ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಮುಖಂಡ  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಬಗ್ಗೆ  ಎನ್‌ಐಎ ದೆಹಲಿಯಲ್ಲಿ ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆಗೆ ಎನ್‌ಐಎ ಇನ್‌ಸ್ಪೆಕ್ಟರ್‌ನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದೆ.

ಮಂಗಳೂರು (ಆ. 16): ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ದೆಹಲಿಯಲ್ಲಿ ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆಗೆ ಎನ್‌ಐಎ ಇನ್‌ಸ್ಪೆಕ್ಟರ್‌ನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದೆ. ಬೆಳ್ಳಾರೆಯಲ್ಲಿ ಚಿಕನ್‌ ಶಾಪ್‌ ಹೊಂದಿದ್ದ ಪ್ರವೀಣ್‌ ನೆಟ್ಟಾರನ್ನು ಜು.26ರ ರಾತ್ರಿ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಇರಿದು ಪರಾರಿಯಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಪ್ರವೀಣ್‌ ನೆಟ್ಟಾರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ರಾಜ್ಯ ಸರ್ಕಾರಕ್ಕೆ ಸವಾಲಾದ ಈ ಪ್ರಕರಣದಲ್ಲಿ ಮತೀಯ ಶಕ್ತಿಗಳ ಕೈವಾಡ ಶಂಕೆ ಮೇರೆಗೆ ಇದನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳಿಂದ ಬಲವಾದ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರ ಶಿಫಾರಸು ಮಾಡಿದ ಎರಡನೇ ದಿನದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿತ್ತು.

ಇದೇ ವೇಳೆ ದ.ಕ.ಪೊಲೀಸರು ಪ್ರವೀಣ್‌ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಿದ್ದರು. 15 ದಿನಗಳ ಕಾರ್ಯಾಚರಣೆ ಬಳಿಕ ಪ್ರಮುಖ ಆರೋಪಿಗಳಾದ ಸ್ಥಳೀಯ ಶಿಯಾಬುದ್ದೀನ್‌, ರಿಯಾಜ್‌ ಹಾಗೂ ಬಶೀರ್‌ ಈ ಮೂವರನ್ನು ಬಂಧಿಸಲಾಯಿತು. ಪೊಲೀಸ್‌ ಇಲಾಖೆ ಹಾಗೂ ಎನ್‌ಐಎ ಜತೆಯಾಗಿ ತನಿಖೆ ನಡೆಸುತ್ತಿರುವುದಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿಕೆ ನೀಡಿದ್ದರು.

ಇದೀಗ ಕೇಂದ್ರ ಗೃಹ ಇಲಾಖೆ ಆ.3ರಂದು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಪ್ರವೀಣ್‌ ಹತ್ಯೆ ಕೇಸಿನ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ. ಸುಮಾರು ಎರಡು ವಾರಗಳ ಕಾಲ ದ.ಕ.ಜಿಲ್ಲೆಯಲ್ಲಿ ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡ ಎನ್‌ಐಎ ತಂಡ ಇನ್ನು ಕೂಲಂಕಷವಾಗಿ ತನಿಖೆ ನಡೆಸಲಿದೆ.

Praveen Nettaru Murder Case: ಆರೋಪಿಗಳ ಬಂಧನ ಪ್ರಕ್ರಿಯೆ ಒಪ್ಪುವಂಥದ್ದಲ್ಲ: SDPI

ಘಟನೆಗೆ ಸಂಬಂಧಿಸಿ ಜು.27ರಂದು ಬೆಳ್ಳಾರೆ ಪೊಲೀಸರು ದಾಖಲಿಸಿದ ಪ್ರಾಥಮಿಕ ಎಫ್‌ಐಆರ್‌(ಐಪಿಸಿ 1860ರಂತೆ ಸೆಕ್ಷನ್‌ 120 ಬಿ, 302, ಆರ್‌/ಡಬ್ಲ್ಯೂ 34 ಹಾಗೂ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರನ್ವಯ ಸೆಕ್ಷನ್‌ 16 ಮತ್ತು 18) ಮುಂದಿಟ್ಟುಕೊಂಡು ಎನ್‌ಐಎ ದೆಹಲಿ ಎಸ್ಪಿ ಅವರು ಎನ್‌ಐಎ ಕಾಯ್ದೆ 2008ರ ಪ್ರಕಾರ ಆ.4ರಂದೇ ಪ್ರತ್ಯೇಕ ಕೇಸು(ಆರ್‌ಸಿ-36/2022/ಎನ್‌ಐಎ/ಡಿಎಲ್‌ಐ) ದಾಖಲಿಸಿಕೊಂಡಿದ್ದಾರೆ. ಎನ್‌ಐಎ ಬೆಂಗಳೂರು ಇನ್‌ಸ್ಪೆಕ್ಟರ್‌ ಷಣ್ಮುಗಂ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

Praveen Nettaru Murder: ಎನ್‌ಐಎ ತನಿಖೆಯಿಂದ ಕೊಲೆ ಹಿಂದಿನ ಸೀಕ್ರೆಟ್ ಔಟ್

ಪ್ರವೀಣ್‌ ನೆಟ್ಟಾರು ಹತ್ಯೆ: ಮೂವರು ನ್ಯಾಯಾಂಗ ಬಂಧನಕ್ಕೆ
ಸುಳ್ಯ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹತ್ಯೆ ಪ್ರಕರಣದ ಪ್ರಧಾನ ಆರೋಪಿಗಳಾದ ಮಹಮ್ಮದ್‌ ಶಿಹಾಭ್‌, ಅಬ್ದುಲ್‌ ಬಶೀರ್‌, ರಿಯಾಜ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ 5 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿತ್ತು. ಮಂಗಳವಾರ ಪೊಲೀಸ್‌ ಕಸ್ಟಡಿ ಅವಧಿ ಮುಗಿದಿತ್ತು. ಇದೇ ವೇಳೆ ಗುಂಪು ಹಲ್ಲೆಗೊಳಗಾಗಿ ಸಾವಿಗೀಡಾದ ಕಳಂಜದ ಮಸೂದ್‌ ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳಿಗೂ ನ್ಯಾಯಾಂಗ ಕಸ್ಟಡಿ ವಿಸ್ತರಿಸಲಾಗಿದೆ.

ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ತನಿಖೆಯಲ್ಲಿ ಅಸಲಿ ಕಾರಣ ಬಯಲಾಗಿದೆ. ಸ್ಥಳೀಯರಲ್ಲಿ ಭಯ ಹುಟ್ಟಿಸಲು ಕೃತ್ಯಕ್ಕೆ ಸಂಚು ಮಾಡಲಾಗಿತ್ತು ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲಾಗಿದೆ.