ಬೆಂಗಳೂರು: ರೌಡಿಯ ಮಚ್ಚಿನ ಹಿಡಿಕೆ ಏಟಿಗೆ ವ್ಯಕ್ತಿ ಸಾವು
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಮುಖ ಆರೋಪಿ ರಾಜೇಶ್, ಮನೋಜ್ ಹಾಗೂ ಜಗದೀಶ್ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರು(ಜೂ.17): ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರನ್ನು ರಸ್ತೆಯಲ್ಲಿ ತಡೆದ ನಾಲ್ವರು ದುಷ್ಕರ್ಮಿಗಳ ಗುಂಪೊಂದು, ವಿನಾಕಾರಣ ಮಚ್ಚಿನ ಹಿಡಿಕೆಯಿಂದ ತಲೆಗೆ ಹಲ್ಲೆ ಮಾಡಿದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಿನಾಪುರ ನಿವಾಸಿ ಇರುದೆ ರಾಜ್(22) ಕೊಲೆಯಾದ ದುರ್ದೈವಿ. ವಿಜಯ್(27) ಹಲ್ಲೆಯಿಂದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೂ.14ರಂದು ರಾತ್ರಿ 11ರ ಸುಮಾರಿಗೆ ವಿಜಿನಾಪುರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಮುಖ ಆರೋಪಿ ರಾಜೇಶ್, ಮನೋಜ್ ಹಾಗೂ ಜಗದೀಶ್ ತಲೆಮರೆಸಿಕೊಂಡಿದ್ದಾರೆ.
ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ
ಮಚ್ಚಿನ ಹಿಡಿಕೆಯಿಂದ ಹಲ್ಲೆ:
ಕೆಜಿಎಫ್ ಮೂಲದ ವಿಜಯ್ ಮತ್ತು ಇರುದೆ ರಾಜ್ ಸಂಬಂಧದಲ್ಲಿ ಚಿಕ್ಕಪ್ಪ-ಮಗ. ಇಬ್ಬರೂ ವೃತ್ತಿಯಲ್ಲಿ ಪೇಂಟರ್‌ಗಳಾಗಿದ್ದು, ವಿಜಿನಾಪುರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಜೂ.14ರಂದು ರಾತ್ರಿ 11ರ ಸುಮಾರಿಗೆ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಮನೆ 200 ಮೀಟರ್ ದೂರದಲ್ಲಿ ಇರುವಾಗ ರಾಜೇಶ್ ಹಾಗೂ ಆತನ ಸಹಚರರು ದ್ವಿಚಕ್ರ ವಾಹನ ತಡೆದು, ‘ಇಷ್ಟುಹೊತ್ತಿಗೆ ಎಲ್ಲಿಗೆ ಹೋಗುತ್ತಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇರುದೆ ರಾಜ್ ‘ಅಣ್ಣಾ ಮನೆಗೆ ಹೋಗುತ್ತಿದ್ದೇವೆ’ ಎಂದು ಹೇಳಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ರಾಜೇಶ್, ಕೈಯಲ್ಲಿದ್ದ ಮಚ್ಚನ್ನು ಉಲ್ಟಾತಿರುಗಿಸಿ ಹಿಡಿಕೆಯಿಂದ ಇರುದೆ ರಾಜ್ ಹಾಗೂ ವಿಜಯ್ ತಲೆಗೆ ಹೊಡೆದಿದ್ದಾನೆ. ‘ಬೇಗ ಮನೆಗೆ ಹೋಗ್ರೋ’ ಎಂದು ಆವಾಜ್ ಹಾಕಿ ಕಳುಹಿಸಿದ್ದಾನೆ.
ಮಲಗಿದ್ದಲ್ಲೇ ಸಾವು:
ಮನೆಗೆ ಬಂದ ಇರುದೆ ರಾಜ್ ಮತ್ತು ವಿಜಯ್ ಹಲ್ಲೆಯಿಂದ ತಲೆಯಲ್ಲಿ ರಕ್ತಸ್ರಾವ ಆಗುತ್ತಿರುವುದನ್ನು ಗಮನಿಸಿದ್ದಾರೆ. ಗಾಯಕ್ಕೆ ಪೌಡರ್ ಹಾಕಿ ಎಂದಿನಂತೆ ಊಟ ಮಾಡಿ ನಿದ್ದೆಗೆ ಜಾರಿದ್ದಾರೆ. ಮಾರನೇ ದಿನ ಇರುದೆ ರಾಜ್ ನಿದ್ದೆಯಿಂದ ಎಚ್ಚರಗೊಂಡಿಲ್ಲ. ಈ ವೇಳೆ ವಿಜಯ್ ಎಬ್ಬಿಸಲು ಎಷ್ಟೇ ಪ್ರಯತ್ನಪಟ್ಟರೂ ಎಚ್ಚರವಾಗಿಲ್ಲ. ಮೂಗಿನ ಬಳಿ ಕೈ ಹಿಡಿದು ನೋಡಿದಾಗ ಉಸಿರಾಟ ನಿಂತಿರುವುದು ಗೊತ್ತಾಗಿದೆ. ಅಂದರೆ, ಇರುದೆ ರಾಜ್ ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ವಿಜಯ್ ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಮೂವರು ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.