ಪೊಲೀಸರ ಖಡಕ್‌ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ರಂಗಪ್ಪ, ಶ್ರೀನಿವಾಸ್‌, ದಾಖಲೆ ಸಮೇತ ಹಾಜರಿಗೆ ಸೂಚನೆ

ಬೆಂಗಳೂರು(ಡಿ.04):  ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ಹಾಗೂ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಶ್ರೀನಿವಾಸ್‌ ಅವರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಶನಿವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ನೋಟಿಸ್‌ ಹಿನ್ನಲೆಯಲ್ಲಿ ಬೆಳಗ್ಗೆ 10ಕ್ಕೆ ತನಿಖಾಧಿಕಾರಿ ಮುಂದೆ ರಂಗಪ್ಪ ಹಾಗೂ ಮಧ್ಯಾಹ್ನ 3ಕ್ಕೆ ಶ್ರೀನಿವಾಸ್‌ ಪ್ರತ್ಯೇಕವಾಗಿ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಈ ಇಬ್ಬರು ಅಧಿಕಾರಿಗಳು, ತನಿಖಾ ತಂಡಕ್ಕೆ ದಾಖಲೆ ಸಲ್ಲಿಸಲು ಸಮಯ ಅವಕಾಶ ಕೇಳಿದರು. ಈ ಮನವಿಗೆ ಸಮ್ಮತಿಸಿದ ತನಿಖಾಧಿಕಾರಿಗಳು, ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅಧಿಕಾರಿಗಳನ್ನು ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಬಿಎಂಪಿ ಅಧಿಕಾರಿಗಳ ಪಾತ್ರವಿಲ್ಲ: ಮಾನಸಿಕ ಹಿಂಸೆ ನೀಡಬೇಡಿ

‘ತಾವು ಯಾವುದೇ ತಪ್ಪು ಮಾಡಿಲ್ಲ. ಮತದಾರರ ಮಾಹಿತಿ ಸಂಗ್ರಹದಲ್ಲಿ ಅಕ್ರಮ ನಡೆದಿದೆ ಎಂಬ ಸಂಗತಿ ತಿಳಿದ ಕೂಡಲೇ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಪೊಲೀಸ್‌ ಠಾಣೆಗೆ ನಾವೇ ದೂರು ದಾಖಲಿಸಿದ್ದೇವೆ’ ಎಂದು ವಿಚಾರಣೆ ವೇಳೆ ಈ ಇಬ್ಬರು ಐಎಎಸ್‌ ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮತದಾರರ ಮಾಹಿತಿ ಸಂಗ್ರಹದಲ್ಲಿ ಕರ್ತವ್ಯಲೋಪದ ಎಸಗಿದ ಆರೋಪದ ಮೇರೆಗೆ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್‌ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಾಗಿದ್ದ (ಆಡಳಿತ) ರಂಗಪ್ಪ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತು. ಮತದಾರರ ಜಾಗೃತಿ ಸಲುವಾಗಿ ನಿಯೋಜನೆಗೊಂಡಿದ್ದ ಚಿಲುಮೆ ಸಂಸ್ಥೆಯ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸದೆ ಈ ಇಬ್ಬರು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಚಿಲುಮೆ ಸಂಸ್ಥೆಗೆ ಕಾರ್ಡ್ ಕೊಟ್ಟಿರುವುದು ನಿಜ ಎಂದ ಅಧಿಕಾರಿಗಳು

ಬೆಂಗಳೂರು ಕೇಂದ್ರ ವಲಯದ ಅಪರ ಚುನಾವಣಾಧಿಕಾರಿಯಾಗಿ ರಂಗಪ್ಪ ಹಾಗೂ ಬೆಂಗಳೂರು ನಗರ ಚುನಾವಣಾಧಿಕಾರಿಯಾಗಿ ಶ್ರೀನಿವಾಸ್‌ ಕೆಲಸ ಮಾಡಿದ್ದರು. ಮತದಾರರ ಹೆಸರು ನೋಂದಣಿ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಈ ಇಬ್ಬರು ಹಿರಿಯ ಅಧಿಕಾರಿಗಳಿಗೆ ಮಹತ್ವದ ಜವಾಬ್ದಾರಿ ಇತ್ತು. ಹೀಗಿದ್ದರೂ ಕೂಡಾ ಅಧಿಕಾರಿಗಳು ಕರ್ತವ್ಯ ತೋರಿದ್ದಾರೆ. ನಿಯಮಿತವಾಗಿ ಚಿಲುಮೆ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯದೆ ಉದಾಸೀನತೆ ತೋರಿದ್ದರು ಎಂಬ ಆರೋಪ ಕೇಳಿ ಬಂದಿದೆ.

ನೋಟಿಸ್‌ ಹಿನ್ನೆಲೆಯಲ್ಲಿ ವಿಚಾರಣೆ ಹಾಜರಾಗಿದ್ದ ಅಧಿಕಾರಿಗಳನ್ನು ಎರಡು ಗಂಟೆಗಳು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಗೆ ಬೆವರಿದ ಅಧಿಕಾರಿಗಳು, ಪ್ರತಿಯೊಂದು ಪ್ರಶ್ನೆಗೂ ತಮಗೆ ಗೊತ್ತಿಲ್ಲ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಬುಧವಾರ ದಾಖಲೆ ಸಮೇತ ವಿಚಾರಣೆ ಬರುವಂತೆ ಸೂಚಿಸಿ ಅವರಿಬ್ಬರನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.