ಸೋಷಿಯಲ್ ಮೀಡಿಯಾದಲ್ಲಿ ಅವ್ಯಾಚ್ಯ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ, ನ್ಯಾಯಾಧೀಶರ ಮುಂದೆ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಅವರಿಗೆ ಸೂಚಿಸಲಾಗಿದೆ.  

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅವ್ಯಾಚ್ಯ ನಿಂದನೆ ಆರೋಪಕ್ಕೆ ಸಂಬಂಧಿಸಿದ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪೊಲೀಸರು ಅಧಿಕೃತವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ, ವಿಜಯಲಕ್ಷ್ಮಿ ಅವರ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಪೊಲೀಸರು ಜಾರಿ ಮಾಡಿದ ನೋಟಿಸ್‌ನಲ್ಲಿ, ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಯನ್ನು ದಾಖಲಿಸುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ. ಅದರಂತೆ, ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಹೇಳಿಕೆಯನ್ನು ದಾಖಲಿಸಬೇಕು ಎಂದು ವಿಜಯಲಕ್ಷ್ಮಿಗೆ ಸೂಚಿಸಲಾಗಿದೆ.

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ನಗರದ ಸಿಸಿಬಿ (CCB) ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ದೂರು ದಾಖಲಿಸಿದ್ದರು.ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು 3 ತಂಡಗಳಾಗಿ ತನಿಖೆ ಆರಂಭಿಸಿ ಮೆಟಾ ಸಂಸ್ಥೆಯಿಂದ ಕೆಟ್ಟ ಕಮೆಂಟ್ ಮಾಡಿರುವ ಖಾತೆಗಳ ಕುರಿತು ಮಾಹಿತಿ ಕೇಳಿದ್ದರು. ವಿಜಯಲಕ್ಷ್ಮಿ 18 ಖಾತೆಗಳ ವಿರುದ್ಧ ದೂರು ನೀಡಿದ್ದರು. ಈಗಾಗಲೇ ಪ್ರಕರಣ ಸಂಬಂಧ 8 ಜನರ ಬಂಧನವಾಗಿದೆ.

ನ್ಯಾಯಾಂಗ ಪ್ರಕ್ರಿಯೆ ವೇಗ

ಅವ್ಯಾಚ್ಯ ನಿಂದನೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆ, ತನಿಖೆಯನ್ನು ವೇಗಗೊಳಿಸಿರುವ ಪೊಲೀಸರು, ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ದಾಖಲಿಸಲು 164 ಹೇಳಿಕೆ ಅಗತ್ಯ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನ್ಯಾಯಾಲಯದಲ್ಲಿ ದಾಖಲಾಗುವುದರಿಂದ, ಮುಂದಿನ ನ್ಯಾಯಾಂಗ ಕ್ರಮಗಳಿಗೆ ಇದು ಪ್ರಮುಖ ದಾಖಲೆ ಆಗಲಿದೆ.

ತನಿಖೆಯ ಮುಂದಿನ ಹಂತ

ವಿಜಯಲಕ್ಷ್ಮಿ ಅವರು ನಿಗದಿತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ನಂತರ, ಪ್ರಕರಣಕ್ಕೆ ಸಂಬಂಧಿಸಿದ ಇತರೆ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.