ಬೆಂಗಳೂರು: ಸಾಲ ತೀರಿಸಲು ಒಂಟಿ ವೃದ್ಧೆ ಹತ್ಯೆಗೈದ ಪ್ಲಂಬರ್...!
ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದ್ದ ವೃದ್ಧೆ ಕೊಲೆ ಕೇಸ್ ಭೇದಿಸಿದ ಪೊಲೀಸರು, ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದಿದ್ದ ಹಂತಕರು, ಕೈಕಾಲು ಕಟ್ಟಿಬಾಯಿಗೆ ಬಟ್ಟೆತುರುಕಿ ಚಿನ್ನಾಭರಣ ದೋಚಿ ಪರಾರಿ, ಉಸಿರುಗಟ್ಟಿದ್ದರಿಂದ ವೃದ್ಧೆ ಸಾವು, ಪ್ಲಂಬರ್ ಸೇರಿ ಮೂವರ ಸೆರೆ
ಬೆಂಗಳೂರು(ಜೂ.03): ಇತ್ತೀಚೆಗೆ ಒಂಟಿ ವೃದ್ಧೆಯ ಕೈ-ಕಾಲು ಕಟ್ಟಿಬಾಯಿಗೆ ಬಟ್ಟೆತುರುಕಿ ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಪ್ಲಂಬರ್ ಸೇರಿ ಮೂವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಸಿದ್ದರಾಜು(34), ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲು ನಿವಾಸಿ ಅಂಜನಮೂರ್ತಿ(33) ಹಾಗೂ ಲಗ್ಗೆರೆ ಎಲ್.ಜಿ.ರಾಮಣ್ಣ ಬಡಾವಣೆ ನಿವಾಸಿ ಆರ್.ಅಶೋಕ್(40) ಬಂಧಿತರು. ಆರೋಪಿಗಳು ಮೇ 27ರಂದು ಸಂಜೆ ಮಹಾಲಕ್ಷ್ಮಿ ಲೇಔಟ್‌ನ ಕಮಲಾ ಎನ್.ರಾವ್(82) ಎಂಬ ವೃದ್ಧೆಯ ಮನೆಗೆ ನುಗ್ಗಿ ಬಟ್ಟೆಯಿಂದ ಆಕೆಯ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆತುರುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ಮೈಮೇಲಿದ್ದ 40 ಗ್ರಾಂ ತೂಕದ ಎರಡು ಚಿನ್ನದ ಸರಗಳು ಹಾಗೂ 2 ಚಿನ್ನದ ಬಳೆಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಮೃತಳ ಪುತ್ರ ಗುರುಪ್ರಸಾದ್ ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಡಿ.ಎಲ್.ರಾಜು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ
ಸಾಲ ತೀರಿಸಲು ದುಷ್ಕೃತ್ಯ:
ಬಂಧಿತ ಆರೋಪಿಗಳ ಪೈಕಿ ಸಿದ್ದರಾಜು ಕಾರ್ಮಿಕ, ಅಂಜನಮೂರ್ತಿ ಆಟೋ ಚಾಲಕ ಹಾಗೂ ಆರ್.ಅಶೋಕ್ ಪ್ಲಂಬರ್ ಕೆಲಸ ಮಾಡುತ್ತಾನೆ. ಮೂವರು ಹಲವು ವರ್ಷಗಳಿಂದ ಪರಸ್ಪರ ಪರಿಚಿತರು. ಆರೋಪಿಗಳ ಪೈಕಿ ಸಿದ್ದರಾಜು ಇಸ್ಪೀಟ್, ಐಪಿಎಲ್ ಬೆಟ್ಟಿಂಗ್ ಸೇರಿದಂತೆ ದುಶ್ಚಟಗಳ ದಾಸನಾಗಿದ್ದಾನೆ. ಮೂವರೂ ಆರೋಪಿಗಳು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಒಂಟಿ ಮಹಿಳೆಯರು ಇರುವ ಮನೆಗೆ ನುಗ್ಗಿ ದರೋಡೆ ಮಾಡಿ ಸಾಲ ತೀರಿಸಲು ಚರ್ಚಿಸಿದ್ದರು. ಈ ವೇಳೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧೆ ಕಮಲಾ ಬಗ್ಗೆ ಸಿದ್ದರಾಜು ಮತ್ತು ಅಂಜನಮೂರ್ತಿಗೆ ಆರೋಪಿ ಅಶೋಕ ಮಾಹಿತಿ ನೀಡಿದ್ದ. ಅದರಂತೆ ಮೂವರು ಮೇ 27ರಂದು ತಮ್ಮ ಯೋಜನೆ ಕಾರ್ಯಗತಗೊಳಿಸಲು ಯಶಸ್ವಿಯಾಗಿದ್ದರು.
