ಬೆಂಗಳೂರು(ಸೆ.10):  ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ರೇಡ್‌ಗೆ ಒಳಗಾಗಿದ್ದ ಹಾಗೂ ಬೇರೆ ನಟರ ಮನೆಗಳ ಮೇಲೂ ದಾಳಿಗೆ ಕಾರಣಕರ್ತರಾಗಿದ್ದ ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರೊಬ್ಬರ ಗ್ಯಾಂಬ್ಲಿಂಗ್‌ ಜಾಲದ ಬಗ್ಗೆ ತನಿಖೆ ಮಾಡಿದರೆ ಡ್ರಗ್ಸ್‌ ಜಾಲ, ಹವಾಲಾ ಹಣ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಮತ್ತೊಂದು ಮುಖ ಹೊರ ಬರಲಿದೆ.

ಹೀಗಂತ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದ ಕೊಲಂಬೋದಲ್ಲಿರುವ ಬಾಲಿ ಕ್ಯಾಸಿನೋ ಜತೆ ಆತ್ಮೀಯವಾದ ನಂಟು ಹೊಂದಿರುವ ಈ ನಿರ್ಮಾಪಕ-ವಿತರಕ ತಿಂಗಳಿಗೆ 5 ಸಲವಾದರೂ ಇದೇ ಕ್ಯಾಸಿನೋದಲ್ಲಿ ಜೂಜು ಅಡ್ಡೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಕ್ಯಾಸಿನೋದಲ್ಲಿ ಇದೇ ನಿರ್ಮಾಪಕ, ವಿತರಕ, ಪ್ರದರ್ಶಕ ಎಷ್ಟೆಷ್ಟುಹಣ ಕಳೆದುಕೊಂಡಿದ್ದರು, ಅವರಿಗೆ ಹಣ ಎಲ್ಲಿಂದ ಬಂತು, ಅವರು ಯಾರನ್ನೆಲ್ಲ ಈ ಕ್ಯಾಸಿನೋಗೆ ಪರಿಚಯಿಸಿದ್ದಾರೆ, ಈ ಗ್ಯಾಂಬ್ಲಿಂಗ್‌ನಲ್ಲಿ ಇವರ ಪಾತ್ರವೇನು ಎಂಬುದನ್ನು ತನಿಖೆ ಮಾಡಿದರೆ ಡ್ರಗ್ಸ್‌ ಜಾಲ, ಹವಾಲಾ ಹಣ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಮತ್ತೊಂದು ಮುಖ ಆಚೆ ಬರಲಿದೆ ಎಂದರು.

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ ...

ಈ ಬಗ್ಗೆ ತಾನು ಸದ್ಯದಲ್ಲೇ ಸಾಕ್ಷಿ ಸಮೇತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿಯೂ ಇದೇ ವೇಳೆ ಅವರು ಘೋಷಿಸಿದರು.

ತೆರಿಗೆ ಇಲಾಖೆಯು ಈ ನಿರ್ಮಾಪಕ ಹಾಗೂ ವಿತರಕನ ಮೇಲೆ ರೇಡ್‌ ಮಾಡಿದಾಗ ಕೊಲಂಬೋದಲ್ಲಿರುವ ಶೇಖ್‌ ಫೈಜಿಲ್‌ ಒಡೆತನದ ಕ್ಯಾಸಿನೋ ಜತೆಗಿನ ನಂಟು ಪತ್ತೆ ಆಗಿದೆ. ಜತೆಗೆ ಬೇರೆ ಸ್ಟಾರ್‌ ನಟರ ಮನೆಗಳ ಮೇಲೂ ತೆರಿಗೆ ಅಧಿಕಾರಿಗಳ ದಾಳಿಗೂ ಇದೇ ನಿರ್ಮಾಪಕನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಮಾಹಿತಿಗಳೇ ಕಾರಣವಾಗಿದ್ದವು. ಈ ಬಗ್ಗೆ ನಾನು ಕಳೆದ ವರ್ಷವೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದೆ ಎಂದು ಸಂಬರಗಿ ತಿಳಿಸಿದರು.

