Praveen Nettaru Murder Case: ದ.ಕ.ದಲ್ಲಿ 32ಕ್ಕೂ ಹೆಚ್ಚು ಕಡೆ NIA ದಾಳಿ!
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ(ಕೇಂದ್ರ ತನಿಖಾ ಏಜೆನ್ಸಿ) ತಂಡ ಮಂಗಳವಾರ ಪುತ್ತೂರು, ಸುಳ್ಯ ಹಾಗೂ ಉಪ್ಪಿನಂಗಡಿ, ಕೊಡಗು ಭಾಗಗಳ 32ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದೆ.
ಮಂಗಳೂರು/ಪುತ್ತೂರು (ಸೆ.7) : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ(ಕೇಂದ್ರ ತನಿಖಾ ಏಜೆನ್ಸಿ) ತಂಡ ಮಂಗಳವಾರ ಪುತ್ತೂರು, ಸುಳ್ಯ ಹಾಗೂ ಉಪ್ಪಿನಂಗಡಿ, ಕೊಡಗು ಭಾಗಗಳ 32ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದೆ.
Mangaluru: ಪ್ರವೀಣ್ ನೆಟ್ಟಾರು ಚಿಕನ್ ಸೆಂಟರ್ ಪುನಾರಂಭಿಸಿದ ಹಿಂದೂ ಕಾರ್ಯಕರ್ತ..!
ಜು.26ರಂದು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಪ್ರವೀಣ್ ನೆಟ್ಟಾರು(Praveen Nettaru) ಪ್ರಕರಣವನ್ನು ರಾಜ್ಯ ಸರ್ಕಾರ(Govt Of Karnataka) ಎನ್‌ಐಎ(NIA)ಗೆ ಶಿಫಾರಸು ಮಾಡಿತ್ತು. ಬಳಿಕ ಎನ್‌ಐಎ ಅಧಿಕಾರಿ ದ.ಕ. ಜಿಲ್ಲೆಗೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದರು. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿ ಬಳಿಕ ಬಂಧಿತ ಎಲ್ಲ 10 ಮಂದಿ ಆರೋಪಿಗಳು ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಮಂಗಳೂರು ಜೈಲಿನಿಂದ ಆರೋಪಿಗಳನ್ನು ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು. ಎನ್‌ಐಎ ಇನ್‌ಸ್ಪೆಕ್ಟರ್ ಷಣ್ಮುಖಂ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಎನ್‌ಐಎ ತಂಡ ಬೆಂಗಳೂರಿನಲ್ಲೇ ಆರೋಪಿಗಳ ತನಿಖೆ ಕೈಗೊಂಡಿತ್ತು. ಇದೇ ವೇಳೆ ತನಿಖಾ ತಂಡಕ್ಕೆ ನೆರವಾಗಲು ಸ್ಥಳೀಯ ಒಂಭತ್ತು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.
2 ದಿನಗಳ ಹಿಂದೆಯೇ ಸಿದ್ಧತೆ: ಪ್ರವೀಣ್ ಹತ್ಯೆಯಾದ ಒಂದು ವಾರದಲ್ಲೇ ಆಗಮಿಸಿದ್ದ ಎನ್‌ಐಎ ತಂಡ ಈಗ ಮತ್ತೆ ದ.ಕ. ಜಿಲ್ಲೆಗೆ ಆಗಮಿಸಿ ನೇರವಾಗಿ ಕಾರ್ಯಾಚರಣೆಗೆ ಧುಮುಕಿದೆ.
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆಗಳ ಕೈವಾಡ ಸಾಧ್ಯತೆ ಬಗ್ಗೆ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಎನ್‌ಐಎ ಅಧಿಕಾರಿಗಳು ಖಾಸಗಿ ವಾಹನದಲ್ಲಿ ಎರಡು ದಿನಗಳ ಹಿಂದೆಯೇ ಜಿಲ್ಲೆಗೆ ಆಗಮಿಸಿದ್ದರು. ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಸುಳ್ಯ, ಪುತ್ತೂರು ಹಾಗೂ ಉಪ್ಪಿನಂಗಡಿಗಳಲ್ಲಿ ಸಂಚರಿಸಿ ಸಾಕಷ್ಟುಪೂರ್ವತಯಾರಿ ನಡೆಸಿದ್ದರು. ಪ್ರವೀಣ್ ಹತ್ಯೆ ಆರೋಪಿಗಳು ನೀಡಿದ ಸಮಗ್ರ ಮಾಹಿತಿ ಪಡೆದುಕೊಂಡೇ ಎನ್‌ಐಎ ತಂಡ ಕಾರ್ಯಾಚರಣೆಗೆ ಇಳಿದಿತ್ತು.
ಕಾರ್ಯಾಚರಣೆಗೆ ಮುನ್ನ ದ.ಕ. ಪೊಲೀಸರ ನೆರವು ಪಡೆದಿದ್ದು, ಸೋಮವಾರ ಸಂಜೆ ವೇಳೆಗೆ ಕಾರ್ಯಾಚರಣೆಗೆ ತೆರಳುವ ಪೊಲೀಸರನ್ನು ಸನ್ನದ್ಧಗೊಳಿಸಲಾಗಿತ್ತು. ಆದರೆ ಅವರಿಗೆ ಯಾವ ಕಾರ್ಯಾಚರಣೆಗೆ ಸಿದ್ಧತೆ ಎಂದು ಹೇಳಿರಲಿಲ್ಲ, ಅದನ್ನು ಗೌಪ್ಯವಾಗಿ ಇರಿಸಲಾಗಿತ್ತು. ಐಟಿ ದಾಳಿಗೆ ಸಂಬಂಧಿಸಿ ಪೊಲೀಸರನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಕಾರ್ಯಾಚರಣೆ ಮಾಹಿತಿ ಎಲ್ಲಿಯೂ ಸೋರಿಹೋಗದಂತೆ ಎನ್‌ಐಎ ಕೂಡ ಸಾಕಷ್ಟುಎಚ್ಚರ ವಹಿಸಿತ್ತು.
ನಸುಕಿನ ಜಾವ ದಾಳಿ: ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 60ಕ್ಕೂ ಅಧಿಕ ಎನ್‌ಐಎ ತಂಡ ನೂರಕ್ಕೂ ಅಧಿಕ ವಾಹನಗಳಲ್ಲಿ ಮಂಗಳವಾರ ನಸುಕಿನ ಜಾವ ಸುಮಾರು 32ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿತು. ಸ್ಥಳೀಯವಾಗಿ ಸುಮಾರು ನೂರಕ್ಕೂ ಅಧಿಕ ಪೊಲೀಸರ ನೆರವಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬೆಳಗ್ಗೆ ಎಲ್ಲರೂ ಏಳುವಷ್ಟರಲ್ಲಿ ಕಾರ್ಯಾಚರಣೆ ನಡೆದು ಹೋಗಿತ್ತು.
ಪ್ರಮುಖವಾಗಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಮನೆ ಮತ್ತು ಅವರ ಸಂಪರ್ಕದ ಸಂಘಟನೆಗಳ ಮುಖಂಡರ ಮನೆಗೆ ಎನ್‌ಐಎ ತಂಡ ದಾಳಿ ನಡೆಸಿದೆ. ಎಸ್‌ಡಿಪಿಐ ಮುಖಂಡ ಜಾವೇದ್, ಇಕ್ಬಾಲ್ ಬೆಳ್ಳಾರೆ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮನೆಗಳು, ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಸೇರಿದಂತೆ ಸುಮಾರು 32ಕ್ಕೂ ಹೆಚ್ಚಿನ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಎಸ್‌ಡಿಪಿಐಗೆ ಸೇರಿದ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಅದೇ ರೀತಿ ಉಪ್ಪಿನಂಗಡಿಯಲ್ಲಿ ಎಸ್‌ಡಿಪಿಐ ಮುಖಂಡ ಮಸೂದ್ ಮತ್ತು ಆರೋಪಿಗಳು ಆಶ್ರಯ ಪಡೆದಿದ್ದ ಮಡಿಕೇರಿಯ ತುಫೇಲ್ ಎಂಬವರ ಮನೆಗೂ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಐಬಿಯಲ್ಲಿ ವಿಚಾರಣೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಸಹಕರಿಸಿದವರನ್ನು ಪುತ್ತೂರಿನ ಪ್ರವಾಸಿ ಮಂದಿರಕ್ಕೆ ಕರೆ ತರಲಾಗಿದೆ. ಅವರೆಲ್ಲರನ್ನು ಎನ್‌ಐಎ ತಂಡ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಮಂದಿರಕ್ಕೆ ಮಾಧ್ಯಮ ಸಹಿತ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಲಾಗಿದೆ. ಪ್ರವೇಶ ದ್ವಾರದಲ್ಲೇ ಬಿಗು ಪೊಲೀಸ್ ಕಾವಲು ಹಾಕಲಾಗಿದೆ. ಕಾರ್ಯಾಚರಣೆ ವೇಳೆ ಮಹತ್ವದ ಸಾಕ್ಷ್ಯಗಳನ್ನು ತಂಡ ಕಲೆ ಹಾಕಿದ್ದು ಇದರ ಆಧಾರದಲ್ಲೂ ವಿಚಾರಣೆ ನಡೆಸುತ್ತಿದೆ. ಘಟನೆಗೆ ಸ್ಕೆಚ್ ಹಾಕಿರುವಲ್ಲಿಂದ ತೊಡಗಿ ಪ್ರಕರಣ ಬಳಿಕ ಆರೋಪಿಗಳು ತಲೆಮರೆಸಲು ನೆರವು ನೀಡಿದವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Praveen Nettaru Murder Case, ಎನ್‌ಐಎ ತಂಡದಿಂದ ಪ್ರತ್ಯೇಕ ಕೇಸು ದಾಖಲು
ನಾವೂರು ಪರಿಸರದಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ
ಪ್ರವೀಣ್ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಮಂಗಳವಾರ ಮುಂಜಾನೆ ಸುಳ್ಯದ ನಾವೂರು ಪರಿಸರಕ್ಕೆ ದಿಢೀರ್ ದಾಳಿ ನಡೆಸಿ, ತಮ್ಮ ವಶದಲ್ಲಿರುವ ಕೊಲೆ ಆರೋಪಿ ಶಿಯಾಬ್ ವಾಸವಾಗಿದ್ದ ನಾವೂರಿನ ಮನೆ ಮತ್ತು ಸುತ್ತಮುತ್ತ ತಪಾಸಣೆ ನಡೆಸಿತು.
ಬೆಳಗ್ಗೆ 5.30ರ ವೇಳೆಗೆ ಏಕ ಕಾಲದಲ್ಲಿ ಸುಳ್ಯ ತಾಲೂಕುಗಳ ಹಲವೆಡೆ ದಾಳಿ ನಡೆಸಲಾಗಿದೆ. ಆರು ವಾಹನಗಳಲ್ಲಿ ಬಂದ ಎನ್‌ಐಎ ಅಧಿಕಾರಿಗಳ ತಂಡವೊಂದು, ಕೊಲೆ ಆರೋಪಿ ಶಿಯಾಬ್ ಬಾಡಿಗೆಗಿದ್ದ ಮನೆಯಲ್ಲಿ ತಪಾಸಣೆ ನಡೆಸಿದರಲ್ಲದೆ ಸುತ್ತಮುತ್ತಲಿನ ಮನೆಯಲ್ಲೂ ವಿಚಾರಣೆ ನಡೆಸಿದೆ. ಮುಂಜಾನೆ 9 ಗಂಟೆಯ ವರೆಗೆ ತಪಾಸಣೆ ಮತ್ತು ತನಿಖೆ ನಡೆಸಿದರೆಂದು ತಿಳಿದುಬಂದಿದೆ.