ರಾಜಧಾನಿಯಲ್ಲಿ ಅಫೀಮು (ಪಾಪಿ ಸ್ಟ್ರಾ) ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಕಳೀಪುರ ನಿವಾಸಿ ಗುಲ್ಮಾರ್‌ ಸಿಂಗ್‌ ಬಂಧಿತ.

ಬೆಂಗಳೂರು (ಜು.07): ರಾಜಧಾನಿಯಲ್ಲಿ ಅಫೀಮು (ಪಾಪಿ ಸ್ಟ್ರಾ) ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಕಳೀಪುರ ನಿವಾಸಿ ಗುಲ್ಮಾರ್‌ ಸಿಂಗ್‌ ಬಂಧಿತನಾಗಿದ್ದು, ಆರೋಪಿಯಿಂದ 60 ಲಕ್ಷ ಮೌಲ್ಯದ 55 ಕೇಜಿ ಅಫೀಮು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನದಿಂದ ಕೊರಿಯರ್‌ನಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಇನ್‌ಸ್ಪೆಕ್ಟರ್‌ ಮಿರ್ಜಾ ಆಲಿ ನೇತೃತ್ವದ ತಂಡವು ಮಾಲೀನ ಸಮೇತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್ಸಿನಲ್ಲಿ ಡ್ರಗ್ಸ್‌ ಕೊರಿಯರ್‌: ಹಲವು ವರ್ಷಗಳ ಹಿಂದೆ ವ್ಯಾಪಾರ ಸಂಬಂಧ ನಗರಕ್ಕೆ ಬಂದಿದ್ದ ರಾಜಸ್ಥಾನ ಮೂಲದ ಗುಲ್ಮಾರ್‌ ಸಿಂಗ್‌, ಕೆ.ಆರ್‌.ಮಾರ್ಕೆಟ್‌ ಸಮೀಪ ಪ್ಲಾಸ್ಟಿಕ್‌ ಮಾರಾಟ ಮಳಿಗೆ ಇಟ್ಟುಕೊಂಡಿದ್ದ. ಕೆಲ ತಿಂಗಳಿಂದ ಸುಲಭವಾಗಿ ಹಣ ಸಂಪಾದನೆಗೆ ಆತ ಅಡ್ಡ ಮಾರ್ಗ ತುಳಿದಿದ್ದು, ತನ್ನೂರಿನ ಡ್ರಗ್ಸ್‌ ಪೆಡ್ಲರ್‌ಗಳ ಮೂಲಕ ಕಡಿಮೆ ಬೆಲೆಗೆ ಅಫೀಮು ಖರೀದಿಸಿ ನಗರದಲ್ಲಿ ದುಬಾರಿ ಬೆಲೆ ಮಾರಾಟ ಮಾಡುತ್ತಿದ್ದ. ಬಸ್ಸಿನಲ್ಲಿ ಕೊರಿಯರ್‌ ಮೂಲಕ ಅಫೀಮು ಅನ್ನು ಆರೋಪಿ ಸಾಗಾಣಿಕೆ ಮಾಡುತ್ತಿದ್ದ. ಇತ್ತೀಚೆಗೆ ಗುಲ್ಮಾರ್‌ ಸಿಂಗ್‌ನ ಅಫೀಮು ದಂಧೆ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಆತನ ಬೆನ್ನುಹತ್ತಿದ್ದಾಗ ಆರೋಪಿ ಬಂಧಿತನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ: ವಜ್ರ, ಹಣಕ್ಕೆ ಬೇಡಿಕೆ

