ಏಷ್ಯಾನೆಟ್ ಸುವರ್ಣ ನ್ಯೂಸ್ ಹೆಸರಲ್ಲಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದವರು ಅರೆಸ್ಟ್

ಅವರಿಬ್ಬರು ಕೊರಿಯರ್ ಸರ್ವಿಸ್ ಹಾಗೂ ಫುಡ್ ಡೆಲಿವರಿ ಸರ್ವಿಸ್ ಮಾಡುವವರಂತೆ ಮುಖವಾಡ ಹಾಕಿದ್ದ ಖದೀಮರು. ಆದರೆ, ಅಸಲಿಗೆ ಅವರು ಅಧಿಕಾರಿಗಳನ್ನೇ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡ್ತಿದ್ದ ದುರುಳರು. ಆದರೆ, ಈ ಬಾರಿ ಯಾವಾಗ ಏಷ್ಯಾನೆಟ್ ಸುವರ್ಣ ನ್ಯೂಸ್ ಹೆಸರು ದುರ್ಬಳಕೆ ಮಾಡಿ ಕಾರವಾರದ ಅಧಿಕಾರಿಯೊಬ್ಬರನ್ನು ವಸೂಲಿ ಮಾಡಲು ಮುಂದಾದ್ರೋ, ಅವರ ನಸೀಬು ಕೈಕೊಟ್ಟು ಜೈಲು ಸೇರುವಂತೆ ಮಾಡಿದೆ. ಈ ಮೂಲಕ ಕಾರವಾರ ಪೊಲೀಸರಿಗೆ ದೊಡ್ಡ ವಸೂಲಿ ಗ್ಯಾಂಗ್ ಬಗ್ಗೆ ಒಂದು ಸುಳಿವು ಸಿಕ್ಕಂತಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.. 

Police Arrests Two Black mailers  In Karwar rbj

ವರದಿ: ಭರತ್‌ರಾಜ್ ಕಲ್ಲಡ್ಕ  ಏಷ್ಯಾನೆಟ್ ಸುವರ್ಣ ನ್ಯೂಸ್ ಕಾರವಾರ

ಕಾರವಾರ, (ಜುಲೈ.12): ಕಳ್ಳ ಖದೀಮರನ್ನು, ಭ್ರಷ್ಟರನ್ನು, ವಂಚರನ್ನು ಪ್ರತೀ ಬಾರಿ ಮಟ್ಟ ಹಾಕುತ್ತಿದ್ದ ಏಷ್ಯಾನೆಟ್  ಸುವರ್ಣ ನ್ಯೂಸ್, ಜನಸೇವೆಯೇ ಪರಮೋಧರ್ಮ ಎಂಬಂತೆ ನಡೆಯುತ್ತಿದೆ. ಇಲ್ಲಿ ಪ್ರತಿಯೊಬ್ಬ ಸ್ಟಾಫ್ ಮಾತ್ರವಲ್ಲದೇ "ಏಷ್ಯಾನೆಟ್ ಸುವರ್ಣ ನ್ಯೂಸ್" ಅನ್ನೋ‌ ಹೆಸರು ಕೂಡಾ ಡ್ಯೂಟಿ ಮಾಡುತ್ತೆ ಅಂತಾ ಗೊತ್ತಿರದ ಖದೀಮರಿಬ್ಬರು, ಈ ಹೆಸರನ್ನು ದುರ್ಬಳಕೆ ಮಾಡಲು ಹೋಗಿ ಇದೀಗ ಜೈಲು ಸೇರಿದ್ದಾರೆ.

