ಬೆಂಗಳೂರು[ನ.21]: ಜೀವನೋಪಾಯಕ್ಕಾಗಿ ಗ್ಯಾಸ್‌ ಸ್ಟೌವ್‌ಗಳ ರಿಪೇರಿ ಮಾಡಿಕೊಂಡಿದ್ದ ತಂದೆ ಮಗನನ್ನು ಸಕಾರಣವಿಲ್ಲದೆ ಠಾಣೆಗೆ ಕರೆದೊಯ್ದು ಅಸ್ವಸ್ಥರಾಗುವಂತೆ ಥಳಿಸಿದ್ದ ಬಾಣಸವಾಡಿ ಠಾಣಾ ಪೊಲೀಸ್‌ ಸಿಬ್ಬಂದಿಗೆ ಮಾನವ ಹಕ್ಕುಗಳ ಆಯೋಗ .50 ಸಾವಿರ ದಂಡ ವಿಧಿಸಿದೆ.

ಈ ದಂಡದ ಮೊತ್ತವನ್ನು ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿಗಳಿಗೆ ತಲಾ .25 ಸಾವಿರದಂತೆ ಪರಿಹಾರವಾಗಿ ನೀಡಬೇಕು. ಜೊತೆಗೆ, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವೇತನದಿಂದ ಕಡಿತ ಮಾಡಿಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಕೆ.ಬಿ.ಚಂಗಪ್ಪ ಅವರಿದ್ದ ಏಕ ಸದಸ್ಯ ಪೀಠ ಆದೇಶಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ, ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮುರಳಿ, ಮುಖ್ಯಪೇದೆ ಲೋಕೇಶ್‌ ಅವರು, ನಿಯಂತ್ರಣಾ ಕೊಠಡಿ, ಠಾಣಾ ಮೇಲಾಧಿಕಾರಿಗಳ ಸೂಚನೆ ಇಲ್ಲದಿದ್ದರೂ ಸಂತ್ರಸ್ತ ಸತೀಶ್‌ ಅವರ ದ್ವಿಚಕ್ರ ವಾಹನಗಳ ದಾಖಲೆಗಳನ್ನು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಬಳಿಕ ಠಾಣೆಗೆ ಕರೆದೊಯ್ದು ಹಿಂಸೆ ನೀಡಿದ್ದಾರೆ. ಈ ವಿಚಾರ ಠಾಣಾಧಿಕಾರಿಯಾಗಿದ್ದ ಡಿ.ಎಚ್‌.ಮುನಿಕೃಷ್ಣ ಅವರ ಗಮನಕ್ಕೆ ಬಂದರೂ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಆಯೋಗಕ್ಕೆ ವರದಿ ಸಲ್ಲಿಸಿದ್ದರು.

ಆರೋಪ ನಿರಾಕರಿಸಿದ್ದ ಪೊಲೀಸರು:

ಘಟನೆ ಸಂಬಂಧಿಸಿದಂತೆ ಠಾಣಾಧಿಕಾರಿ ಮುನಿಕೃಷ್ಣ, ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಮತ್ತು ಸಿಬ್ಬಂದಿ ಆಯೋಗದ ಡಿವೈಎಸ್‌ಪಿ ಸಲ್ಲಿಸಿದ್ದ ಅಪಾದನೆಯನ್ನು ನಿರಾಕರಿಸಿದ್ದರು. ನಾವು(ಠಾಣಾ ಸಿಬ್ಬಂದಿ) ಯಾವುದೇ ಕರ್ತವ್ಯ ಲೋಪವೆಸಗಿಲ್ಲ. ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಆಯೋಗಕ್ಕೆ ತಿಳಿಸಿದ್ದರು. ಅಲ್ಲದೆ, ದೂರುದಾರರ ಪತಿ ಮತ್ತು ಮಗ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು ಎಂದು ವಿವರಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದ ಆಯೋಗ, ಪೊಲೀಸ್‌ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಕ್ಕೆ ಪುರಾವೆಗಳನ್ನು ನೀಡಬೇಕು. ಈ ಅಂಶ ನಿಜವೇ ಆದಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಬೇಕು. ಆ ಕಾರ್ಯಕ್ಕೆ ಮುಂದಾಗದೆ ಠಾಣೆಗೆ ಕರೆದೊಯ್ದು ಹಿಂಸೆ ನೀಡಿರುವುದು ಕರ್ತವ್ಯಲೋಪ ವೆಸಗಿರುವುದು ಸಾಬೀತು ಪಡಿಸುತ್ತದೆ. ಈ ಅಂಶಗಳನ್ನು ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸಿರುವುದಾಗಿ ಮಾನವ ಹಕ್ಕು ಆಯೋಗ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣ:

ಲಿಂಗರಾಜಪುರದಲ್ಲಿ ಗ್ಯಾಸ್‌ ಸ್ಟೌವ್‌ ರಿಪೇರಿ ಅಂಗಡಿ ನಡೆಸುತ್ತಿದ್ದ ಸತೀಶ್‌ ಎಂಬುವರಲ್ಲಿಗೆ 2018ರ ಜುಲೈ 28ರಂದು ಬಾಣಸವಾಡಿ ಠಾಣೆ ಸಿಬ್ಬಂದಿಯೊಂದಿಗೆ ಸಬ್‌ ಇನ್‌ಸ್ಪೆಕ್ಟರ್‌ ಮುರಳಿ ಹೋಗಿದ್ದರು. ಈ ವೇಳೆ ಸತೀಶ್‌ ಅವರ ಬಳಿಯಿದ್ದ ಎರಡು ದ್ವಿಚಕ್ರ ವಾಹನಗಳ ದಾಖಲೆ ನೀಡಲು ಸೂಚಿಸಿದ್ದರು. ಸತೀಶ್‌ ಒಂದು ವಾಹನದ ದಾಖಲೆಗಳನ್ನು ನೀಡಿ ಮತ್ತೊಂದು ವಾಹನದ ದಾಖಲೆಗಳು ನೀಡುವುದಾಗಿ ತಿಳಿಸಿದ್ದರು.

ಇದರಿಂದ ಅಸಮಾಧಾನಗೊಂಡಿದ್ದ ಸಿಬ್ಬಂದಿ, ಸತೀಶ್‌ ಮತ್ತು ಆತನ ಮಗ ಸ್ಯಾಮ್‌ಸನ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಠಾಣೆಗೆ ಕರೆದೊಯ್ದು ಲಾಕಪ್‌ನಲ್ಲಿರಿಸಿ ದೈಹಿಕವಾಗಿ ಹಿಂಸಿಸಿದ್ದರು. ಪರಿಣಾಮ ಸತೀಶ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದರು. ಬಳಿಕ ಆತನ ಸ್ನೇಹಿತರು ಠಾಣೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್‌ ಆಗಿದ್ದರು. ಘಟನೆಗೆ ಸಂಬಂಧ ಸತೀಶ್‌ ಪತ್ನಿ ಪೌಲಿನ್‌ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.