ಪಾಪಿ ಸ್ಟ್ರಾ: ರಾಜಸ್ಥಾನ ರಾಜ್ಯದಲ್ಲಿ ಅತೀ ಹೆಚ್ಚು ಅಫೀಮು ಬೆಳೆಯಲಾಗುತ್ತದೆ. ಪಾಪಿ ಸ್ಟ್ರಾ ಎಂಬುದು ಅಫೀಮು ಗಿಡಗಳಿಂದ ತಯಾರಿಸಲಾದ ಮತ್ತೇರಿಸುವ ಮಾದಕ ವಸ್ತು. ಹಸಿ ಅಫೀಮು ಗಿಡಗಳಿಂದ ರಸವನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ. ಅದು ಒಣಗಿ ಗಟ್ಟಿಯಾದ ಬಳಿಕ ರಾತ್ರಿಯಿಡೀ ನೀರಿನಲ್ಲಿ ನೆನೆಸಿದಾಗ ಅಫೀಮು ಕರಗಿ ದ್ರವರೂಪ ಪಡೆಯುತ್ತದೆ. ಹೀಗೆ ತಯಾರಿಸಲಾದ ಮಾದಕ ವಸ್ತುವಿಗೆ ‘ಪಾಪಿ ಸ್ಟ್ರಾ’ ಎಂದು ಕರೆಯಲಾಗುತ್ತದೆ. ಇದನ್ನು ಬಾಟಲ್‌ಗಳಲ್ಲಿ ತುಂಬಿ ಪೆಡ್ಲರ್‌ಗಳು ಮಾರುತ್ತಿದ್ದರು. ಹೈಫೈ ಪಾರ್ಟಿಗಳು ಹಾಗೂ ಅದ್ಧೂರಿ ಕಾರ್ಯಕ್ರಮಗಳಲ್ಲಿ ರಸ್ನಾ ಸೇರಿದಂತೆ ತಂಪು ಪಾನೀಯಗಳ ಜತೆ ಈ ಡ್ರಗ್ಸ್‌ ಅನ್ನು ಮಿಶ್ರಣ ಮಾಡಿ ಸೇವಿಸುತ್ತಾರೆ. ಒಂದು ಲೀಟರ್‌ ತಂಪು ಪಾನೀಯಕ್ಕೆ ಅಲ್ಪ ಪ್ರಮಾಣದಲ್ಲಿ ಪಾಪಿ ಸ್ಟ್ರಾ ಮಿಶ್ರಣ ಮಾಡಿದರೆ ಹೆಚ್ಚಿನ ಮತ್ತೇರಿಸುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

ಪತ್ನಿ ಬಗ್ಗೆ ಅವಾಚ್ಯ ಮಾತು: ಅಣ್ಣನನ್ನೇ ರಾಡ್‌ನಿಂದ ಹೊಡೆದು ಕೊಂದ ತಮ್ಮ

ರಾಜಸ್ಥಾನದಲ್ಲಿ ಪಾಪಿ ಸ್ಟ್ರಾ ಬಳಕೆ: ರಾಜಸ್ಥಾನ ರಾಜ್ಯದಲ್ಲಿ ಪಾಪಿ ಸ್ಟ್ರಾವನ್ನು ಅತೀ ಹೆಚ್ಚು ಬಳಸಲಾಗುತ್ತದೆ. ಆ ರಾಜ್ಯದಲ್ಲಿ ಮದುವೆ ಹಾಗೂ ಔತಣ ಕೂಟಗಳು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಗಳ ಸ್ವಾಗತಿಸಲು ನೀಡಲು ಈ ಡ್ರಗ್ಸ್‌ ಮಿಶ್ರಣ ಮಾಡಿದ ತಂಪು ಪಾನೀಯವನ್ನು ನೀಡುವು ಸಾಮಾನ್ಯ ಸಂಗತಿಯಾಗಿದೆ. ಹೀಗಾಗಿಯೇ ನಗರದಲ್ಲಿ ನೆಲೆಸಿರುವ ರಾಜಸ್ಥಾನ ಮೂಲದ ಜನರನ್ನು ಗುರಿಯಾಗಿಸಿಕೊಂಡು ಗುಲ್ಮಾರ್‌ ಸಿಂಗ್‌ ದಂಧೆ ನಡೆಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.