ಮೂರು ತಿಂಗಳ ಹಿಂದೆ ಟ್ಯಾಪ್ ಅಳವಡಿಸಿದ್ದ
ಆರೋಪಿ ಪ್ಲಂಬರ್ ಅಶೋಕ ಮೂರು ತಿಂಗಳ ಹಿಂದೆ ವೃದ್ಧೆ ಕಮಲಾ ಅವರ ಮನೆಗೆ ಬಂದು ಮೂರು ಕೊಳಾಯಿ ಅಳವಡಿಸಿದ್ದ. ಈ ವೇಳೆ ಮನೆಯಲ್ಲಿ ವೃದ್ಧೆ ಒಬ್ಬರೇ ನೆಲೆಸಿರುವ ಬಗ್ಗೆ ತಿಳಿದುಕೊಂಡಿದ್ದ. ಅಂತೆಯೇ ಆಕೆಯ ಮೈ ಮೇಲೆ ಚಿನ್ನಾರಭಣ ಇರುವುದನ್ನು ಗಮನಿಸಿದ್ದ. ಬಳಿಕ ಮೂವರು ಸ್ನೇಹಿತರು ಸಾಲ ತೀರಿಸಲು ದಾರಿ ಹುಡುಕುವಾಗ ಒಂಟಿ ಮಹಿಳೆ ಮನೆಯಲ್ಲಿ ದರೋಡೆ ಮಾಡಲು ನಿರ್ಧರಿಸಿದ್ದರು. ಆಗ ವೃದ್ಧೆ ಕಮಲಾ ಬಗ್ಗೆ ಅಶೋಕ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಅದರಂತೆ ಮೂವರು ಸೇರಿಕೊಂಡು ಆಕೆಯ ಮನೆಯ ದರೋಡೆಗೆ ಸಂಚು ರೂಪಿಸಿದ್ದರು.
ಕಾರಿನ ಶೆಡ್ ಬಾಡಿಗೆಗೆ ಕೇಳುವ ನೆಪದಲ್ಲಿ ಎಂಟ್ರಿ
ಆರೋಪಿಗಳು ವೃದ್ಧೆಯ ಮನೆಯಲ್ಲಿ ದರೋಡೆ ಮಾಡುವ ಮುನ್ನ ಎರಡು-ಮೂರು ದಿನ ಆಕೆಯ ಮನೆ ಬಳಿ ಓಡಾಡಿದ್ದರು. ವೃದ್ಧೆಯ ಮನೆಗೆ ಯಾರೆಲ್ಲಾ ಬಂದು ಹೋಗುತ್ತಾರೆ. ವೃದ್ಧೆ ಯಾವ ಸಮಯದಲ್ಲಿ ಒಂಟಿಯಾಗಿ ಇರುತ್ತಾರೆ ಎಂಬುದನ್ನು ನೋಡಿಕೊಂಡಿದ್ದರು. ಅದರಂತೆ ಮೇ 27ರಂದು ಬೆಳಗ್ಗೆ ಆರೋಪಿಗಳಾದ ಸಿದ್ದರಾಜು ಮತ್ತು ಅಂಜನಮೂರ್ತಿ ವೃದ್ಧೆಯ ಮನೆ ಬಳಿ ಬಂದು, ‘ಖಾಲಿ ಇರುವ ಕಾರು ಶೆಡ್ ಬಾಡಿಗೆ ಕೊಡುತ್ತೀರಾ? ಈ ಶೆಡ್‌ನಲ್ಲಿ ಬಿಸ್ಕೆಟ್ ಗೋದಾಮು ತೆರೆಯುತ್ತೇವೆ’ ಎಂದು ವೃದ್ಧೆ ಕಮಲಾ ಅವರನ್ನು ಕೇಳಿದ್ದರು. ಕಾರು ಶೆಡ್ ಬಾಡಿಗೆ ನೀಡಲು ಕಮಲಾ ನಿರಾಕರಿಸಿದ್ದರು. ಬಳಿಕ ಆರೋಪಿಗಳು ವಾಪಾಸ್ ಹೋಗಿದ್ದರು.
