Asianet Suvarna News Asianet Suvarna News

ಚಿಕ್ಕಮಗಳೂರು: ಪಿಎಫ್ಐ,ಎಸ್‌ಡಿಪಿ ಕಾರ್ಯಕರ್ತರ ವಶ: ಬಂಧಿತರಿಂದ ಹೈಡ್ರಾಮ..!

ಚಿಕ್ಕಮಗಳೂರು, ಮೂಡಿಗೆರೆ, ಕಡೂರು ತಹಸೀಲ್ದಾರ್ ಮುಂದೆ ಹಾಜರು, ಬಾಂಡ್ ಪೇಪರ್‌ನಲ್ಲಿ ಸಹಿ ಪಡೆದು ಬಿಡುಗಡೆ

PFI SDP Workers Created High Drama in Chikkamagaluru grg
Author
First Published Sep 27, 2022, 10:15 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ. 27):  ಜಿಲ್ಲೆಯ ವಿವಿಧೆಡೆ ಎಸ್ಡಿಪಿಐ, ಪಿಎಫ್ಐ ಹಾಗೂ ಸಿಎಫ್ಐ ಮುಖಂಡರುಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಅಪ್ಪ, ಮಗ ಸೇರಿದಂತೆ 24 ಜನರನ್ನು ವಶಕ್ಕೆ ಪಡೆದಿದ್ದಾರೆ. ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆ ಶಾಕ್ ನೀಡಿರುವ ಪೊಲೀಸರು, ಚಿಕ್ಕಮಗಳೂರು ನಗರ, ಕಡೂರು, ಬೀರೂರು, ಮೂಡಿಗೆರೆ ಹಾಗೂ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಚಿಕ್ಕಮಗಳೂರು ನಗರದಲ್ಲಿ ವಶಕ್ಕೆ ಪಡೆದುಕೊಂಡಿರುವ 6 ಮಂದಿ ಪೈಕಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮತ್ತು ಆತನ ಪುತ್ರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಇಮ್ರಾನ್ ಸಹ ಸೇರಿದ್ದಾರೆ. ವಶಕ್ಕೆ ಪಡೆದ ಎಲ್ಲರ ವಿರುದ್ಧವೂ ಸೇಕ್ಷನ್ 107, 151 ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದು, ಅವರನ್ನು ತಹಸೀಲ್ದಾರ್ ಮುಂದೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂಧಿತರಿಂದ ಹೈಡ್ರಾಮ

ಪೊಲೀಸರು ವಶಪಡಿಸಿಕೊಂಡ ಮುಖಂಡರನ್ನು ಸಂಜೆ ಚಿಕ್ಕಮಗಳೂರು ತಹಸೀಲ್ದಾರರ ಮುಂದೆ ಹಾಜರುಪಡಿಸಲು ಕರೆ ತಂದ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕಿಡಿ ಕಾರಿ, ಘೋಷಣೆಗಳನ್ನು ಕೂಗಿ ಹೈಡ್ರಾಮ ನಡೆಸಿದರು. ಕಾನೂನು ಚಪ್ಪಲ್‌ನಲ್ಲಿ ಹೊಡೆದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಮನೆಯಲ್ಲಿ ಮಲಗಿದ್ದವರನ್ನು ಎತ್ತಿಕೊಂಡು ಬಂದಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಕೂಗಾಡಿದ್ದರು.

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಷರತ್ತಿನ ಜಾಮೀನು 

ಚಿಕ್ಕಮಗಳೂರು ತಹಸೀಲ್ದಾರರ ಮುಂದೆ ಹಾಹರುಪಡಿಸಿದ ಕೆಲವು ಮುಖಂಡರಿಗೆ ಷರತ್ತುಬದ್ಧ ಜಾಮೀನು ನೀಡಲಾಯಿತು. ಮತ್ತೆ ಕೆಲವರಿಗೆ ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು. ಅಲ್ಲದೆ ಅಕ್ಟೋಬರ್ 28ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಲಾಯಿತು.

ಮುಂದುವರಿದ ವಿಚಾರಣೆ 

ಕಡೂರು ಹಾಗೂ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾದವರ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನಡೆದಿಲ್ಲ. ನಿನ್ನೆಯಷ್ಟೇ ಆರ್ಎಸ್ಎಸ್ ಮುಖಂಡರೊಬ್ಬರ ಕಾರಿನ ಮೇಲೆ ಜೀವ ಬೆದರಿಕೆ ಹಾಗೂ ಅಶ್ಲೀಲ ಪದಗಳನ್ನು ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೆಲ್ಲರ ವಿಚಾರಣೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
 

Follow Us:
Download App:
  • android
  • ios