ಹೌದು.. ಕೊರಿಯರ್ ಸರ್ವಿಸ್ ನಡೆಸುತ್ತಿದ್ದ ಬೆಂಗಳೂರು ಬನಶಂಕರಿ 2ನೇ ಸ್ಟೇಜ್ ಓಬಳಪ್ಪ ಗಾರ್ಡನ್ ನಿವಾಸಿ ಸಮಂತ (44) ಹಾಗೂ ಫುಡ್ ಡೆಲಿವರಿ ಸರ್ವಿಸ್ ಮಾಡ್ತಿದ್ದ ಜಯನಗರ 6ನೇ ಬ್ಲಾಕ್ ನಿವಾಸಿ ವಿಜಯ ಸಿ. (44) ಬಂಧಿತ ಆರೋಪಿಗಳು. ಹೆಸರಿಗೆ ಮಾತ್ರ ಕೊರಿಯರ್ ಹಾಗೂ ಫುಡ್ ಡೆಲಿವರಿ ಸರ್ವಿಸ್ ಮಾಡುತ್ತಿದ್ದ ಈ ವಂಚಕರು, ಅಸಲಿಗೆ ಮಾಡುತ್ತಿದ್ದ ಕೆಲಸವೇ ಬ್ಲ್ಯಾಕ್ ಮೇಲ್. 

ಲಾರಿ ಚಾಲಕನಿಗೆ ಥಳಿಸಿ ಹಣ ಸುಲಿದ ಅಪ್ರಾಪ್ತ ಸೇರಿ 3 ಸೆರೆ

ಈ ಖದೀಮರಿಬ್ಬರು ಏಷ್ಯಾನೆಟ್ ಸುವರ್ಣ ನ್ಯೂಸ್‌‌ನ ಸಿಬ್ಬಂದಿಯೆಂದು ಸುಳ್ಳು ಹೇಳಿ ಕಳೆದ ಒಂದು ವಾರದಿಂದ ಕಾರವಾರ ಪಿಡಬ್ಲ್ಯುಡಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡ್ತಿದ್ದರು. ಅಲ್ಲದೇ, ತಮ್ಮ ವಾಟ್ಸಪ್ ಡಿಪಿಯಲ್ಲಿ ಏಷ್ಯಾನೆಟ್
ಸುವರ್ಣ ನ್ಯೂಸ್ ಲೋಗೋವನ್ನು ಕೂಡಾ ಹಾಕಿಕೊಂಡಿದ್ದರು. ಅಧಿಕಾರಿಗೆ ಕರೆ ಮಾಡಿ ಸಿಕ್ಕಾಪಟ್ಟೆ ಟಾರ್ಚರ್ ನೀಡುತ್ತಿದ್ದ ಈ ವಂಚಕರು, ಅಧಿಕಾರಿಗೆ ಕರೆ ಮಾಡಿ, ನೀವು ಬೇನಾಮಿ ಆಸ್ತಿ ಮಾಡಿದ್ದೀರಿ. ನಿಮ್ಮ ಬಗ್ಗೆ ಸುವರ್ಣ ನ್ಯೂಸ್‌ನಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇವೆ. ನ್ಯೂಸ್ ಚಾನೆಲ್‌ನಲ್ಲಿ ಹಾಕೋದು ಬೇಡವೆಂದ್ರೆ ನಮಗೆ 50 ಲಕ್ಷ ರೂ. ನೀಡಬೇಕು ಎಂದು ವಸೂಲಿ ಮಾಡಲು ಮುಂದಾಗಿದ್ರು. 

ಅಲ್ಲದೇ, ಅಧಿಕಾರಿ ಜತೆ ನೇರಾನೇರ ಮಾತನಾಡಿ, ಹೆದರಿಸಿ ಹಣ ಪೀಕಿಸಬೇಕೆಂಬ ಉದ್ದೇಶದಿಂದ ನಿನ್ನೆ(ಸೋಮವಾರ) ಕಾರವಾರಕ್ಕೆ ಬಂದು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಯಾವಾಗ ಪಿಡಬ್ಲ್ಯೂಡಿ ಕಚೇರಿ ಬಳಿ ತೆರಳಿ ಅಧಿಕಾರಿಯನ್ನು ಕರೆಯಿಸಿ ಮಾತನಾಡಲು ಮುಂದಾದ್ರೋ ಆವಾಗಲೇ ಪೊಲೀಸರ ಜಾಲಕ್ಕೆ ಬಿದ್ದು ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ವಸೂಲಿ ಮಾಡುವ ದೊಡ್ಡ ಗ್ಯಾಂಗ್‌ನ ಸುಳಿವು ಪೊಲೀಸರಿಗೆ ದೊರಕಿದೆ.