ಸ್ಯಾಂಡಲ್‌ವುಡ್‌ನಲ್ಲಿ ಪಾಪದ ಹಣ:

ಈ ನಿರ್ಮಾಪಕ ಹಾಗೂ ವಿತರಕರಿಂದಲೇ ಪಾಪದ ಹಣ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಕೆಲ ನಟ, ನಿರ್ಮಾಪಕ, ವಿತರಕರ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ರೇಡ್‌ ಆಗಲು ಈ ಪಾಪದ ಹಣವೇ ಕಾರಣ. ಇಂಥ ಅಕ್ರಮ ಹಣ ಡ್ರಗ್ಸ್‌ ದಂಧೆಯಲ್ಲಿ ಬಳಕೆ ಆಗುತ್ತಿದೆ ಎಂದಿದ್ದಾರೆ ಪ್ರಶಾಂತ್‌ ಸಂಬರಗಿ.

ಡ್ರಗ್ಸ್ ಪೆಡ್ಲರ್‌ಗಳ ಜೊತೆ ಪ್ರಶಾಂತ್ ಫೋಟೋ ವೈರಲ್ ; ಹೌದು ಎಂದು ಒಪ್ಪಿಕೊಂಡ ಸಂಬರಗಿ.! .

ಕೊಲಂಬೋದ ಕ್ಯಾಸಿನೋ ಜತೆ ನಂಟು ಹೊಂದಿರುವ ವಿತರಕ, ನಿರ್ಮಾಪಕ ಹಾಗೂ ಪ್ರದರ್ಶಕನಾಗಿರುವ ವ್ಯಕ್ತಿಯೊಬ್ಬರು ಕನ್ನಡದ ಹಲವು ನಟರನ್ನು ಜೂಜಾಟಕ್ಕೆ ಪರಿಚಯ ಮಾಡಿಸಿದ್ದಾರೆ. ಇವರ ಮೂಲಕ ನಟರ ಒಂದು ಗುಂಪು ವಾರಂತ್ಯದಲ್ಲಿ ಕೊಲಂಬೋದ ಜೂಜಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಲ್ಲಿ ಕಳೆದುಕೊಂಡ ಹಣವೇ ಡ್ರಗ್ಸ್‌ ಜಾಲಕ್ಕೆ ಬಳಕೆ ಆಗಿ ಅದು ಬ್ಲಾಕ್‌ ಮನಿ ರೂಪದಲ್ಲಿ ಕನ್ನಡ ಚಿತ್ರರಂಗಕ್ಕೂ ಬಂದಿದೆ. ಈ ಬಗ್ಗೆ ನಾನು ಇನ್ನಷ್ಟುಸಾಕ್ಷಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇನೆ. ಯಾವುದೇ ಸಾಕ್ಷಿ ಇಲ್ಲದೆ ನಾನು ಮಾತನಾಡಲ್ಲ ಎಂದರು.

ಜಮೀರ್‌ ಅಕ್ರಮ ಹಣ ಚಿತ್ರರಂಗದಲ್ಲಿದೆ:

ಹೀಗೆ ಅಕ್ರಮವಾಗಿ ಬರುತ್ತಿರುವ ಪಾಪದ ಹಣ ಕನ್ನಡ ಚಿತ್ರರಂಗದಲ್ಲಿ ತುಂಬಿ ತುಳುಕುತ್ತಿದೆ. ಈ ಪಾಪದ ಹಣದಿಂದಲೇ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಅವರು 50ಕ್ಕೂ ಹೆಚ್ಚಿನ ಚಿತ್ರಗಳಿಗೆ ಫೈನಾನ್ಸ್‌ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಪ್ರಶಾಂತ್‌ ಸಂಬರಗಿ ಗಂಭೀರವಾಗಿ ಆರೋಪಿಸಿದ್ದಾರೆ.

ಸಾಕಷ್ಟುಸಿನಿಮಾಗಳ ಪೋಸ್ಟರ್‌ಗಳಲ್ಲಿ ಜಮೀರ್‌ ಅಹ್ಮದ್‌ ಪ್ರಸೆಂಟ್‌ ಅಂತ ಇರುತ್ತದೆ. ಪ್ರಸೆಂಟ್‌ ಅಂದರೆ ಏನು ಅರ್ಥ? ಅಕ್ರಮ ಮಾರ್ಗದಿಂದ ಗಳಿಸಿದ ಪಾಪದ ಹಣವನ್ನೇ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣಕ್ಕೆ ತೊಡಗಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆದರೆ ಅಕ್ರಮ ಹಣದ ಮೂಲ ಹೊರಜಗತ್ತಿಗೆ ತಿಳಿಯಲಿದೆ. ಜಮೀರ್‌ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಣ ಹೂಡಿದ್ದು, ಸ್ಯಾಂಡಲ್‌ವುಡ್‌ ನಡೆಯುತ್ತಿರುವುದು ಪಾಪದ ದುಡ್ಡಿನಲ್ಲಿ ಎಂದು ಹೇಳಿದ್ದಾರೆ.


ಜಮೀರ್‌ ಅಹಮ್ಮದ್‌ಗೆ ಪ್ರಶಾಂತ್‌ ಸಂಬರಗಿ ಪ್ರಶ್ನೆಗಳು

1. ಕಳೆದ 08.09.2019ರಂದು ಕೊಲಂಬೋಗೆ ಹೋಗಿದ್ದ ಟ್ರಿಪ್‌ ಬಗ್ಗೆ ವಿವರಣೆ ಕೊಡಿ. ನೀವು ಗ್ಯಾಂಬ್ಲಿಂಗ್‌ ಅನ್ನು ಅನುಮೋದಿಸುತ್ತೀರಾ?

2. ಶ್ರೀಲಂಕಾದ ಕೊಲಂಬೋದಲ್ಲಿರುವ ಬಾಲಿ ಹೆಸರಿನ ಕ್ಯಾಸಿನೋದ ಮಾಲಿಕ ಶೇಖ್‌ ಫೈಜಿಲ್‌ ಅವರ ಜತೆಗಿನ ನಿಮ್ಮ ಸಂಬಂಧವೇನು?

3. ಇಮ್ತಿಯಾಜ್‌ ಖತ್ರಿ ಹಾಗೂ ಶೇಖ್‌ ಫೈಜಿಲ್‌ ಕೇವಲ ಸ್ನೇಹಿತರೇ ಅಥವಾ ವ್ಯಾಪಾರದಲ್ಲಿ ಪಾಲುದಾರರೇ?

4. ನಿಮ್ಮ 50ನೇ ಹುಟ್ಟುಹಬ್ಬ ಆಚರಿಸಲು ಬಾಲಿವುಡ್‌ ತಾರೆಗಳನ್ನು ಕರೆಸಲು ಇಮ್ತಿಯಾಜ್‌ ಖತ್ರಿ ಸಹಾಯ ಮಾಡಿದ್ದಾರೆಯೇ?

5. ನೀವು ಇಲ್ಲಿವರೆಗೂ ಎಷ್ಟುಕನ್ನಡ ಚಿತ್ರಗಳಿಗೆ ಹಣ ಹೂಡಿಕೆ ಮಾಡಿದ್ದೀರಿ? ಚಿತ್ರರಂಗದಿಂದ ಬಂದ ಲಾಭವನ್ನು ಆದಾಯ ತೆರಿಗೆ ರಿಟನ್ಸ್‌ರ್‍ನಲ್ಲಿ ಉಲ್ಲೇಖ ಮಾಡಿದ್ದೀರಾ?