ಬೆಂಗಳೂರು(ನ.22):  ಹಲಸೂರು ಗೇಟ್‌ ಠಾಣಾ ವ್ಯಾಪ್ತಿಯಲ್ಲಿ ನ.11ರಂದು ಪೊಲೀಸರ ಸೋಗಿನಲ್ಲಿ ರಾತ್ರೋರಾತ್ರಿ ಚಿನ್ನಾಭರಣ ತಯಾರಿಸುವ ಮಳಿಗೆಗೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಅಸಲಿ ಕಾನ್ಸ್‌ಟೇಬಲ್‌ವೊಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾದ ಕಾಡುಗೋಡಿ ಠಾಣೆಯ ಕಾನ್‌ಸ್ಟೇಬಲ್‌ ಅಶೋಕ್‌ನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನ.11ರಂದು ತಡರಾತ್ರಿ 3 ಗಂಟೆಯಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ನಾಲ್ವರು ಅಪರಿಚಿತರು ಮಳಿಗೆ ಬಾಗಿಲು ತಟ್ಟಿದ್ದರು. ಪೊಲೀಸ್‌ ಸಮವಸ್ತ್ರದಲ್ಲಿದ್ದನ್ನು ನೋಡಿದ ಕೆಲಸಗಾರರು ಬಾಗಿಲು ತೆಗೆದಿದ್ದರು. ಒಳನುಗ್ಗಿದ್ದ ದುಷ್ಕರ್ಮಿಗಳು ಸಿಬ್ಬಂದಿಯನ್ನು ನಿಂದಿಸಿ, ಅಂಗಡಿ ಮೇಲೆ ದಾಳಿ ನಡೆಸಿರುವುದಾಗಿ ಹೇಳಿ ಬೆದರಿಸಿದ್ದರು. ಸಮವಸ್ತ್ರ ಧರಿಸಿದ್ದವರ ಪೈಕಿ ಅಶೋಕ್‌ ಕೂಡ ಇದ್ದರು. ಆರೋಪಿಗಳು ಮಳಿಗೆಯ ಸಿಬ್ಬಂದಿಯನ್ನು ಬೆದರಿಸಿ 200 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್‌ ಕಸಿದು ಪರಾರಿಯಾಗಿದ್ದರು.

ಪೊಲೀಸರು ಲಂಚ ಕೇಳಿದ್ರೆ ವಾಟ್ಸಾಪ್‌ ಮಾಡಿ..! 

ಮಳಿಗೆಯ ಮಾಲೀಕ ಕಾರ್ತಿಕ್‌ ಎಂಬುವರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳು ಕಾನ್‌ಸ್ಟೇಬಲ್‌ ಅಶೋಕ್‌ ಕೂಡ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದರು. ಕೃತ್ಯದಲ್ಲಿ ಇನ್ನೊಬ್ಬ ಪೊಲೀಸ್‌ ಕಾನ್ಸ್‌ಟೇಬಲ್‌ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ದೂರಿನ ಮೇರೆಗೆ ಹಲಸೂರು ಗೇಟ್‌ ಠಾಣೆ ಪೊಲೀಸರು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.