ಈ ಖದೀಮರಿಬ್ಬರು ಯಾವಾಗ ಪದೇ ಪದೇ ಕರೆ ಮಾಡಿ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಯನ್ನು ಬ್ಲ್ಯಾಕ್ ಮೇಲ್ ಮಾಡಲು ಮುಂದಾದ್ರೋ, ಬೇಸತ್ತ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಉತ್ತರಕನ್ನಡ ಜಿಲ್ಲಾ ಎಸ್ಪಿ ಸುಮನಾ ಡಿ.ಪೆನ್ನೇಕರ್ ಅವರ ನಿರ್ದೇಶನದಂತೆ ಕಾರವಾರ ನಗರ ಠಾಣೆಯ ಸೂಪರ್ ಕಾಪ್ ಪಿಎಸ್‌ಐ ಸಂತೋಷ್ ಕುಮಾರ್, ತನ್ನ ತಂಡದ ಮೂಲಕ ಈ ವಂಚರನ್ನು ರೆಡ್ ಹ್ಯಾಂಡ್ ಹಿಡಿಯಲು ಟ್ರ್ಯಾಪ್ ರೆಡಿ ಮಾಡಿದ್ರು. ಯೋಜನೆಯಂತೆ ಖದೀಮರನ್ನು ಪಿಡಬ್ಲ್ಯುಡಿ ಕಚೇರಿಯ ಬಳಿ ಅಧಿಕಾರಿಯನ್ನು ಭೇಟಿ ಮಾಡಲು ಬಿಟ್ಟು  ಸ್ಥಳದಲ್ಲೇ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. 

ಅಲ್ಲದೇ, ಆರೋಪಿಗಳಿಂದ ಒಂದು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ತಮಗೂ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ ಎಂದಿರುವ ಆರೋಪಿಗಳು, ತಾವು ಬೇರೆಡೆಯೂ ಮಾಧ್ಯಮ ಹಾಗೂ ಇತರ ಇಲಾಖೆಗಳ ಹೆಸರಿನಲ್ಲಿ ವಸೂಲಿ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ, ಈ ಆರೋಪಿಗಳ ಹಿಂದೆ ಬೆಂಗಳೂರಿನಲ್ಲಿರುವ ಕಿಂಗ್ ಪಿನ್ ಹಾಗೂ ವಸೂಲಿ ಮಾಡುವ ದೊಡ್ಡ ತಂಡದ ಸುಳಿವು ಕೂಡಾ ಪೊಲೀಸರಿಗೆ ದೊರಕಿದೆ. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಈ ಗ್ಯಾಂಗ್ ಅನ್ನು ಹತ್ತಿಕ್ಕಲು ಸ್ಕೆಚ್ ತಯಾರಿಸುತ್ತಿದೆ. ಇನ್ನು ಮಾಧ್ಯಮದ ಹೆಸರನ್ನು ದುರುಪಯೋಗಗೊಳಿಸಿ ವಸೂಲಿಗೆ ಇಳಿಯುವ ಇಂತಹ ಗ್ಯಾಂಗ್‌ಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಒಟ್ಟಿನಲ್ಲಿ ಮಾಧ್ಯಮ ಹಾಗೂ ಇತರ ಇಲಾಖೆಯ ಹೆಸರಿನಲ್ಲಿ ಅಧಿಕಾರಿಗಳನ್ನು ಹಾಗೂ ಜನ ಸಾಮಾನ್ಯರನ್ನು ಬೆದರಿಸಿ ವಸೂಲಿ ಮಾಡುತ್ತಿದ್ದ ವಂಚಕರು ಕೊನೆಗೂ ಪೊಲೀಸರ ಬಲೆಗೆ ಬಿದಿದ್ದಾರೆ. ಈ ಜಾಲದ ಹಿಂದಿರುವ ದೊಡ್ಡ ಕಿಂಗ್ ಪಿನ್‌ಗಳನ್ನು ಶೀಘ್ರದಲ್ಲಿ ಮಟ್ಟ ಹಾಕುವ ಮೂಲಕ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಪೊಲೀಸರು ನೋಡಿಕೊಳ್ಳಬೇಕಿದೆ. 
 

Latest Videos
Follow Us:
Download App:
  • android
  • ios