆ 2 ಲಕ್ಷ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು. ಈ ವಿಷಯವಾಗಿ ಹಲವಾರು ಬಾರಿ ಶಿಲ್ಪಾ ಅವರ ತಂದೆ ಮತ್ತು ಗಂಡನ ಕಡೆಯವರ ಕಡೆ ಸಭೆ ಸೇರಿ ಹಣ ನೀಡಲು ಕಾಲವಕಾಶ ಕೇಳಿದ್ದರು. ಆದರೆ ಹಣ ತರಲಿಲ್ಲ ಎಂಬ ಕಾರಣಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆತ್ಮಹತ್ಯೆ ನಾಟಕ:

ಶಿಲ್ಪಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ವಿಕ್ರಮ ಮತ್ತು ಮಾವ, ಅಜ್ಜಿ ಶಿಲ್ಪಾ ಅವರ ತಂದೆಗೆ ಮಾಹಿತಿ ನೀಡಿದ್ದಾರೆ. ಅನುಮಾನಗೊಂಡ ಶಿಲ್ಪಾ ಅವರ ತಂದೆ ಸಂತೋಷ ಮತ್ತು ಅವರ ಕುಟಂಬದವರು ಆಗಮಿಸಿ, ಇದು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ ಎಂದು ದೂರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.