ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ, ಫೋಟೊ ತೆಗೆದು ವಾಟ್ಸ್‌ಆಪ್‌ನಲ್ಲಿ ಹಂಚಿದ ಶಿಕ್ಷಕ
Crime News: ಮಧ್ಯಪ್ರದೇಶದ ಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬ ಸಮವಸ್ತ್ರ ಕೊಳೆಯಾಗಿದೆ ಎಂಬ ಕಾರಣಕ್ಕೆ ಬಟ್ಟೆ ಬಿಚ್ಚಿಸಿ ನಗ್ನವಾಗಿ ನಿಲ್ಲಿಸಿದ್ದಾನೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಶಿಕ್ಷಕನನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ.
ಭೋಪಾಲ್: ಮಧ್ಯ ಪ್ರದೇಶ ರಾಜ್ಯದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು ಐದನೇ ತರಗತಿ ವಿದ್ಯಾರ್ಥಿನಿಯ ಬಟ್ಟೆಯನ್ನು ಎಲ್ಲರೆದುರು ಬಿಚ್ಚಿಸಿದ ಶಿಕ್ಷಕ ಫೋಟೊ ತೆಗೆಯಲಾಗಿದೆ. ವಿದ್ಯಾರ್ಥಿನಿಯ ಬಟ್ಟೆ ಹಳೆಯದ್ದಾದ ಹಿನ್ನೆಲೆ ಅದು ಮಾಸಲಾಗಿತ್ತು, ಈ ಕಾರಣಕ್ಕೆ ಬಟ್ಟೆಯನ್ನು ತರಗತಿಯಲ್ಲೇ ತೆಗೆಯುವಂತೆ ಹೇಳಿ ನಂತರ ಆಕೆಯ ನಗ್ನ ಚಿತ್ರ ತೆಗೆದಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಕಾಮುಕ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ. ಭಾನುವಾರ ವಿದ್ಯಾರ್ಥಿನಿಯ ಫೋಟೊ ವಾಟ್ಸ್‌ಆಪ್‌ನಲ್ಲಿ ಹಂಚಿಕೆಯಾದ ಬೆನ್ನಲ್ಲೇ ಪೋಷಕರ ಗಮನಕ್ಕೆ ವಿಚಾರ ಬಂದಿದ್ದು, ಶಾಲಾ ಆಡಳಿತಕ್ಕೆ ದೂರು ನೀಡಲಾಗಿತ್ತು. ಶಹೊದಲ್ ಜಿಲ್ಲೆಯ ಬಾರಾ ಕಾಲಾ ಹಳ್ಳಿಯ ಶಾಲೆಯಲ್ಲಿ ಶುಕ್ರವಾರ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವೈರಲ್ ಆದ ಚಿತ್ರದಲ್ಲಿ 10 ವರ್ಷದ ಬಾಲಕಿ ಕೇವಲ ಒಳ ಉಡುಪಿನಲ್ಲಿರುವುದು ಕಾಣುತ್ತದೆ. ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ಆಕೆಯ ಸಮವಸ್ತ್ರವನ್ನು ಒಗೆಯುತ್ತಿರುವುದು ಕೂಡ ಚಿತ್ರದಲ್ಲಿ ಕಾಣುತ್ತಿದೆ. ಉಳಿದ ಶಾಲಾ ವಿದ್ಯಾರ್ಥಿನಿಯರು ಅಕ್ಕಪಕ್ಕದಲ್ಲಿ ಮೂಕವಾಗಿ ನಿಂತಿದ್ದಾರೆ.
ಹಳ್ಳಿಗರ ಪ್ರಕಾರ ವಿದ್ಯಾರ್ಥಿನಿ ಒಳ ಉಡುಪಿನಲ್ಲೇ ಸುಮಾರು ಎರಡು ಗಂಟೆಗಳ ಕಾಲ ನಿಂತುಕೊಂಡಿದ್ದಳು. ಆಕೆಯ ಬಟ್ಟೆ ಒಣಗುರವ ವರೆಗೂ ಮುಜುಗರದಿಂದ ಪಾಪದ ಮಗು ಎಲ್ಲರ ಮುಂದೆ ನಗ್ನವಾಗಿ ನಿಂತುಕೊಂಡಿತ್ತು. ಇದಾದ ನಂತರ ಫೊಟೊವನ್ನು ಬುಡಕಟ್ಟು ವ್ಯವಹಾರಗಳ ಇಲಾಖೆಯ ವಾಟ್ಸ್‌ಆಪ್ ಗ್ರೂಪಿನಲ್ಲಿ ಶಿಕ್ಷಕ ತ್ರಿಪಾಠಿ ಹಾಕಿದ್ದಾನೆ. ಮಾಡಿದ್ದು ದುಷ್ಟ ಕೆಲಸವಾದರೂ ಏನೋ ಸಾಧಿಸಿದ್ದೇನೆ ಎನ್ನುವತ ರೀತಿ ಸ್ವಚ್ಚತೆಯ ರಕ್ಷಕ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾರೆ. ಆತ ಬುಡಕಟ್ಟು ಸಮುದಾಯಗಳ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಾಗಿರುವ ಶಾಲೆಯಲ್ಲಿ ಶಿಕ್ಷಕನಾಗಿದ್ದ.
ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೊಗಳು ಹರಿದಾಡಲು ಆರಂಭವಾದ ನಂತರ ಹಳ್ಳಿಗರು ಶಿಕ್ಷಕನ ಕೆಲಸವನ್ನು ಖಂಡಿಸಿದ್ದಾರೆ. ಆತನನ್ನು ಅಮಾನತ್ತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬುಡಕಟ್ಟು ಜನಾಂಗ ಕಲ್ಯಾಣ ಇಲಾಖೆ ಸಹಾಯಕ ಆಯುಕ್ತ ಆನಂದ್ ರೈ ಸಿನ್ಹಾ ವಜಾಗೊಳಿಸಿ ಆದೇಶಿಸಿದ್ದಾರೆ. ಅವರ ಪ್ರಕಾರ ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಕಳೆದ ಶನಿವಾರವೇ ಶಿಕ್ಷಕನನ್ನು ವಜಾಗೊಳಿಸಲಾಗಿದೆ. ವಿದ್ಯಾರ್ಥಿನಿಯ ಬಟ್ಟೆ ಕೊಳೆಯಾಗಿದೆ ಎಂಬುದನ್ನು ಗಮನಿಸಿದ ನಂತರ ಬಟ್ಟೆ ಬಿಚ್ಚಿಸಿ ಸಮವಸ್ತ್ರ ತೊಳೆದಿದ್ದಾನೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಲಾಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರೀಡೆಯಲ್ಲಿ ಮಿಂಚಲು ವಿದ್ಯಾರ್ಥಿನಿಯರಿಗೆ ಸಹಾಯ: ಲೈಂಗಿಕ ಸುಖಕ್ಕಾಗಿ ಬೇಡಿಕೆ ಇಟ್ಟ ಕಾಮುಕ ಶಿಕ್ಷಕ
ಛತ್ತಿಸ್‌ಗಢದಲ್ಲಿ ನಡೆದಿತ್ತು ಇಂತದ್ದೇ ಕೃತ್ಯ:
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಿಂಚಲು ಸಹಾಯ ಮಾಡಿದ್ದಕ್ಕಾಗಿ ವಿದ್ಯಾರ್ಥಿಗಳಿಂದ ಲೈಂಗಿಕ ಸುಖಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಛತ್ತೀಸ್‌ಗಢದ ಬಲೋದ್ ಜಿಲ್ಲಯಲ್ಲಿ ಈ ಆಘಾತಕಾರಿ ಘಟನೆ ವರದಿಯಾಗಿದ್ದು, ಇದೀಗ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದೆ. ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶಿಕ್ಷಕ ಅಂತರ್ ಶಾಲಾ ಆಟಗಳಲ್ಲಿ ಖೋ-ಖೋ ಮತ್ತು ಕಬಡ್ಡಿ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನು ಗೆಲ್ಲುವಲ್ಲಿ ತನ್ನ ಶಾಲೆಗೆ ಮಾರ್ಗದರ್ಶನ ನೀಡಿದ್ದ ಎನ್ನಲಾಗಿದೆ.
ಆರೋಪಿ ಸಹಾಯಕ ಶಿಕ್ಷಕನನ್ನು 47 ವರ್ಷದ ದೀಪಕ್ ಕುಮಾರ್ ಸೋನಿ ಎಂದು ಗುರುತಿಸಲಾಗಿದೆ. ಶಿಕ್ಷಕ ಬಲೋಡ್ ಜಿಲ್ಲೆಯ ಜುಂಗೇರಾ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ವರದಿಯ ಪ್ರಕಾರ ಆರೋಪಿಯು ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಖೋ-ಖೋ ಮತ್ತು ಕಬಡ್ಡಿ ತರಬೇತಿಯನ್ನೂ ನೀಡಿದ್ದಾನೆ.
ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯರಿಗೆ ದೀಪಕ್ ಕುಮಾರ್ ಸೋನಿ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ತಮ್ಮ ಶಿಕ್ಷಕರು ಅನುಚಿತವಾಗಿ ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಐವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಕಾಮುಕ ಶಿಕ್ಷಕನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಕೇಸ್
ಹುಡುಗಿಯರು ಶಿಕ್ಷಕನ ವರ್ತನೆಯನ್ನು ವಿರೋಧಿಸಿದಾಗ, ಶಿಕ್ಷಕ ಆಟಗಳಲ್ಲಿ ಪದಕಗಳನ್ನು ಗೆಲ್ಲಲು ಸಹಾಯ ಮಾಡುವುದರಿಂದ ಆತನ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.