ಬರ್ತಡೇ ಪಾರ್ಟಿಗೆ ಬಂದವನ ಮರ್ಡರ್: ಅವನ ಕೊಲೆಗೆ ಕಾರಣವಾಗಿದ್ದು ಯುಗಾದಿ ಹಬ್ಬ..!
ಸಂಜೆ ಮತ್ತೆ ಬಂದು ಕೊಲೆ
ಅಂದು ಸಂಜೆ ಆರು ಗಂಟೆಗೆ ಮತ್ತೆ ಕಮಲಾ ಅವರ ಮನೆ ಬಳಿ ಬಂದಿರುವ ಆರೋಪಿಗಳು, ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಈ ವೇಳೆ ವೃದ್ಧೆ ಬೆಳಗ್ಗೆಯಷ್ಟೇ ಇವರನ್ನು ನೋಡಿದ್ದರಿಂದ ಬಾಗಿಲು ತೆರೆದು ಏನೆಂದು ಕೇಳಿದ್ದಾರೆ. ಆಗ ಆರೋಪಿಗಳು ಕ್ಷಣವೂ ಯೋಚಿಸದೆ ಕಮಲಾ ಅವರನ್ನು ಮನೆಯ ಒಳಗೆ ತಳ್ಳಿ ಆಕೆಯ ಸೀರೆಯಿಂದ ಕೈ-ಕಾಲು ಕಟ್ಟುತ್ತಾರೆ. ಬಾಯಿಗೆ ಬಟ್ಟೆತುರುಕಿದ್ದಾರೆ. ಬಳಿಕ ಆಕೆಯ ಮೈ ಮೇಲಿದ್ದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು. ಬಾಯಿಗೆ ಬಟ್ಟೆತುರುಕಿದ್ದರಿಂದ ಉಸಿರುಗಟ್ಟಿವೃದ್ಧೆ ಕಮಲಾ ಮೃತಪಟ್ಟಿದ್ದರು. ಸಂಜೆ ಏಳು ಗಂಟೆಯಾದರೂ ಮನೆಯೊಳಗೆ ಲೈಟ್ ಹಾಕದ್ದನ್ನು ಗಮನಿಸಿದ ನೆರೆಮನೆಯ ಮಹಿಳೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮರಾ ಸುಳಿವು ಆಧರಿಸಿ ಸೆರೆ
ತನಿಖೆ ವೇಳೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ವೃದ್ಧೆ ಕಮಲಾ ಅವರ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡಿದವರ ಬಗ್ಗೆ ನಿಗಾವಹಿಸಿದ್ದರು. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ತನಿಖೆಗೆ ಇಳಿದಾಗ ಆರೋಪಿಗಳು ಮೈಸೂರಿನಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ವಿಶೇಷ ತಂಡವೊಂದು ಮೈಸೂರಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಸಾಲ ತೀರಿಸಲು ವೃದ್ಧೆಯನ್ನು ಕೊಲೆಗೈದು ದರೋಡೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 8 ದಿನ ಕಸ್ಟಡಿಗೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.