ಗಾಜಿಯಾಬಾದ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರಿಯಾಗಿರುವ ಸೊಸೆಯೊಬ್ಬಳು ಅತ್ತೆಯ ಮೇಲೆ ಹಲ್ಲೆ ನಡೆಸಿ ಎಳೆದಾಡಿದ ಘಟನೆ ವರದಿಯಾಗಿದೆ.
ಸೊಸೆಯೊಬ್ಬಳು ಅತ್ತೆಯ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಹಿಡಿದು ಎಳೆದಾಡಿದ ಅಮಾನವೀಯ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಆದರೆ ಹಲ್ಲೆ ಮಾಡಿದ ಸೊಸೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ಪುತ್ರಿ ಎಂದು ಕೇಸ್ ದಾಖಲಿಸಿದ ಘಟನೆ ನಡೆದಿದೆ. ಜುಲೈ 1 ರಂದು ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆಕಾಂಕ್ಷಾ ಎಂಬಾಕೆಯ ಅತ್ತೆಯ ಮೇಲೆ ಹಲ್ಲೆ ಮಾಡಿದ ಸೊಸೆ. ಈಕೆಯ ತಂದೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದು, ಇದೇ ಕಾರಣಕ್ಕೆ ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವೈರಲ್ ಆದ ಸಿಸಿಟಿವಿ ವೀಡಿಯೋದಲ್ಲಿ ಸೊಸೆ ತನ್ನ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅವರನ್ನು ಮೆಟ್ಟಿಲುಗಳ ಮೂಲಕ ಕೆಳಗೆ ಎಳೆದುಕೊಂಡು ಬರಲು ಯತ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಈ ಘಟನೆಯಲ್ಲಿ ಮೂವರು ಭಾಗಿಯಾಗಿದ್ದು, ಅದರಲ್ಲಿ ಒಬ್ಬ ಮಹಿಳೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. 28 ಸೆಕೆಂಡ್‌ಗಳ ಸಿಸಿಟಿವಿ ವೀಡಿಯೋದಲ್ಲಿ ಮೊದಲಿಗೆ ಅತ್ತೆ ಸೊಸೆ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ. ಎರಡು ಬ್ಯಾಗನ್ನು ಹಿಡಿದುಕೊಂಡು ಹೊರಗಿನಿಂದ ಬಂದ ಆಕಾಂಕ್ಷಾ ಅತ್ತೆಯ ಜೊತೆ ಜಗಳ ತೆಗೆದಿದ್ದು, ಅವರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಆಕೆಯ ತಾಯಿ ಜಗಳ ಬಿಡಿಸಲು ಹೋಗದೇ ಮೆಟ್ಟಿಲುಗಳ ಬಳಿ ಮೊಬೈಲ್ ಹಿಡಿದುಕೊಂಡು ದೃಶ್ಯವನ್ನು ರೆಕಾರ್ಡ್ ಮಾಡುವುದನ್ನು ಕಾಣಬಹುದು.
ಆಕಾಂಕ್ಷಾ ಅತ್ತೆಯತ್ತ ಕಿರುಚಾಡಿದ್ರೆ ಇತ್ತ ಆಖೆಯ ಅತ್ತೆ ಮನೆಯೊಳಗಿನ ಮಹಡಿಯ ಮೆಟ್ಟಿಲುಗಳಲ್ಲಿ ಮೊದಲ ಮೆಟ್ಟಿಲಿನ ಮೇಲೆ ಕುಳಿತಿದ್ದಾರೆ. ಈ ವೇಳೆ ಆಕಾಂಕ್ಷಾ ಪದೇ ಪದೇ ಅತ್ತೆಯ ತಲೆಗೆ ಹೊಡೆದಿದ್ದು, ಆಖೆಯನ್ನು ಮೆಟ್ಟಿಲುಗಳಿಂದ ಕೆಳಗೆ ಎಳೆಯುವುದಕ್ಕೆ ಯತ್ನಿಸುವುದನ್ನು ಕಾಣಬಹುದಾಗಿದೆ.
ಈ ವೇಳೆ ಆಕಾಂಕ್ಷ ತನ್ನ ಬ್ಯಾಗನ್ನು ಬೇರೆಡೆ ಇಡಲು ಹೋಗಿದ್ದಾಳೆ. ಈ ಮಧ್ಯೆ ಆಕೆಯ ಅತ್ತೆ ಬಾಗಿಲಿನ ಬಳಿ ಹೋಗಿದ್ದು, ಬಾಗಿಲನ್ನು ಬಡಿಯುವುದನ್ನು ಕಾಣಬಹುದು. ಈ ವೇಳೆ ಆಕಾಂಕ್ಷ ಆಕೆಯನ್ನು ಹಿಂದಕ್ಕೆ ಎಳೆದು ಆಕೆಯ ಕೈಯನ್ನು ಹಿಡಿದುಕೊಂಡು ಅವಳನ್ನು ಗೋಡೆಯತ್ತ ಒಮ್ಮೆ ತಳ್ಳಿ ನಂತರ ಬಲವಾಗಿ ಎಳೆಯುತ್ತಾಳೆ. ಈ ವೇಳೆ ವಯಸ್ಸಾದ ಮಹಿಳೆ ಕೆಳಗೆ ಬಿದ್ದಿದ್ದು, ಆಕೆಯ ಕಾಲಿನಲ್ಲಿದ್ದ ಚಪ್ಪಲಿ ಕಳಚಿಕೊಂಡಿದೆ.ಅವುಗಳನ್ನು ಬೇರೆಡೆ ಕಾಲಿನಲ್ಲೇ ತಳ್ಳಿದ ಆಕಾಂಕ್ಷಾ ಅತ್ತೆಯನ್ನು ಮೆಟ್ಟಿಲುಗಳಿಂದ ಕೆಳಗೆ ಎಳೆಯಲು ಪ್ರಾರಂಭಿಸುತ್ತಾಳೆ.
ಆಗ ಬಾಗಿಲು ತೆರೆಯುತ್ತದೆ, ಮತ್ತು ಆಕಾಂಕ್ಷಾ ತಿರುಗಿ ತನ್ನ ಅತ್ತೆಯನ್ನು ಮನೆಯೊಳಗೆ ಎಳೆದುಕೊಂಡು ಹೋಗುತ್ತಾಳೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡಿದಾಗ ಹಲ್ಲೆ ಮಾಡಿದ ಸೊಸೆ ಆಕಾಂಕ್ಷ ಸಾಫ್ಟ್‌ವೇರ ಎಂಜಿನಿಯರ್ ಆಗಿದ್ದು, ಎರಡೂವರೆ ವರ್ಷಗಳ ಹಿಂದೆ ಅಂತರಿಕ್ಷ್ ಅವರನ್ನು ಮದುವೆಯಾಗಿದ್ದರು. ಅಂತರಿಕ್ಷ್ ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಗುರುಗ್ರಾಮ್‌ದಿಂದ ಹೊರಗೆ ಕೆಲಸ ಮಾಡುತ್ತಿದ್ದ, ಇತ್ತ ಸೊಸೆ, ಆಕಾಂಕ್ಷಾ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. ಈ ಬಗ್ಗೆ ಈಗ ಗಾಜಿಯಾಬಾದ್‌ನ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.